ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಪ್ರಥಮ ಮಹಿಳಾ ಸಮಾವೇಶ: ಆತ್ಮಾವಲೋಕನ ಅಗತ್ಯ- ಸಾಣೇಹಳ್ಳಿ ಶ್ರೀ

Published 28 ಜನವರಿ 2024, 9:13 IST
Last Updated 28 ಜನವರಿ 2024, 9:13 IST
ಅಕ್ಷರ ಗಾತ್ರ

ಅಕ್ಕ ಮಹಾದೇವಿ ವೇದಿಕೆ(ಬೆಳಗಾವಿ): ‘ಪ್ರಸ್ತುತ ದಿನಗಳಲ್ಲಿ ಲಿಂಗಾಯತ ಸಮುದಾಯದ ಮಠಾಧೀಶರು, ಅಧಿಕಾರಿಗಳು, ರಾಜಕಾರಣಿಗಳು ಹಾಗೂ ವಚನಗಳನ್ನು ಹಾಡುವವರು ಲಿಂಗಾಯತ ನಿಜಾಚರಣೆಯಿಂದ ದೂರ ಸರಿಯುತ್ತಿರುವುದು ಕಳವಳಕಾರಿ ಸಂಗತಿ. ಇಂದು ನಾವೆಲ್ಲರೂ ಬಸವ ತತ್ವಕ್ಕೆ ಅನುಗುಣವಾಗಿ ಬದುಕು ರೂಪಿಸಿಕೊಂಡಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಿಳಾ ಸಮಾವೇಶದಲ್ಲಿ ‘ಲಿಂಗಾಯತ ನಿಜಾಚರಣೆಯಲ್ಲಿ ಅನುಷ್ಠಾನಗೊಳಿಸುವಲ್ಲಿ ಮಹಿಳೆಯರ ಪಾತ್ರ’ ಕುರಿತು ಗೋಷ್ಠಿಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಲೋಕದ ಅವಲೋಕನ ಮಾಡುವ ನಾವು, ನಮ್ಮನ್ನೇ ಮರೆಯುತ್ತಿದ್ದೇವೆ. ಯಾರೂ ತಮ್ಮ ಹುಟ್ಟು ಮತ್ತು ಜಾತಿಯಿಂದ ಲಿಂಗಾಯತರಾಗಲು ಸಾಧ್ಯವಿಲ್ಲ. ಆದರೆ, ಬಸವ ತತ್ವಗಳ ಅನುಷ್ಠಾನದಿಂದ ಲಿಂಗಾಯತರಾಗಬಹುದು. ಈ ದಿಸೆಯಲ್ಲಿ ಎಲ್ಲರೂ ಹೆಜ್ಜೆ ಇರಿಸಬೇಕು. ನಮ್ಮ ನಡೆ–ನುಡಿಯಲ್ಲಿ ಸಾಮ್ಯತೆ ಇರಬೇಕು. ಇಷ್ಟಲಿಂಗ ನಿಷ್ಠೆ, ಕಾಯಕ ಪ್ರಜ್ಞೆ ಮತ್ತು ದಾಸೋಹ ಸಿದ್ಧಾಂತ ರೂಢಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಲಿಂಗಾಯತ ಧರ್ಮದ ನಿಜವಾದ ವಾರಸುದಾರರಾದ ಮಹಿಳೆಯರು ದೇವರ ಬಗೆಗಿನ ಭಯದಿಂದ ಹೊರಬರಬೇಕು. ಲಿಂಗಾಯತ ಎಂಬುದು ಕೇವಲ ವಿಚಾರವಲ್ಲ. ಇದು ಆಚಾರ–ವಿಚಾರಗಳ ಸಂಗಮವಾಗಿದೆ. ಲಿಂಗಾಯತರು ಮೌಢ್ಯ ಆಚರಣೆಗಳಿಂದ ದೂರ ಸರಿದು, ವೈಜ್ಞಾನಿಕ ತಳಹದಿಯ ಮೇಲೆ ಬದುಕು ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಉಪನ್ಯಾಸ ನೀಡಿದ ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ, ‘ಇಂದು ಭವಿಷ್ಯ ಕೇಳಲು ಮತ್ತೊಬ್ಬರ ಬಳಿ ಕೈನೀಡಿ, ಹಣ ಕಳೆದುಕೊಳ್ಳುತ್ತಿರುವವರು ನಿಜವಾದ ಲಿಂಗಾಯತರಲ್ಲ. ಇಂಥ ಆಚರಣೆಗಳಿಂದ ವಿಮುಖರಾಗಬೇಕು. ಕಲ್ಲು, ಮಣ್ಣು ಮತ್ತು ಮರಗಳಲ್ಲಿ ಭಗವಂತನಿಲ್ಲ. ಆತ ನಮ್ಮ ಕೈಯಲ್ಲಿನ ಲಿಂಗದಲ್ಲೇ ಇದ್ದಾನೆ. ಹಾಗಾಗಿ ಭಕ್ತಿಯಿಂದ ಲಿಂಗಪೂಜೆ ಮಾಡಿ ಭಗವಂತನ ಒಲುಮೆಗೆ ಪಾತ್ರವಾಗಬೇಕು. ಏಕದೇವೋಪಾಸನೆಗೆ ಒತ್ತು ನೀಡಬೇಕು’ ಎಂದು ಕರೆ ನೀಡಿದರು.

ಜಾಗತಿಕ ಲಿಂಗಾಯತ ಮಹಾಸಭೆಯ ಧಾರವಾಡ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸವಿತಕ್ಕ ನಡಕಟ್ಟಿ, ‘ಮಹಿಳೆಯರು ಕುಟುಂಬದ ನಿರ್ವಹಣೆ, ನೆಮ್ಮದಿಗಾಗಿ ಭಗವಂತನ ಮೊರೆ ಹೋಗುತ್ತಾರೆಯೇ ಹೊರತು, ಸ್ವಾರ್ಥಕ್ಕಾಗಿ ಅಲ್ಲ. ಜಾನಪದ ಕವಿಯೊಬ್ಬ ಹೇಳುವಂತೆ, ಮಹಿಳೆಯರು ನಮ್ಮ ಬಳಿ ಮಲ್ಲಿಗೆ ಹೂವು ಇರುವಾಗ ಮುಳ್ಳನ್ನು ಮುಡಿಯಬಾರದು. ಕಲ್ಯಾಣದ ಬಸವಣ್ಣನಿರುವಾಗ ಕಲ್ಲು ದೇವರಿಗೆ ಕೈ ಮುಗಿಯಬಾರದು’ ಎಂದು ಹೇಳಿದರು.

ಸೊಲ್ಲಾಪುರದ ಮುಗಳಿ ಬಸವಮಂಟಪದ ಮಹಾನಂದಾ ತಾಯಿ ಅಧ್ಯಕ್ಷತೆ ವಹಿಸಿದ್ದರು. ದಾಕ್ಷಾಯಿಣಿ ಕೋಳಿವಾಡ, ರಾಜೇಶ್ವರಿ ಶಿವಾನಂದ, ಕಲ್ಪನಾ ಉಮೇಶ, ಸರೋಜ ನಂದರಗಿ, ನಂದಿನಿ ಪಾಟೀಲ ಉಪಸ್ಥಿತರಿದ್ದರು. ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ವಿಜಯಲಕ್ಷ್ಮಿ ಪುಟ್ಟಿ ಸ್ವಾಗತಿಸಿದರು. ಸಂಗೀತ ಕುಂಬಾರ ವಂದಿಸಿದರು. ಮೇಘಾ ಪಾಟೀಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT