ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಚರ್ಮಗಂಟು ಸೋಂಕು: ಸದ್ಯಕ್ಕಿಲ್ಲ ಆತಂಕ

Published 25 ಸೆಪ್ಟೆಂಬರ್ 2023, 4:46 IST
Last Updated 25 ಸೆಪ್ಟೆಂಬರ್ 2023, 4:46 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ, ಗೋಕಾಕ, ಮೂಡಲಗಿ, ಬೆಳಗಾವಿ ಮತ್ತು ರಾಯಬಾಗ ತಾಲ್ಲೂಕಿನ ಜಾನುವಾರುಗಳಲ್ಲಿ ಚರ್ಮಗಂಟು (ಲಂಪಿಸ್ಕಿನ್) ಮತ್ತೆ ಕಾಣಿಸಿಕೊಂಡಿದೆ. ಇದು ಎರಡನೇ ಅಲೆಯಾದ್ದರಿಂದ ಹೆಚ್ಚು ಪ್ರಭಾವ ಬೀರುತ್ತಿಲ್ಲ. ಜಾನುವಾರುಗಳ ಸಾವು ಸಂಭವಿಸಿದ ಅತಿವಿರಳ. ರೈತರು ಎದೆಗುಂದಬಾರದು ಎಂದು ಪಶುಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆ ಮೂಲಗಳು ಖಚಿತಪಡಿಸಿವೆ.

ಕಳೆದ ವರ್ಷ 5,000ಕ್ಕೂ ಹೆಚ್ಚು ಜಾನುವಾರುಗಳು ಈ ರೋಗದ ಕಾರಣ ಅಸುನೀಗಿವೆ. ಹೀಗಾಗಿ, ಸಾಂಕ್ರಾಮಿಕ ಕಾಯಿಲೆ ಮತ್ತೆ ರೈತರನ್ನು ಚಿಂತೆಗೆ ತಳ್ಳಿದೆ.

ಜಿಲ್ಲೆಯಲ್ಲಿ ಸೆ. 22ರವರೆಗೆ 120ಕ್ಕೂ ಹೆಚ್ಚು ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿದೆ. ಇದರಲ್ಲಿ 86 ಸೋಂಕಿನಿಂದ ಗುಣಮುಖವಾಗಿವೆ. ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ಬರುತ್ತಿದೆ ಎಂದು ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ರಾಜೀವ ಕೂಲೇರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕ್ಯಾಪ್ರಿನಾಕ್ಸ್‌’ ವೈರಸ್‌ನಿಂದ ಹರಡುತ್ತಿರುವ ಈ ಸೋಂಕಿಗೆ ಸದ್ಯ ಖಚಿತ ಔಷಧಿ ಅಥವಾ ಚಿಕಿತ್ಸೆ ಇಲ್ಲ. ದನಗಳಿಗೆ ಯಾವ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆಯೋ ಅದರ ನಿಯಂತ್ರಣಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ಹಸುಗಳು ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿವೆ.

ಮೈಮೇಲೆ ಗಂಟುಗಳು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಆರಂಭಿಸಬೇಕು. ಇಲ್ಲದಿದ್ದರೆ ಗಂಟು ದೊಡ್ಡದಾಗಿ ಒಡೆದು ಗಾಯವಾಗುತ್ತವೆ. ಆಗ ಮತ್ತೆ ಹುಳುಗಳು ಸೇರಿಕೊಂಡು ಚರ್ಮದ ಭಾಗ ಕೊಳೆಯುವ ಸಾಧ್ಯತೆ ಇದೆ. ಹಾಗಾಗಿ, ರೈತರು, ಜಾನುವಾರು ಸಾಕಿದವರು ಶೀಘ್ರ ಚಿಕಿತ್ಸೆ ಕೊಡಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಘೋಟ್‌ಫಾಕ್ಸ್‌ ಲಸಿಕೆ:

ಕ್ಯಾಪ್ರಿನಾಕ್ಸ್‌ ವೈರಸ್‌ ನಿಯಂತ್ರಣಕ್ಕೆ ಇನ್ನೂ ಲಸಿಕೆ ಬಂದಿಲ್ಲ. ಆದರೆ, ಕುರಿ– ಆಡುಗಳಿಗೆ ಆಗುವ ಹುಣ್ಣು ನಿಯಂತ್ರಣಕ್ಕೆ ಬಳಸುವ ‘ಘೋಟ್‌ಫಾಕ್ಸ್‌’ ಲಸಿಕೆಯನ್ನೇ ಈಗ ದನಗಳಿಗೂ ನೀಡಲಾಗುತ್ತಿದೆ.

ಯಾವುದೇ ದನಕ್ಕೆ ಸೋಂಕು ಕಾಣಿಸಿಕೊಂಡರೆ, ಅದರಿಂದ ಐದು ಕಿ.ಮೀ ದೂರದಲ್ಲಿರುವ ಇತರ ಜಾನುವಾರುಗಳಿಗೆ ಲಸಿಕೆ ಹಾಕಬೇಕು. ಹಾಗಾಗಿ, ಒಂದು ಊರಿನಲ್ಲಿ ಸೋಂಕು ಕಾಣಿಸಿಕೊಂಡ ತಕ್ಷಣ ಅದರ ಸುತ್ತಲಿನ ಊರುಗಳಿಗೆ ಈ ಲಸಿಕಾಕರಣ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ 270 ಪಶು ಆಸ್ಪತ್ರೆಗಳಿದ್ದು, ಎಲ್ಲ ಕಡೆಯೂ ಚಿಕಿತ್ಸೆಗೆ ವ್ಯವಸ್ಥೆ ಇದೆ. ಸದ್ಯ 14 ಲಕ್ಷ ದೊಡ್ಡ ಜಾನುವಾರು ಹಾಗೂ ಅಷ್ಟೇ ಪ್ರಮಾಣದ ಸಣ್ಣ ಜಾನುವಾರುಗಳಿವೆ. ಲಂಪಿಸ್ಕಿನ್‌ ಸೋಂಕು ಈವರೆಗೆ ದೊಡ್ಡ ಜಾನುವಾರುಗಳಲ್ಲಿ ಮಾತ್ರ ಕಂಡುಬಂದಿದೆ.

ಕಳೆದ ಬಾರಿ ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಜಾನುವಾರುಗಳಲ್ಲಿ ಈ ರೋಗ ಕಾಣಿಸಿಕೊಂಡಿತ್ತು. 1.75 ಲಕ್ಷ ಜಾನುವಾರುಗಳ ಆರೋಗ್ಯ ಸುಧಾರಿಸಿತ್ತು. ಜಾನುವಾರು ಸತ್ತರೆ ಮಾಲೀಕರಿಗೆ ತಲಾ ₹ 20 ಸಾವಿರ ಪರಿಹಾರ ನೀಡಲಾಗಿತ್ತು.

‘ಈಗ ಕಂಡುಬಂದಿರುವ ಚರ್ಮಗಂಟು ರೋಗವು ಮೇಲ್ನೋಟಕ್ಕೆ ಸೌಮ್ಯ ಪ್ರಮಾಣವಾಗಿದೆ. ಜಾನುವಾರುಗಳು ಚಿಕಿತ್ಸೆಗೆ ಸ್ಪಂದಿಸುತ್ತಿವೆ. ಆದರೂ ಹೆಚ್ಚಿನ ರೋಗ ಪರೀಕ್ಷೆಗಾಗಿ ನಿವೇದಿ, ಬೆಂಗಳೂರು ಸಂಸ್ಥೆಯ ವಿಜ್ಞಾನಿಗಳಿಂದ ತಪಾಸಣೆ ಕೈಗೊಳ್ಳಲಾಗುವುದು’ ಎಂದು ಡಾ.ರಾಜೀವ ಕೊಲೇರ ಹೇಳುತ್ತಾರೆ.

ಜಾತ್ರೆ, ಸಂತೆ ನಿಷೇಧ: ಚರ್ಮಗಂಟು ರೋಗವು ಇತರೆ ಪ್ರದೇಶಗಳಲ್ಲಿ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ, ಜಿಲ್ಲೆಯಾದ್ಯಂತ ನಡೆಯುವ ಜಾನುವಾರು ಸಂತೆ, ಜಾನುವಾರು ಜಾತ್ರೆ, ಜಾನುವಾರು ಪ್ರದರ್ಶನ ಹಾಗೂ ಜಾನುವಾರು ಸಾಗಾಣಿಕೆ ಮಾಡುವುದನ್ನು ನಿಷೇಧಿಸಲಾಗಿದೆ.

ನೆರವಿಗೆ ಬಾರದ ವೈದ್ಯಕೀಯ ಕಾಲೇಜು:

ಅಥಣಿ ತಾಲ್ಲೂಕಿನ ಕೊಕಟನೂರಿನಲ್ಲಿ ನಿರ್ಮಿಸಿದ ಪಶು ವೈದ್ಯಕೀಯ ಕಾಲೇಜನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ ಎರಡು ತಿಂಗಳಾಗಿದೆ. ಜಾನುವಾರು ಸಂತಾನೋತ್ಪತ್ತಿ, ರೈತರಿಗೆ ಮಾರ್ಗದರ್ಶನ ಹಾಗೂ ಸೋಂಕಿಗೆ ಲಸಿಕೆ ಕಂಡುಕೊಳ್ಳುವುದು ಮತ್ತು ಲಸಿಕಾಕರಣ... ಹೀಗೆ ವೈವಿಧ್ಯಮಯ ವೈದ್ಯಕೀಯ ಸೇವೆಗೆ ಈ ಕಾಲೇಜು ನಿರ್ಮಿಸಲಾಗಿದೆ. ಆದರೆ, ಇದೂವರೆಗೆ ಯಾವುದೇ ನೇಮಕಾತಿ ಆಗಿಲ್ಲ. ವೈದ್ಯಕೀಯ ಸಲಕರಣೆಗಳನ್ನು ನೀಡಿಲ್ಲ. ಕೇವಲ ಕಟ್ಟಡ ಮಾತ್ರ ತಲೆ ಎತ್ತಿನಿಂತಿದೆ. ಹೀಗಾಗಿ, ಪ್ರಸಕ್ತ ವರ್ಷ ಕೂಡ ಈ ಕಾಲೇಜಿನಿಂದ ಜಾನುವಾರ ರಕ್ಷಣೆಗೆ ಯಾವುದೇ ಕೊಡುಗೆ ಸಿಗುವ ಲಕ್ಷಣಗಳು ಇಲ್ಲ ಎನ್ನುವುದು ಗಡಿ ಗ್ರಾಮಗಳ ರೈತರ ಗೋಳು.Quote - ಮಹಾರಾಷ್ಟ್ರದಲ್ಲಿ ಚರ್ಮಗಂಟು ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ. ಗಡಿ ಭಾಗದ ಗ್ರಾಮಗಳಲ್ಲಿ ಶೀಘ್ರ ಲಸಿಕೆ ರವಾನೆ ಮಾಡಬೇಕು. ಸತ್ತ ದನಗಳಿಗೆ ಪರಿಹಾರ ಹೆಚ್ಚಿಸಬೇಕು ಯಮನಪ್ಪ ತವಗದ ಕೃಷಿಕ ನಿಡಸೋಸಿ

ಕಳೆದ ವರ್ಷ ಮೊದಲ ಅಲೆ ಬಂದಿದ್ದರಿಂದ ಹೆಚ್ಚು ದನ ಸತ್ತವು. ಆಗ ಲಸಿಕೆ ನೀಡಿದ್ದರಿಂದ ಈ ಬಾರಿ ಅಲೆ ತೀವ್ರವಾಗಿಲ್ಲ. ಸೋಂಕು ಹರಡುವಿಕೆಯೂ ನಿಯಂತ್ರಣದಲ್ಲಿದೆ
- ಡಾ.ರಾಜೀವ ಕೊಲೇರ ಉಪನಿರ್ದೇಶಕ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ
ಮಹಾರಾಷ್ಟ್ರದಲ್ಲಿ ಚರ್ಮಗಂಟು ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ. ಗಡಿ ಭಾಗದ ಗ್ರಾಮಗಳಲ್ಲಿ ಶೀಘ್ರ ಲಸಿಕೆ ರವಾನೆ ಮಾಡಬೇಕು. ಸತ್ತ ದನಗಳಿಗೆ ಪರಿಹಾರ ಹೆಚ್ಚಿಸಬೇಕು
– ಯಮನಪ್ಪ ತವಗದ, ಕೃಷಿಕ ನಿಡಸೋಸಿ
ಕಳೆದ ಬಾರಿ ಉಂಟಾದ ಹಾನಿಯಿಂದ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಈ ಸೋಂಕಿಗೆ ಲಸಿಕೆ ಕಂಡುಹಿಡಿಯುವ ಯತ್ನ ಮಾಡಿಲ್ಲ. ರೈತರ ಕಣ್ಣೊರೆಸುವುದೇ ಸಾಧನೆ ಎಂಬಂತೆ ಹೇಳುತ್ತಿದ್ದಾರೆ
– ವಿಜಯಲಕ್ಷ್ಮಿ ಬಾಳಿಗಿಡದ ಗೃಹಿಣಿ ಬೆಳಗಾವಿ

ಅಂಕಿ – ಅಂಶ

ಜಿಲ್ಲೆಯ ಜಾನುವಾರುಗಳು ಜಾನುವಾರು;ಸಂಖ್ಯೆ

ದನ– 549620

ಎಮ್ಮೆ– 844171

ಕುರಿ– 757679

ಮೇಕೆ– 701001

ಹಂದಿ – 22100

ಮೊಲ–1822

ನಾಯಿ–77000

ಇತರೆ–3085

ಒಟ್ಟು–2956478

ಸೋಂಕು ತಗುಲಿದರೆ ಹೀಗೆ ಮಾಡಿ

  • ಮೈ ಮೇಲೆ ಗುಳ್ಳೆಗಳು ಕಾಣಿಸಿಕೊಂಡ ದನಗಳಿಂದ ಇತರ ದನಗಳನ್ನು ಬೇರ್ಪಡಿಸಬೇಕು. * ಕೊಟ್ಟಿಗೆಯಿಂದ ಹೊರಗೆ ಕಟ್ಟಿ ಮೇವು ನೀರು ಪ್ರತ್ಯೇಕ ಹಾಕಬೇಕು.

  • ಬೇವಿನ ಎಲೆಯ ಹೊಗೆ ಹಾಕಿ ಸೊಳ್ಳೆಗಳ ಮೂಲಕ ಸೋಂಕು ಹರಡದಂತೆ ಮಾಡಬೇಕು.

  • ಈ ರೋಗಕ್ಕೆ ಸೊಳ್ಳೆಗಳೇ ವಾಹಕ. ಆದ್ದರಿಂದ ದನಗಳಿಗೆ ಸೊಳ್ಳೆ ಕಚ್ಚದಂತೆ ಮೈ ಮೇಲೆ ದಪ್ಪ ಚೀಲ ಹೊದಿಸಬೇಕು.

  • ಗುಳ್ಳೆಗಳು ಅಥವಾ ಜ್ವರ ಕಂಡ ತಕ್ಷಣ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಬೇಕು.  

  • ಚರ್ಮದ ಮೇಲಿನ ಗಾಯಗಳನ್ನು ತೊಳೆದು ಪೊಟ್ಯಾಷಿಯಂ ಪರಮಾಂಗನೇಟ್ ದ್ರಾವಣದಿಂದ ಐಯೋಡಿನ್ ದ್ರಾವಣ ಮುಲಾಮು ಹಾಗೂ ಬೇವಿನ ಎಣ್ಣೆ ಲೇಪಿಸಬೇಕು. ‌

  • ರೋಗಗಸ್ಥ ಜಾನುವಾರುಗಳಿಗೆ ಉಪಯೋಗಿಸಿದ ಎಲ್ಲ ಸಾಮಗ್ರಿಗಳನ್ನು ಸ್ವಚ್ಛಗೊಳಿಸಬೇಕು. ಹಸಿರು ಮೇವು ಪೌಷ್ಟಿಕ ಆಹಾರ ಹಾಗೂ ಲವಣ ಮಿಶ್ರಣ ನೀಡಬೇಕು.

  • ಕುಡಿಯುವ ನೀರಿನಲ್ಲಿ ಬೆಲ್ಲ ಉಪ್ಪು ಹಾಗೂ ಅಡುಗೆ ಸೋಡಾ ಹಾಕಿ ದಿನಕ್ಕೆ 5ರಿಂದ 6 ಬಾರಿ ಕುಡಿಸಬೇಕು.

ಸಾಕುವವರಿಗೆ ಬೇಡ ಭಯ
‘ಕ್ಯಾಪ್ರಿಸಾಕ್ಸ್’ ಎಂಬ ವೈರಾಣುವಿನಿಂದ ಈ ಸೋಂಕು ಬರುತ್ತದೆ. ಸದ್ಯ ಪ್ರಾಣಿಗಳಲ್ಲಿ ಹರಡಿದ ಸೋಂಕಿನ ವೈರಾಣು ಮನುಷ್ಯರಿಗೆ ಯಾವುದೇ ರೀತಿಯ ತೊಂದರೆ ಮಾಡುವುದಿಲ್ಲ. ಹಾಗಾಗಿ ದನಗಳನ್ನು ಉಪಚರಿಸುವವರು ಭಯಪಡಬೇಕಾಗಿಲ್ಲ. ಆದರೆ ಕೈಗಳಿಗೆ ಗ್ಲೌಸುಗಳನ್ನು ಹಾಕಿಕೊಂಡು ಗಾಯ ಉಪಚರಿಸಬೇಕು. ಉಪಚಾರದ ನಂತರ ಸ್ವಚ್ಛವಾಗಿ ಕೈ ತೊಳೆದುಕೊಳ್ಳಬೇಕು ಎಂಬುದು ವೈದ್ಯರ ಸಲಹೆ.

ಲಕ್ಷಣಗಳು ಏನು?

  • ದನ ಎಮ್ಮೆಗಳಲ್ಲಿ ಆದರಲ್ಲೂ ಮಿಶ್ರತಳಿ ರಾಸುಗಳಲ್ಲಿ ಕರುಗಳಲ್ಲಿ ಅತಿ ಹೆಚ್ಚಾಗಿ ಹಾಗೂ ತೀಕ್ಷ್ಣವಾಗಿ ಕಾಣಿಸಿಕೊಳ್ಳುತ್ತದೆ.

  • ಅತಿಯಾದ ಜ್ವರ ಕಣ್ಣುಗಳಿಂದ ನೀರು ಸೋರುವುದು ನಿಶ್ಶಕ್ತಿ ಕಾಲುಗಳಲ್ಲಿ ಬಾವು ಹಾಗೂ ಕುಂಟುವುದು

  • ಚರ್ಮದ ಮೇಲೆ 2ರಿಂದ 5 ಸೆ.ಮೀ.ನಷ್ಟು ಅಗಲವಿರುವ ಗುಳ್ಳೆಗಳು

  • ಹಾಲಿನ ಇಳುವರಿ ಏಕಾಏಕಿ ಕಡಿಮೆಯಾಗುವುದು. ಕೆಲಸದ ಸಾಮರ್ಥ್ಯ ಕುಂಠಿತವಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT