ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಕೆ.ಹುಬ್ಬಳ್ಳಿ | ಅವ್ಯವಹಾರದ ಗರಗಸಕ್ಕೆ ಸಿಕ್ಕ ಸಕ್ಕರೆ ಕಾರ್ಖಾನೆ

₹50 ಕೋಟಿ ಕಬಳಿಸಿದ ಆರೋಪ, ಅಧಿಕಾರಿ ವರ್ಗ– ಆಡಳಿತ ಮಂಡಳಿಗಳ ಪರಸ್ಪರ ಕೆಸರೆರೆಚಾಟ
ಎಸ್.ಬಿ.ವಿಭೂತಿಮಠ
Published : 29 ಸೆಪ್ಟೆಂಬರ್ 2024, 5:25 IST
Last Updated : 29 ಸೆಪ್ಟೆಂಬರ್ 2024, 5:25 IST
ಫಾಲೋ ಮಾಡಿ
Comments

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ₹60 ಕೋಟಿ ಅವ್ಯವಹಾರದ ತನಿಖೆಗೆ ನಿರ್ಣಯ ಕೈಗೊಳ್ಳಲಾಗಿದೆ. ಇದೇ ವಿಚಾರವಾಗಿ ರೈತರು ಕಳೆದ ವಾರ ನಿರಂತರ ಹೋರಾಟ ಮಾಡಿದರು. ಫಲವಾಗಿ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ರೈತರು ತನಿಖೆ ಮಾಡಿಸುವ ನಿರ್ಧಾರಕ್ಕೆ ಬಂದಿದ್ದಾರೆ. ದಶಕಗಳಿಂದಲೂ ರೈತರ ಜೀವನಾಡಿಯಾಗಿದ್ದ ಕಾರ್ಖಾನೆಯ ಈಗ ವಿವಾದದ ಕೇಂದ್ರವಾಗಿದೆ.

‘ಕಾರ್ಖಾನೆಯಲ್ಲಿ ನಡೆದ ಅವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ. ಕಾರ್ಖಾನೆಯ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅವರ ಬೆಂಬಲಿಗರೇ ಕಾರಣ. ಕಾರ್ಖಾನೆ ಅಭಿವೃದ್ಧಿಯಿಂದ ಮುನ್ನಡೆಸುತ್ತಾರೆಂಬ ನಂಬಿಕೆ ಅವರ ಮೇಲಿತ್ತು. ಅದು ಹುಸಿಯಾಗಿದೆ. ವಿವಿಧ ವಿಭಾಗಗಳಲ್ಲಿ ತಮಗೆ ಬೇಕಾದವರನ್ನು ನೇಮಿಸಿಕೊಂಡು ಹಣ ಕಬಳಿಸಿದ್ದಾರೆ.ಆ ಹಣವನ್ನು ಕಿತ್ತೂರಿನ ಸಹಕಾರ ಸಂಸ್ಥೆಯೊಂದರಲ್ಲಿ ಹೂಡಿ, ಅದೇ ಹಣವನ್ನು ಕಾರ್ಖಾನೆಗೆ ಸಾಲದ ರೂಪವಾಗಿ ಕೊಡಿಸಿದ್ದಾರೆ’ ಎಂಬುದು ಕಾರ್ಖಾನೆಯ ಆಡಳಿತ ಮಂಡಳಿ ಆರೋಪ ಮಾಡಿದೆ.

‘ನಾವು ಏನೂ ಅವ್ಯಹಾರ ಮಾಡಿಲ್ಲ. ಆಡಳಿತ ಮಂಡಳಿಯವರ ಅವ್ಯವಹಾರದ ಸಂಪೂರ್ಣ ದಾಖಲೆಗಳು ನಮ್ಮ ಬಳಿ ಇವೆ. ಯಾವ ನಿರ್ದೇಶಕ ಎಷ್ಟೆಷ್ಟು ಹಣ ಲೂಟಿ ಹೊಡೆದಿದ್ದಾರೆ ಗೊತ್ತಿದೆ’ ಎಂದು ಕಾರ್ಖಾನೆಯ ಸಕ್ಕರೆ ವಿಭಾಗದ ಮುಖ್ಯಸ್ಥರು ಹಾಗೂ ಸಹಕಾರಿ ಸಂಘದ ಮುಖ್ಯಸ್ಥರು ತಿರುಗೇಟು ನೀಡಿದ್ದಾರೆ.

ವಿಡಿಯೊ ಬಿಚ್ಚಿಟ್ಟ ಕತೆ:

ಈ ಅವ್ಯವಹಾರದ ಆರೋಪಕ್ಕೆ ಪೂರಕ ಎಂಬಂತೆ ಕೆಲವು ಆಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಹೋರಾಟ ಕೈಬಿಡಲು ಮಹಿಳೆಯೊಬ್ಬರು ಹಣಕಾಸಿನ ಬೇಡಿಕೆ ಇಟ್ಟ ಬಗ್ಗೆ, ಆಗಿನ ವಾರ್ಷಿಕ ಮಹಾಸಭೆಯಲ್ಲಿ ಅವ್ಯವಹಾರದ ಬಗ್ಗೆ, ರೈತರು ಮಾಡುವ ಪ್ರಶ್ನೆಯಿಂದ ಬಚಾವಾಗಲು ಏನು ಮಾಡೋಣ ಎಂಬ ಬಗ್ಗೆ ನಿರ್ದೇಶಕರ ನಡುವೆ ಚರ್ಚೆ ನಡೆದಿದ್ದು ಇದರಲ್ಲಿದೆ. ಸಂಭಾಷಣೆಗಳಲ್ಲಿ ಸಕ್ಕರೆಯನ್ನು ಅಕ್ರಮವಾಗಿ ದಾಟಿಸಿದ, ಆರ್ಥಿಕ ಅವ್ಯವಹಾರ ಮಾಡಿದ ಚರ್ಚೆಗಳೂ ಇವೆ. ಇದರಿಂದ ಜನ ಮತ್ತಷ್ಟು ಗೊಂದಲಕ್ಕೆ ಈಡಾಗಿದ್ದಾರೆ.

ಸಕ್ಕರೆ ಇಳುವರಿ ಕಡಿಮೆ ತೋರಿಸಿ, ಹೆಚ್ಚುವರಿಯಾಗಿ ಉತ್ಫಾದನೆಯಾದ ಸಕ್ಕರೆಯ ಅಕ್ರಮವಾಗಿ ಸಾಗಿಸಿ, ಯಂತ್ರಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚು ವೆಚ್ಚ ತೋರಿಸಿದ್ದು ಅವ್ಯವಹಾರದಲ್ಲಿ ಇದೆ.

‘40 ಟನ್ ಸಾಮರ್ಥ್ಯದ ಕೆಲವು ಲಾರಿಗಳಲ್ಲಿ ಕೇವಲ 6 ಟನ್ ಸಕ್ಕರೆ ಲೆಕ್ಕ ತೋರಿಸಿರುವುದು. ಕಾರ್‌ವೊಂದರ ನೋಂದಣಿ ಸಂಖ್ಯೆ ಬಿಲ್‍ನಲ್ಲಿ ದಾಖಲಿಸಿ 6 ಟನ್ ಸಕ್ಕರೆ ಸಾಗಾಟ. ಕೆಲ ಬಿಲ್‍ಗಳ ವೈಟ್ನರ್ ತಿದ್ದುಪಡಿ ಮಾಡುವುದು... ಮುಂತಾದ ಅವ್ಯವಹಾರ ನಡೆದಿವೆ. ಸಿಬಿಐ ತನಿಖೆ ಮೂಲಕ ಬಯಲಿಗೆಳೆಯಬೇಕು’ ಎಂಬುದು ರೈತ ಸಂಘಗಳ ಒಕ್ಕೂಟದ ಆಗ್ರಹ.

ಹಾಲಿ ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ ರೈತರ ಬೇಡಿಕೆಯಂತೆ ತನಿಖೆಗೆ ಒಪ್ಪಿಗೆ ಸೂಚಿಸಿದ್ದಾರೆ. ಇದರೊಂದಿಗೆ ಹೋರಾಟ ನಿಂತಿದೆ. ಆದರೆ, ಕಾರ್ಖಾನೆ ನಂಬಿದ ರೈತರ ತಳಮಳ ನಿಂತಿಲ್ಲ.

ಕಾರ್ಖಾನೆಯ ಹಣ ಲೂಟಿ ಮಾಡಿದವರಿಗೆ ಶಿಕ್ಷೆ ಕೊಡಿಸಿ ಅವರ ಆಸ್ತಿ ಜಪ್ತಿ ಮಾಡಲು ಒತ್ತಾಯಿಸುತ್ತಿದ್ದೇವೆ. ಉನ್ನತ ಮಟ್ಟದ ಸಮಿತಿ ರಚಣೆ ಆಗಬೇಕು.
ಬಸವರಾಜ ಮೊಖಾಶಿ, ರೈತ ಸಂಘಗಳ ಒಕ್ಕೂಟದ ಮುಖಂಡ
ನಾವೇ ಅವ್ಯವಹಾರ ಮಾಡಿದ್ದರೆ ನಾವೇಕೆ ತನಿಖೆಗೆ ಒತ್ತಾಯಿಸುತ್ತಿದ್ದೇವು? ಆಡಳಿತ ಮಂಡಳಿಯವರೇ ಅವ್ಯವಹಾರದ ಬಗ್ಗೆ ಧ್ವನಿ ಎತ್ತಿದ್ದೇವೆ. ತನಿಖೆಯೇ ಇದಕ್ಕಿರುವ ದಾರಿ.
ಸಾವಂತ ಕಿರಬನವರ, ಕಾರ್ಖಾನೆ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT