ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಪ್ರವಾಹದಲ್ಲಿ ಮುಳುಗೆದ್ದ ಮಸಗುಪ್ಪಿ ಶಾಲೆ

‘ಜ್ಞಾನದ ಬೆಳಕು’ ಸೂಸುತ್ತ, ಕಣ್ಮನ ಸೆಳೆಯುತ್ತಿರುವ ಸರ್ಕಾರಿ ಶಾಲೆ
Published 10 ಡಿಸೆಂಬರ್ 2023, 5:22 IST
Last Updated 10 ಡಿಸೆಂಬರ್ 2023, 5:22 IST
ಅಕ್ಷರ ಗಾತ್ರ

ಮೂಡಲಗಿ: ಶಿಕ್ಷಕರಲ್ಲಿ ಕಲಿಸುವ ಇಚ್ಛಾಶಕ್ತಿ, ಸಮನ್ವಯತೆ ಮತ್ತು ಸಮುದಾಯ ಜನರ ಶೈಕ್ಷಣಿಕ ಸಹಭಾಗಿತ್ವ ಇದ್ದರೆ ಸರ್ಕಾರಿ ಶಾಲೆಯೊಂದರ ಮೂಲಕ ಗ್ರಾಮಕ್ಕೆ ಜ್ಞಾನದ ಬೆಳಕು ಹರಿಯುತ್ತದೆ ಎನ್ನುವುದಕ್ಕೆ ತಾಲ್ಲೂಕಿನ ಮಸಗುಪ್ಪಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತಮ ಉದಾಹರಣೆಯಾಗಿದೆ.

1925ರಲ್ಲಿ ಪ್ರಾರಂಭಗೊಂಡಿರುವ ಈ ಶಾಲೆಗೆ ದಿ. ಸಿದಗೌಡ ಎಸ್. ಪಾಟೀಲ ನೀಡಿದ್ದ 20 ಗುಂಟೆ ನಿವೇಶನದಲ್ಲಿ ಕಟ್ಟಡ ನಿರ್ಮಾಣಗೊಂಡಿತ್ತು. ಸದ್ಯ ಶತಮಾನೋತ್ಸವದ ಆಚರಣೆಗೆ ಹತ್ತಿರದಲ್ಲಿದೆ.

ಪ್ರವಾಹದಿಂದ ಶಾಲೆಗೆ ಹಾನಿ: ಮಸಗುಪ್ಪಿ ಗ್ರಾಮವನ್ನು ಬಳಸಿಕೊಂಡು ಹರಿಯುವ ಘಟಪ್ರಭಾ ನದಿಗೆ 2019ರಲ್ಲಿ ಪ್ರವಾಹ ಬಂದಿದ್ದರ ಪರಿಣಾಮ ಇಡೀ ಗ್ರಾಮ ಮುಳುಗಿತ್ತು. ಅದರೊಂದಿಗೆ ಸರ್ಕಾರಿ ಪ್ರಾಥಮಿಕ ಶಾಲೆ ಸಹ ಮುಳಗಿ ಶಾಲಾ ಕಟ್ಟಡದ ಹಳೆಯ ಗೋಡೆಗಳು, ಹೆಂಚು ಎಲ್ಲವೂ ನೀರಿನಲ್ಲಿ ಕೊಚ್ಚಿಹೋಗಿದ್ದವು. ಇನ್ನೇನು ಸರ್ಕಾರಿ ಶಾಲೆಯ ಕಥೆ ಮುಗಿದೇ ಹೋಯಿತು ಎನ್ನುವಷ್ಟರ ಮಟ್ಟಿಗೆ ಶಾಲೆಯ ಆವರಣವು ಹಾನಿಯಾಗಿತ್ತು.

ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರ ಮಾರ್ಗದರ್ಶನದಲ್ಲಿ ಆಗಿನ ಶಾಲೆಯ ಮುಖ್ಯಶಿಕ್ಷಕರಾಗಿದ್ದ ಕೆ.ಆರ್. ಡೊಳ್ಳಿ ಅವರ ಪರಿಶ್ರಮದ ಫಲವಾಗಿ ಬೆಂಗಳೂರಿನ ಓಸಾಟ್ ಶೈಕ್ಷಣಿಕ ಧರ್ಮದತ್ತಿ ಸಂಸ್ಥೆಯವರ ₹50 ಲಕ್ಷ ವೆಚ್ಚದ ಕಟ್ಟಡ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಆರ್‌ಐಡಿಎಫ್‌)ಯ ₹48 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶಾಲಾ ಕಟ್ಟಡವು ಶಾಲೆಯ ಆವರಣಕ್ಕೆ ಕಳಸವಿಟ್ಟಂತಾಗಿದೆ. 

ಗೋಡೆಗಳ ಮೇಲೆ ವಿಷಯ ಆಧಾರಿತ ಚಿತ್ರಗಳ ಚಿತ್ತಾರಗಳು ಗಮನ ಸೆಳೆಯುತ್ತವೆ. 90 ಮಕ್ಕಳಿರುವ ನಲಿ–ಕಲಿ 3 ಕೊಠಡಿಗಳಲ್ಲಿ ಮಕ್ಕಳಿಗೆ ವೃತ್ತಾಕಾರದ ಮೇಜು, ಖುರ್ಚಿಗಳಿದ್ದು, ಕೊಠಡಿಯಲ್ಲಿ ಪ್ರೊಜೆಕ್ಟರ್‌ ಅಳವಡಿಸಿದ್ದಾರೆ. ಕಥೆ, ಹಾಡು, ವಿವಿಧ ದೃಶ್ಯಗಳನ್ನು ಪುಟಾಣಿಗಳಿಗೆ ಪ್ರೊಜೆಕ್ಟರ್‌ನಲ್ಲಿ ತೋರಿಸುವ ಮೂಲಕ ಮಕ್ಕಳಲ್ಲಿ ಶಿಕ್ಷಕರು ಕಲಿಕಾ ಆಸಕ್ತಿ ಹೆಚ್ಚಿಸುತ್ತಿದ್ದಾರೆ. ಸ್ಥಳೀಯರು ನೀಡಿದ ದೇಣಿಗೆಯಲ್ಲಿ ಶಾಲೆಯ ಕೊಠಡಿಗಳಲ್ಲಿ ಪ್ರೊಜೆಕ್ಟರ್‌ಗಳನ್ನು ಅಳವಡಿಸಿ ಅವುಗಳ ಮೂಲಕ ಪಾಠ ಮಾಡುತ್ತಾರೆ.

‘ಸದ್ಯ 286 ಮಕ್ಕಳ ದಾಖಲಾತಿ ಇದ್ದು, 6 ಜನ ಶಿಕ್ಷಕರ ‍ಪೈಕಿ ನಾಲ್ಕು ಮಂದಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ. ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಮಕ್ಕಳ ಕಲಿಕೆಗೆ ಎಲ್ಲರೂ ವಿಶೇಷ ಆಸಕ್ತಿವಹಿಸುತ್ತಾರೆ’ ಎಂದು ಮುಖ್ಯ ಶಿಕ್ಷಕ ಶಂಕರ ಎಸ್. ಗಾಡವಿ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸಮುದಾಯದ ಕೊಡುಗೆ: ಸರ್ಕಾರಿ ಶಾಲೆ ಎಂದರೆ ಜ್ಞಾನ ದೇಗುಲ ಎಂದು ಭಾವಿಸಿರುವ ಗ್ರಾಮದ ಜನರು, ಎಸ್‌ಡಿಎಂಸಿ ಸದಸ್ಯರು ಶಾಲೆಗೆ ಮನಬಿಚ್ಚಿ ದೇಣಿಗೆ ನೀಡಿದ್ದು ಇಲ್ಲಿ ವಿಶೇಷವಾಗಿದೆ. ಸ್ಥಳೀಯರು ₹1.25 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್‌ ಕ್ಲಾಸ್‌ರೂಮ್‌ ಮಾಡಿಕೊಟ್ಟಿದ್ದಾರೆ. ₹2 ಲಕ್ಷ ವೆಚ್ಚದಲ್ಲಿ ಪ್ರಿಂಟರ್‌, ಕಂಪ್ಯೂಟರ್‌ ಮತ್ತು ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಕೊಟ್ಟಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಆವರಣದ ಗೋಡೆ ನಿರ್ಮಾಣ, ಆವರಣಕ್ಕೆ ಪೇವರ್ಸ್‌ ಮಾಡಿಸಿದ್ದಾರೆ. 3 ಪ್ರೊಜೆಕ್ಟರ್‌ ಮತ್ತು 2 ಕಂಪ್ಯೂಟರ್‌ಗಳನ್ನು ಕೊಡಿಸಿದ್ದಾರೆ. ಪಾಂಡಿಚೇರಿಯ ರಾಪಿಡ್‌ ಸಂಸ್ಥೆಯಿಂದ ₹4 ಲಕ್ಷ ವೆಚ್ಚದಲ್ಲಿ ಹೈಟೆಕ್‌ ಶೌಚಾಲಯ ನಿರ್ಮಿಸಿದ್ದಲ್ಲದೆ, ಶಾಲೆಗೆ ಅವಶ್ಯವಿರುವ ಮೇಜು, ಖುರ್ಚಿಗಳು, ಸ್ಟೀಲ್‌ ಕಪಾಟು, ಪ್ಯಾನ್‌, ಕ್ರೀಡಾ ಸಾಮಗ್ರಿಗಳು, ಅಡುಗೆ ಸಾಮಗ್ರಿಗಳನ್ನು ನೀಡಿದ್ದಾರೆ. ಮಲೆನಾಡು ಅನುದಾನದಲ್ಲಿ ಲ್ಯಾಪಟಾಪ್‌ ನೀಡಲಾಗಿದೆ.

ಮೊರಾರ್ಜಿ ಶಾಲೆಗೆ ಆಯ್ಕೆ:

‘ಪ್ರತಿ ವರ್ಷವೂ 10ರಿಂದ 15 ಮಕ್ಕಳು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾಗುತ್ತಿದ್ದಾರೆ. ಪರೀಕ್ಷೆ ತಯಾರಿಗಾಗಿ 4 ಮತ್ತು 5ನೇ ತರಗತಿ ಮಕ್ಕಳಿಗೆ ವಿಶೇಷ ತರಬೇತಿ ನೀಡಿ ಸಜ್ಜುಗೊಳಿಸುತ್ತೇವೆ’ ಎಂದು ಮುಖ್ಯಶಿಕ್ಷಕ ಗಾಡವಿ ತಿಳಿಸಿದರು.

ಪ್ರತಿ ವರ್ಷ ಕ್ರೀಡೆಯಲ್ಲಿ ಜಿಲ್ಲಾ ಮಟ್ಟಕ್ಕೆ ಸ್ಪರ್ಧಿಸುತ್ತಾರೆ. ಈ ವರ್ಷ ಕಾವೇರಿ ಗೋಣಿ 200 ಮೀಟರ್‌ ಓಟದಲ್ಲಿ ರಾಜ್ಯ ಮಟ್ಟದವರೆಗೆ ಸಾಧನೆ ಮಾಡಿದ್ದಾರೆ. ವಾರದಲ್ಲಿ ಒಂದು ದಿನ ಸಾಂಸ್ಕೃತಿಕ ದಿನ ಆಚರಿಸಿ ಮಕ್ಕಳಲ್ಲಿ ಭಾಷಣ, ಹಾಡು, ನೃತ್ಯ, ಚಿತ್ರಕಲೆ, ರಸಪ್ರಶ್ನೆಗಳ ಮೂಲಕ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುತ್ತಿದ್ದಾರೆ. ತಿಂಗಳದಲ್ಲಿ ಎರಡು ಬಾರಿ ಮಧ್ಯಾಹ್ನ ಊಟದಲ್ಲಿ ಮಕ್ಕಳಿಗೆ ವಿಶೇಷ ಖಾದ್ಯ ಮಾಡುವರು. ಹೆಣ್ಣು ಮಕ್ಕಳಿಗೆ ವಯಕ್ತಿಕವಾಗಿ ವಿಶೇಷ ಕಾಳಜಿ ವಹಿಸುವರು.

‘3 ಸಾವಿರ ಪುಸ್ತಕಗಳಿರುವ ಗ್ರಂಥಾಲವಿದ್ದು, ಮಕ್ಕಳಿಗೆ ಪುಸ್ತಕಗಳನ್ನು ಓದಲಿಕ್ಕೆ ಎರವಲು ಕೊಡುವರು ಮತ್ತು ಪ್ರತಿ ನಿತ್ಯ ಪ್ರಾರ್ಥನೆಯಲ್ಲಿ ಪುಸ್ತಕ ಓದುವ ಮೂಲಕ ‘ಓದುವ ಸಂಸ್ಕೃತಿ’ ಬೆಳೆಸುತ್ತಿದ್ದಾರೆ ಮತ್ತು ಒಗ್ಗಟ್ಟಿನಲ್ಲಿ ಕಾರ್ಯಮಾಡುತ್ತಿದ್ದಾರೆ’ ಎಂದು ಸಿಆರ್‌ಪಿ ಸಿದ್ರಾಮ್‌ ದ್ಯಾಗಾನಟ್ಟಿ ತಿಳಿಸಿದರು.

ಸರ್ಕಾರಿ ಶಾಲೆಯಲ್ಲಿ ಹೈಟೆಕ್‌ ಕೊಠಡಿ
ಸರ್ಕಾರಿ ಶಾಲೆಯಲ್ಲಿ ಹೈಟೆಕ್‌ ಕೊಠಡಿ
ಶಂಕರ ಎಸ್. ಗಾಡವಿ ಮುಖ್ಯಶಿಕ್ಷಕ
ಶಂಕರ ಎಸ್. ಗಾಡವಿ ಮುಖ್ಯಶಿಕ್ಷಕ

ಸ್ಮಾರ್ಟ್ ಕ್ಲಾಸ್‌ರೂಮ್‌ ವ್ಯವಸ್ಥೆ ನಲಿ–ಕಲಿಯಲ್ಲಿ 90 ಮಕ್ಕಳು ಹೆಣ್ಣುಮಕ್ಕಳ ವಿಶೇಷ ಕಾಳಜಿ

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬಾಳಗೌಡ ಪಾಟೀಲ ಪಂಚಾಯ್ತಿ ಗ್ರಾಮಸ್ಥರ ಸಹಕಾರಬಿಇಒ ಅಜೀತ ಮನ್ನಿಕೇರಿ ಅವರ ಮಾರ್ಗದರ್ಶನ ಶಾಲೆಯ ಅಭಿವೃದ್ಧಿಗೆ ಕಾರಣ
ಶಂಕರ ಎಸ್. ಗಾಡವಿ ಮುಖ್ಯಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT