ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗಳ ಅಭಿವೃದ್ಧಿಗೆ ಕಾಂಗ್ರೆಸ್‌ ಆದ್ಯತೆ: ಸತೀಶ ಜಾರಕಿಹೊಳಿ

ಹುದಲಿ-ಕಲಕಾಂಬದಲ್ಲಿ ₹5 ಕೋಟಿ ವೆಚ್ಚದ ಕಾಮಗಾರಿಗೆ ಸಚಿವ ಸತೀಶ ಜಾರಕಿಹೊಳಿ ಚಾಲನೆ
Published 27 ಫೆಬ್ರುವರಿ 2024, 4:25 IST
Last Updated 27 ಫೆಬ್ರುವರಿ 2024, 4:25 IST
ಅಕ್ಷರ ಗಾತ್ರ

ಹುದಲಿ: ‘ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಹಳ್ಳಿಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ನನ್ನ ಕ್ಷೇತ್ರದ ಹಳ್ಳಿಗಳಿಗೆ ನಾನು ಕಳೆದ 15 ವರ್ಷಗಳಲ್ಲಿ ಸಾಕಷ್ಟು ಅನುದಾನ ನೀಡಿದ್ದೇನೆ. ಕುಡಿಯುವ ನೀರು, ರಸ್ತೆ, ಶಾಲೆಗಳಿಗೆ ಪ್ರಾಧಾನ್ಯತೆ ಕೊಟ್ಟಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ, ಬೆಳಗಾವಿ ತಾಲ್ಲೂಕಿನ ಹುದಲಿ ಗ್ರಾಮದಲ್ಲಿ ಗ್ರಾಮದೇವಿ ಜಾತ್ರೆ ಅಂಗವಾಗಿ ಚರಂಡಿ, ಸಿಸಿ ರಸ್ತೆ ಹಾಗೂ ರಸ್ತೆ ಡಾಂಬರೀಕರಣ ಸೇರಿ ಹುದಲಿ-ಕಲಕಾಂಬದಲ್ಲಿ ₹5 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ರಾಜ್ಯದಾದ್ಯಂತ ಆಗುತ್ತಿರುವ ಗ್ರಾಮಗಳ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪಕ್ಷ ತೊರೆದು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತೋಷದ ವಿಷಯ. ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಿದರೆ ಮುಂದೆ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯವಿದೆ’ ಎಂದರು.

‘ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದಲ್ಲಿ ಜನರಿಗೆ ಯಾವುದೇ ಕೆಲಸಗಳು ಆಗಿಲ್ಲ. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುವುದೇ ಅವರ ಕೆಲಸ. ನಮ್ಮ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಬಿಜೆಪಿ ಕಾರ್ಯಕರ್ತರು ಸಹಿಸಿಕೊಳ್ಳುತ್ತಿಲ್ಲ’ ಎಂದು ಹರಿಹಾಯ್ದರು.

‘ಹುದಲಿಯಲ್ಲಿ ನಡೆಯುವ ಗ್ರಾಮದೇವಿ ಜಾತ್ರೆಗೆ ರಸ್ತೆ ಹಾಗೂ ಒಳಚರಂಡಿ ಸೇರಿದಂತೆ ₹5 ಕೋಟಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಯಮಕನಮರಡಿ ಹಾಗೂ ಹುದಲಿ ಗ್ರಾಮಕ್ಕೆ ಅಭಿವೃದ್ಧಿ ಕೆಲಸ ಮಾಡುವುದು ಹೊಸದೇನಲ್ಲ. ಗ್ರಾಮದಲ್ಲಿ ಯಾವಾಗ ಸಮಸ್ಯೆ ಇದೆ ಎಂದು ಹೇಳಿದಾಗಲೆಲ್ಲ ಸಮಸ್ಯೆ ಬಗೆಹರಿಸಲಾಗಿದೆ. ನಮ್ಮಿಂದ ಯಾವಾಗಲೂ ಇಲ್ಲ ಎಂಬ ಉತ್ತರ ಬಂದಿಲ್ಲ’ ಎಂದರು.

‘ನಾಲ್ಕು ಚುನಾವಣೆಗಳಲ್ಲಿ ನಾನು ಗೆದ್ದಿದ್ದು, ಪ್ರತಿ ಭಾರಿ ಮತಗಳ ಸಂಖ್ಯೆ ಏರುತ್ತ ಹೋಗಿದೆ. ಮೊದಲು ಗೆದ್ದಾಗ 46 ಸಾವಿರ, 2ನೇ ಬಾರಿಗೆ ಗೆದ್ದಾಗ 70 ಸಾವಿರ ಮತಗಳು, 3ನೇ ಬಾರಿಗೆ 73 ಸಾವಿರ ಮತಗಳು, 4ನೇ ಬಾರಿ 1 ಲಕ್ಷ 4 ಸಾವಿರ ಮತಗಳ ಅಂತರ ಪಡೆದಿದ್ದೇನೆ. ಇದಕ್ಕೆ ಅಭಿವೃದ್ಧಿ ಕೆಲಸಗಳೇ ಕಾರಣ’ ಎಂದರು.

ಇದೇ ವೇಳೆ ಬಿಜೆಪಿ, ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಹಲವು ಯುವಕರನ್ನು ಸಚಿವ ಸತೀಶ ಜಾರಕಿಹೊಳಿ ಸನ್ಮಾನಿಸಿದರು.

ಸಚಿವರ ಆಪ್ತ ಸಹಾಯಕರಾದ ಪಾಂಡು ಮನ್ನಿಕೇರಿ, ಅರವಿಂದ ಕಾರ್ಚಿ, ಗ್ರಾಮದ ಹಿರಿಯರು, ಪಿಕೆಪಿಎಸ್‌ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಖಾದಿ ಗ್ರಾಮೋದ್ಯೋಗದ ನಿರ್ದೇಶಕ ಮಡಳಿಯವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT