ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಬಿಪಿಎಲ್ ಕಾರ್ಡ್ ರದ್ದುಪಡಿಸಿ

ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಉಮೇಶ ಕತ್ತಿ
Last Updated 6 ಫೆಬ್ರುವರಿ 2021, 13:43 IST
ಅಕ್ಷರ ಗಾತ್ರ

ಬೆಳಗಾವಿ: ‘ಅಕ್ರಮವಾಗಿ ಬಿಪಿಎಲ್ ಕಾರ್ಡ್‌ಗಳನ್ನು ಪಡೆದಿರುವ ಕುಟುಂಬಗಳನ್ನು ಗುರುತಿಸಿ, ಕಾಲಮಿತಿಯಲ್ಲಿ ರದ್ದುಪಡಿಸಲು ಸಮೀಕ್ಷೆ ನಡೆಸಬೇಕು’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ತಾಕೀತು ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸರ್ಕಾರದ ಮಾರ್ಗಸೂಚಿ ಮೀರಿ ಅನೇಕ ಕುಟುಂಬಗಳು ಬಿಪಿಎಲ್ ಕಾರ್ಡುಗಳನ್ನು ಪಡೆದಿವೆ. ಅರ್ಹ ಬಡವರಿಗೆ ಕೊಟ್ಟಿಲ್ಲ. ಜನಸಂಖ್ಯೆಗಿಂತಲೂ ಅಧಿಕ ಚೀಟಿ ಕೊಟ್ಟಿರುವ ದೂರುಗಳಿವೆ. ಆರೋಗ್ಯ ಭಾಗ್ಯ ಸೇರಿದಂತೆ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಬಿಪಿಎಲ್ ಕಾರ್ಡ್‌ ಗಳಿಸಲು ಹಾತೊರೆಯುತ್ತಿದ್ದಾರೆ’ ಎಂದರು. ‘ಮಾನದಂಡ ಪಾಲಿಸದ ಬಿಪಿಎಲ್ ಕಾರ್ಡ್‌ ರದ್ದುಪಡಿಸಿ ಎಪಿಎಲ್ ಆಗಿ ಪರಿವರ್ತಿಸಬೇಕು. ಬಡವರಿಗೆ ಸೌಲಭ್ಯ ತಪ್ಪದಂತೆ ನೋಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಔಚಿತ್ಯವೇನು?:

‘ಅಡುಗೆ ಅನಿಲ ಸಿಲಿಂಡರ್ ನೀಡುತ್ತಿರುವಾಗ ಸೀಮೆಎಣ್ಣೆ ವಿತರಿಸುತ್ತಿರುವ ಔಚಿತ್ಯವೇನು?’ ಎಂದು ಕೇಳಿದರು.

‘ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸಬೇಕು. ಪಡಿತರ ವಿತರಣೆಯಲ್ಲಿ ಲೋಪಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಸರ್ಕಾರಿ ನೌಕರರಿಗೆ ಬಿಪಿಎಲ್‌ ಪಡಿತರ ಚೀಟಿ ಕೊಟ್ಟವರ ವಿರುದ್ಧ ಕ್ರಮ ವಹಿಸಿಲ್ಲವೇಕೆ, ಅಮಾನತು ಮಾಡಲಿಲ್ಲವೇಕೆ’ ಎಂದು ಪ್ರಶ್ನಿಸಿದರು.

ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ. ಕೊಡ್ಲಿ, ‘ಸೀಮೆಎಣ್ಣೆ ವಿತರಣೆ ನಿಲ್ಲಿಸುವುದು ಒಳ್ಳೆಯದು. ಸೀಮೆಎಣ್ಣೆ ವಿತರಣೆ ಕಡಿತ ಮಾಡಿದಾಗಲೂ ಯಾರೂ ಕೇಳಲಿಲ್ಲ. ಆದರೆ, ಖಾನಾಪುರ ಮೊದಲಾದ ಕಡೆಗಳಲ್ಲಿ ವಿದ್ಯುತ್ ಇಲ್ಲದಾಗ ದೀಪಕ್ಕಾಗಿ ಲೀಟರ್‌ ಸೀಮೆಎಣ್ಣೆ ಬೇಕೆಂಬ ಬೇಡಿಕೆ ಇದೆ’ ಎಂದು ತಿಳಿಸಿದರು.

ಮಾರ್ಗಸೂಚಿ ಬರಲಿ:

‘ಬಿಪಿಎಲ್ ಕಾರ್ಡ್‌ಗಳ ಬಳಕೆಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಸೂಕ್ತ ಮಾರ್ಗಸೂಚಿ ರೂಪಿಸುವ ಅಗತ್ಯವಿದೆ. ಸ್ಥಳೀಯರ ಆಹಾರ ಪದ್ಧತಿ ಆಧರಿಸಿ ಆಹಾರಧಾನ್ಯ ವಿತರಿಸಬೇಕು’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸಲಹೆ ನೀಡಿದರು.

‘ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲು ವಿಶೇಷ ಅಭಿಯಾನ ಹಮ್ಮಿಕೊಂಡು ಮಾರ್ಚ್‌ 31ರ ಒಳಗ ಪೂರ್ಣಗೊಳಿಸಬೇಕು. ರಾಜ್ಯಕ್ಕೆ ಮಾದರಿ ಹಾಕಿಕೊಡಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು.

‘ಪಡಿತರ ಚೀಟಿಗಾಗಿ ಒಟ್ಟು 45ಸಾವಿರ ಹೊಸ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 42 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 5,070 ತಿರಸ್ಕೃತವಾಗಿವೆ’ ಎಂದು ಕೊಡ್ಲಿ ವಿವರಿಸಿದರು.

‘ಡಿಸೆಂಬರ್‌ನಲ್ಲಿ 738 ಹಾಗೂ ಜನವರಿಯಲ್ಲಿ 752 ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ರದ್ದುಪಡಿಸಲಾಗಿದೆ. ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದೇಶ ಉಲ್ಲಂಘಿಸಿದ್ದಕ್ಕೆ ಹೋದ ವರ್ಷ 16 ನ್ಯಾಯಬೆಲೆ ಅಂಗಡಿಗಳ ಪರವಾನಗಿ ಅಮಾನತುಗೊಳಿಸಲಾಗಿದೆ’ ಎಂದು ತಿಳಿಸಿದರು.

ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ, ಉಪ ವಿಭಾಗಾಧಿಕಾರಿಗಳಾದ ಯುಕೇಶ್ ಕುಮಾರ್, ಅಶೋಕ ತೇಲಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT