ಶುಕ್ರವಾರ, ಮೇ 27, 2022
27 °C
ಸಚಿವ ಉಮೇಶ ಕತ್ತಿ ಹೇಳಿಕೆಗೆ ಸಾರ್ವಜನಿಕರ ವಿರೋಧ

ದ್ವಿಚಕ್ರವಾಹನ, ಟಿವಿ, ಫ್ರಿಜ್ ಇದ್ದರೆ ಬಿಪಿಎಲ್ ಪಡಿತರ ಚೀಟಿ ರದ್ದು: ಉಮೇಶ ಕತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH File

ಬೆಳಗಾವಿ: ‘ದ್ವಿಚಕ್ರವಾಹನ, ಟಿವಿ, ಫ್ರಿಜ್ ಅಥವಾ ಐದು ಎಕರೆಗಿಂತ ಹೆಚ್ಚಿನ ಜಮೀನು ಹೊಂದಿದವರು ಬಿಪಿಎಲ್ ಪಡಿತರ ಚೀಟಿ ಪಡೆದಿದ್ದರೆ, ಕೂಡಲೇ  ವಾಪಸ್ ಮಾಡಬೇಕು. ಇಲ್ಲವಾದಲ್ಲಿ ಅಂತಹ ಚೀಟಿಗಳನ್ನು ರದ್ದುಪಡಿಸಲಾಗುವುದು’ ಎಂದು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ತಿಳಿಸಿದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಐದು ಎಕರೆಗಿಂತ ಹೆಚ್ಚು ಜಮೀನು, ಮನೆಯಲ್ಲಿ ದ್ವಿಚಕ್ರವಾಹನ, ಟಿವಿ, ಫ್ರಿಜ್ ಇದ್ದವರ ಪಡಿತರ ಚೀಟಿ ಇವುಗಳಲ್ಲಿ ಯಾವುದಾದರೂ ಒಂದು ಇದ್ದರೂ ಬಿಪಿಎಲ್ ಕಾರ್ಡ್ ರದ್ದುಗೊಳಿಸಲಾಗುವುದು’ ಎಂದು ಹೇಳಿದರು.

‘ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಮಾರ್ಚ್ ಅಂತ್ಯದವರೆಗೆ ಗಡುವು ನೀಡಲಾಗಿದೆ. ಏಪ್ರಿಲ್ ಬಳಿಕ ಸರ್ಕಾರದಿಂದ ಕಾರ್ಡ್ ಹೊಂದಿದವರ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ಎಲ್ಲ ಸೌಲಭ್ಯ ಇದ್ದರೂ ಬಿಪಿಎಲ್ ಪಡಿತರ ಚೀಟಿ ಪಡೆದಿದ್ದರೆ, ದಂಡದ ಜೊತೆ ಶಿಕ್ಷೆ ವಿಧಿಸಲು ಕ್ರಮ ವಹಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಅಧಿಕಾರಿಗಳ ಸಭೆ ನಡೆಸಿದ್ದ ಸಚಿವರು, ಅಕ್ರಮವಾಗಿ ಪಡಿತರ ಚೀಟಿ ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.

ಸಚಿವರ ಹೇಳಿಕೆ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಲು ಸಚಿವರು ನಿರಾಕರಿಸಿದರು. ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಪ್ರತಿಕ್ರಿಯೆ ಕೇಳಿದಾಗ, ಅವರು ಟಿವಿ ವಾಹಿನಿಗಳವರ ಮೈಕ್‌ಗಳನ್ನು ತಳ್ಳಿ ಸಿಟ್ಟು ಪ್ರದರ್ಶಿಸಿದರು.

ದ್ವಿಚಕ್ರವಾಹನ, ಟಿವಿ, ಫ್ರಿಜ್ ಇದ್ದವರು ಬಿಪಿಎಲ್‌ ಪಡಿತರ ಚೀಟಿ ವಾಪಸ್ ಮಾಡಬೇಕು ಎಂಬ ಸಚಿವರ ಹೇಳಿಕೆ ವಿರುದ್ಧ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.

ಮಧ್ಯಾಹ್ನ ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸಚಿವರು, ‘ಬಿಪಿಎಲ್ ಕುಟುಂಬಗಳನ್ನು ಸಾರ್ವಜನಿಕ ಪಡಿತರ ವ್ಯವಸ್ಥೆಗೆ ಒಳಪಡಿಸುವ ಉದ್ದೇಶದಿಂದ ಈಗಾಗಲೇ ಹಿಂದಿನ ಸರ್ಕಾರಗಳು ಆದೇಶ ಹೊರಡಿಸಿವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರವಾಗಲಿ ಅಥವಾ ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕವಾಗಲಿ ಆದೇಶಗಳಲ್ಲಿ ಯಾವುದೇ ತಿದ್ದುಪಡಿ ಮಾಡಿಲ್ಲ’ ಎಂದು ತಿಳಿಸಿದ್ದಾರೆ.

‘ಸರ್ಕಾರದ ಆದೇಶದ ಪ್ರಕಾರ ಮಾನದಂಡಗಳನ್ನು ಉಲ್ಲಂಘಿಸಿ ಹೆಚ್ಚಿನ ಸಂಖ್ಯೆಯ ಕುಟುಂಬಗಳು ಬಿ‍ಪಿಎಲ್ ಪಡಿತರ ಚೀಟಿಗಳನ್ನು ಪಡೆದಿರುವುದು ಗಮನಕ್ಕೆ ಬಂದಿದೆ. ಅಂತಹ ಕುಟುಂಬದವರು ಮಾರ್ಚ್‌ 31ರ ಒಳಗೆ ಸ್ವಯಂಪ್ರೇರಿತವಾಗಿ ಕಾರ್ಡ್‌ಗಳನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕು. ಒಂದು ವೇಳೆ ಕಾಲಾವಧಿಯಲ್ಲಿ ಹಿಂತಿರುಗಿಸದಿದ್ದರೆ ಅಂಥವರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ನಾನೇಕೆ ಹೇಳಲಿ ಎಂದಿದ್ದರು?

‘ಅಡುಗೆ ಅನಿಲ ಸಿಲಿಂಡರ್‌ಗೆ ನೀಡುವ ಸಹಾಯಧನ ಬಿಟ್ಟುಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜನರನ್ನು ಕೋರಿದ್ದರು. ಅದಕ್ಕೆ ದೇಶದಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಹೀಗೆ ಉಳ್ಳುವರು ಬಿಪಿಎಲ್ ಪಡಿತರ ಚೀಟಿ ಪಡೆದಿದ್ದರೆ ವಾಪಸ್ ಮಾಡುವಂತೆ ನೀವೇಕೆ ರಾಜ್ಯದಲ್ಲಿ ಕರೆ ಕೊಡಬಾರದು?’ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೆಲವು ದಿನಗಳ ಹಿಂದೆ ಇಲ್ಲಿ ನಡೆದಿದ್ದ ಸಭೆಯಲ್ಲಿ ಸಲಹೆ ನೀಡಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ್ದ ಸಚಿವರು, ‘ನಾನೇಕೆ ಹೇಳಲಿ? ನಾನು ಮುಂದಿನ ಚುನಾವಣೆಗೆ ಹೋಗಬೇಕು. ಅಧಿಕಾರಿಗಳು ಆ ಕೆಲಸ ಮಾಡಲಿ. ನಾನು ಐದು ವರ್ಷಗಳಿಗೊಮ್ಮೆ ಪರೀಕ್ಷೆಗೆ ಹೋಗುವವನು’ ಎಂದು ಪ್ರತಿಕ್ರಿಯಿಸಿದ್ದರು. ಸಮೀಕ್ಷೆ ನಡೆಸಿ, ಅಕ್ರಮವಾಗಿ ಪಡಿತರ ಚೀಟಿ ಪಡೆದಿರುವುದು ಗೊತ್ತಾದರೆ ಅಂಥವರ ವಿರುದ್ಧ ನಿಯಮಾನುಸಾರ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು