ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮಳೆ ತಗ್ಗಿದರೂ, ಜಲಾಶಯಗಳ ಒಳಹರಿವು ಹೆಚ್ಚಳ

Last Updated 20 ಜೂನ್ 2021, 8:35 IST
ಅಕ್ಷರ ಗಾತ್ರ

ಬೆಳಗಾವಿ: ನಾಲ್ಕು ದಿನಗಳಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅಬ್ಬರಿಸಿದ್ದ ಮಳೆ ಭಾನುವಾರ ವಿರಾಮ ಪಡೆದಿದೆ. ಆದರೆ, ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

ನಗರದಲ್ಲಿ ಆಗಾಗ ಸಾಧಾರಣ ಮಳೆಯಾಗುತ್ತಿದೆ.

ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ತಗ್ಗಿದೆಯಾದರೂ ಅಲ್ಲಿಂದ ಕೃಷ್ಣಾ ಮತ್ತು ಉಪ ನದಿಗಳಿಗೆ ಬಂದು ಸೇರುವ ನೀರಿನ ಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಆ ರಾಜ್ಯದ ರಾಜಾಪುರ ಬ್ಯಾರೇಜ್‌ನಿಂದ 91,125 ಕ್ಯುಸೆಕ್ ಹಾಗೂ ದೂಧ್‌ಗಂಗಾ ನದಿಯಿಂದ 28,593 ಕ್ಯುಸೆಕ್ ಸೇರಿ ಒಟ್ಟು 1,19,718 ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸೇರುತ್ತಿದೆ. ಶನಿವಾರಕ್ಕೆ ಹೋಲಿಸಿದರೆ 4ಸಾವಿರ ಕ್ಯುಸೆಕ್‌ ಹೆಚ್ಚಾಗಿದೆ.

ಕೃಷ್ಣಾ ನದಿಗೆ ಕಲ್ಲೋಳ ಬಳಿ ನಿರ್ಮಿಸಿರುವ ಕಲ್ಲೋಳ–ಯಡೂರ ಹಾಗೂ ದೂಧ್‌ಗಂಗಾ ನದಿಗೆ ಮಲಿಕವಾಡ ಬಳಿ ಕಟ್ಟಿರುವ ಮಲಿಕವಾಡ–ದತ್ತವಾಡ ಸೇತುವೆಯಲ್ಲಿ ಸಂಚಾರ ಬಂದ್ ಇದೆ. ಸದಲಗಾ–ಬೋರಗಾಂವ, ಯಕ್ಸಂಬಾ–ದಾನವಾಡ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿದೆ.

ಘಟಪ್ರಭಾ ಜಲಾಶಯಕ್ಕೆ 3,3799 ಕ್ಯುಸೆಕ್ ಹಾಗೂ ಮಲ‍ಪ್ರಭಾ ಜಲಾಶಯಕ್ಕೆ 36,073 ಕ್ಯುಸೆಕ್ ಒಳಹರಿವಿತ್ತು.

ಬೆಳಗಾವಿ ತಾಲ್ಲೂಕಿನ ಕಾಕತಿ ಸಮೀಪದಲ್ಲಿ ಮಾರ್ಕಂಡೇಯ ನದಿ ಪ್ರವಾಹದಲ್ಲಿ ಶುಕ್ರವಾರ ಸಂಜೆ ಕೊಚ್ಚಿ ಹೋಗಿದ್ದ ವ್ಯಕ್ತಿ ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ.

ಅಧಿಕಾರಿಗಳ ಭೇಟಿ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್‌, ಎಸ್ಪಿ ಲಕ್ಷ್ಮಣ ನಿಂಬರಗಿ ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಬಳಿಯ ಸೇತುವೆ ಹಾಗೂ ಕಲ್ಲೋಳ ಬಳಿಗೆ ಭಾನುವಾರ ಭೇಟಿ ನೀಡಿ ಕೃಷ್ಣಾ ನದಿಯ ಹರಿವಿನ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪರಿಸ್ಥಿತಿ ಅವಲೋಕಿಸಿದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ‘ಜಿಲ್ಲೆಯಲ್ಲಿ ಮಳೆ ತಗ್ಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲೂ ಮಳೆ ಪ್ರಮಾಣ ಇಳಿಕೆಯಾಗಿದೆ. ಹೀಗಾಗಿ, ಸದ್ಯಕ್ಕೆ ಪ್ರವಾಹದ ಪರಿಸ್ಥಿತಿ ಇಲ್ಲ. ಆದಾಗ್ಯ ತುರ್ತು ಸ್ಥಿತಿ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಗರಿಷ್ಠ ಮಳೆ (ಸೆಂ.ಮೀ.ಗಳಲ್ಲಿ)

ಬೆಳಗಾವಿ ಜಿಲ್ಲೆ

ಕಣಕುಂಬಿ;15.02

ಜಾಂಬೋಟಿ;12.86

ಲೋಂಡಾ (ರೈಲು ನಿಲ್ದಾಣ);10.50

ಲೋಡಾ (ಪಿಡಬ್ಲ್ಯುಡಿ);8.48

ಗುಂಜಿ;7.84

ಅಸೋಗಾ;7.42

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT