ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ‘ಕೋವಿಡ್ ನ್ಯುಮೋನಿಯಾ’ದಿಂದ ಹೆಚ್ಚು ಸಾವು!

ವಿಶ್ವ ನ್ಯಮೋನಿಯಾ ದಿನ ಇಂದು; ಎಚ್ಚರಿಕೆ ವಹಿಸಬೇಕಾದ ಸಮಯ
Last Updated 12 ನವೆಂಬರ್ 2020, 6:24 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಬುಧವಾರವರೆಗೆ ಕೋವಿಡ್–19ನಿಂದಾಗಿ ಚಿಕಿತ್ಸೆಗೆ ಸ್ಪಂದಿಸದೆ 338 ಮಂದಿ ಮೃತರಾಗಿದ್ದಾರೆ. ಇವರಲ್ಲಿ ಬಹುತೇಕರು ‘ಕೋವಿಡ್ ನ್ಯುಮೋನಿಯಾ’ (ಶ್ವಾಸಕೋಶ ಸೋಂಕು)ದಿಂದಾಗಿ ಹೆಚ್ಚಿನ ಅಪಾಯಕ್ಕೆ ಸಿಲುಕಿದರು ಎನ್ನುವ ವೈಜ್ಞಾನಿಕ ಅಂಶ ಬೆಳಕಿಗೆ ಬಂದಿದೆ. ಜೊತೆಗೆ, ಈ ಸಮಸ್ಯೆಯಿಂದ ಪಾರಾಗಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಎ‌ಚ್ಚರಿಕೆಯ ಸಂದೇಶವನ್ನೂ ರವಾನಿಸಿದೆ.

ಕೋವಿಡ್–19 ಕಾಣಿಸಿಕೊಂಡ ಆರಂಭದಲ್ಲಿ ಶ್ವಾಸಕೋಶ ಸೋಂಕಿಗೆ ಸಂಬಂಧಿಸಿದಂತೆ ಜಾಗೃತಿ ಇರಲಿಲ್ಲ ಹಾಗೂ ಅದಕ್ಕೆ ಸಂಬಂಧಿಸಿದಂತೆ ನೀಡುವ ಚುಚ್ಚುಮದ್ದಿನ ಕೊರತೆಯೂ ಇತ್ತು. ಕ್ರಮೇಣ ಮರಣ ಪ್ರಮಾಣ ಹೆಚ್ಚಾದಂತೆಲ್ಲಾ ಶ್ವಾಸಕೋಶ ಸೋಂಕು ಬಾಧಿಸುತ್ತಿರುವುದು ತಿಳಿದುಬಂದಿತು. ಹೀಗಾಗಿ, ಕೆಲವು ತಿಂಗಳುಗಳ ನಂತರ ಸರ್ಕಾರವೂ ಎಚ್ಚೆತ್ತುಕೊಂಡಿದೆ. ಈಗ, ಈ ಸಮಸ್ಯೆ ವಿರುದ್ಧದ ಹೋರಾಟಕ್ಕೆ ಪೂರಕವಾಗಿ ಅಗತ್ಯ ಚುಚ್ಚುಮದ್ದನ್ನು ಸರ್ಕಾರ ಪೂರೈಸುತ್ತಿದೆ. ಪರಿಣಾಮ, ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.

ಇತ್ತೀಚಿನ ದಿನಗಳಲ್ಲಿ, ಕೋವಿಡ್‌ನಿಂದ ದಾಖಲಾಗುವವರಿಗೆ ‘ರ‍್ಯಾಮ್‌ಡಿಸಿವರ್‌’ ಎನ್ನುವ ಇನ್ಜೆಕ್ಷನ್ ಕೊಡಲಾಗುತ್ತಿದೆ. ಸರ್ಕಾರದ ಬಹಳಷ್ಟು ಪೂರೈಕೆ ಆಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಶ್ವಾಸಕೋಶದಲ್ಲಿ ರಕ್ತಹೆಪ್ಪುಗಟ್ಟದಂತೆ ಈ ಔಷಧ ತಡೆಯುತ್ತದೆ. ಪರಿಣಾಮ, ಸಾವಿನ ದವಡೆಯಿಂದ ತಪ್ಪಿಸಬಹುದಾಗಿದೆ ಎನ್ನುತ್ತಾರೆ ವೈದ್ಯರು.

ವೈದ್ಯರು ಹೇಳುವುದೇನು?

ಇಲ್ಲಿ ಕೋವಿಡ್ ಆಸ್ಪತ್ರೆಯಾಗಿರುವ ಜಿಲ್ಲಾಸ್ಪತ್ರೆಯ ತಜ್ಞ ವೈದ್ಯ ಡಾ.ಗಿರಿಧರ ಪಾಟೀಲ ಅವರು ಚಿಕಿತ್ಸೆಯ ತಮ್ಮ ಅನುಭವವನ್ನು ‘ಪ್ರಜಾವಾಣಿ’ಯೊಂದಿಗೆ ಇಲ್ಲಿ ಹಂಚಿಕೊಂಡಿದ್ದಾರೆ.

‘ಬ್ಯಾಕ್ಟೀರಿಯಲ್‌ ನ್ಯುಮೋನಿಯಾದಿಂದ ಸಮಸ್ಯೆಯ ಪ್ರಮಾಣ ಕಡಿಮೆ ಇರುತ್ತದೆ. ಆದರೆ, ‘ಕೋವಿಡ್ ನ್ಯುಮೋನಿಯಾ’ ವೈರಲ್ ನ್ಯುಮೋನಿಯಾ ಆಗಿದೆ. ಇದರಿಂದ ಶ್ವಾಸಕೋಶದ ಎರಡೂ ಬದಿಯಲ್ಲಿ ಶೇ 50ಕ್ಕಿಂತ ಹೆಚ್ಚಾಗಿ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹೀಗಾಗಿ, ಆಮ್ಲಜನಕ ಕಡಿಮೆಯಾಗುತ್ತದೆ. ಆದ್ದರಿಂದ ಇದು ಬಹಳ ಗಂಭೀರವಾದ ಸಮಸ್ಯೆಯಾಗಿದೆ’ ಎಂದು ಗುರುತಿಸುತ್ತಾರೆ ಅವರು.

‘ಬ್ಯಾಕ್ಟೀರಿಯಲ್ ನ್ಯುಮೋನಿಯಾಕ್ಕೆ ಔಷಧ ಇವೆ ಮತ್ತು ವಾಸಿ ಮಾಡಬಹುದಾದ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ಕೋವಿಡ್ ನ್ಯುಮೋನಿಯಾಕ್ಕೆ ಔಷಧ ಬಹಳ ಕಡಿಮೆ ಇವೆ. ಇದರಿಂದ ರೋಗಿಯನ್ನು ಬದುಕಿಸಲು ಕಷ್ಟವಾಗುತ್ತದೆ. ವೈದ್ಯರೂ ಅಸಹಾಯಕರಾಗುವಂತಹ ಸ್ಥಿತಿ ಬರುತ್ತದೆ. ಕೋವಿಡ್–19 ಕಾಣಿಸಿಕೊಂಡ ಆರಂಭದಲ್ಲಿ ‘ಕೋವಿಡ್ ನ್ಯುಮೋನಿಯಾ’ ವಿರುದ್ಧದ ಹೋರಾಟಕ್ಕೆ ಅಸ್ತ್ರವಿರಲಿಲ್ಲ. ಈಗ ಪರಿಸ್ಥಿತಿ ಸುಧಾರಿಸಿದೆ. ‘ರ‍್ಯಾಮ್‌ಡಿಸಿವರ್‌’ ಎನ್ನುವ ಇನ್ಜೆಕ್ಷನ್‌ ಅನ್ನು ಎಲ್ಲರಿಗೂ ಕೊಡುತ್ತಿದ್ದೇವೆ. ಇದರಿಂದ ಮರಣ ಪ್ರಮಾಣ ಗಣನೀಯ ಪ್ರಮಾಣದಲ್ಲಿ ತಗ್ಗಿದೆ’ ಎನ್ನುತ್ತಾರೆ ಅವರು.

ಕೋವಿಡ್ ನ್ಯುಮೋನಿಯಾದಿಂದ

‘ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಮರಣ ಹೊಂದಿದವರಲ್ಲಿ ಶೇ 4ರಿಂದ 5ರಷ್ಟು ಮಂದಿ ಹೃದಯಾಘಾತ ಮತ್ತಿತರ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮೃತರಾದರು. ಅದನ್ನು ಹೊರತುಪಡಿಸಿದರೆ ಬಹುತೇಕ ಸಾವು ಕೋವಿಡ್ ನ್ಯುಮೋನಿಯಾದಿಂದಲೇ ಆಗಿರುವುದನ್ನು ಗುರುತಿಸಿದ್ದೇವೆ. 50 ವರ್ಷ ಕೆಳಗಿನವರಲ್ಲಿ ರೋಗನಿರೋಧಕ ಶಕ್ತಿ ಚೆನ್ನಾಗಿದ್ದವರು ಗುಣಮುಖರಾಗಿದ್ದಾರೆ. 50 ವರ್ಷ ಮೇಲಿನವರು ಹೃದಯ ಸಂಬಂಧಿ ಸಮಸ್ಯೆ ಇದ್ದವರು, ಅಧಿಕ ರಕ್ತದೊತ್ತಡ, ಮಧುಮೇಹ ನ್ಯೂನತೆ ಮೊದಲಾದವು ಇದ್ದವರು ಕೋವಿಡ್ ನ್ಯೂಮೋನಿಯಾ ಕೂಡ ಸೇರಿದ್ದರಿಂದ ಸಾವಿಗೀಡಾದರು’ ಎಂದು ಮಾಹಿತಿ ನೀಡಿದರು.

ತಿಳಿಯುವುದು ಹೇಗೆ?

* ಕೆಮ್ಮಿನ ಜೊತೆಗೆ ಧಮ್ಮು ಶುರುವಾಗುತ್ತದೆ. ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ.

* ನಾಲ್ಕೈದು ಹೆಜ್ಜೆ ಹಾಕುವುದಕ್ಕೂ ಅಗದಂತೆ ತೊಂದರೆ ಆಗುತ್ತದೆ.

* ಬಹಳ ಪ್ರಕರಣಗಳಲ್ಲಿ ಸಮಸ್ಯೆ ಹೆಚ್ಚಾದ ಮೇಲೆಯೇ ತಿಳಿಯುತ್ತದೆ.

* ಹೀಗಾಗಿ, ಜ್ವರ–ಕೆಮ್ಮು ಕಾಣಿಸಿಕೊಂಡಾಗಲೇ ತಕ್ಷಣ ಕಡ್ಡಾಯವಾಗಿ ಎಕ್ಸ್ ರೇ ಅಥವಾ ಸಿಟಿ ಸ್ಕ್ಯಾನ್ ಮಾಡಿಸಿ ಪರೀಕ್ಷಿಸಿಕೊಳ್ಳಬೇಕು.

* ಆಗ, ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಗುರುತಿಸಬಹುದು. ಸಿಟಿ ಸ್ಕ್ಯಾನ್‌ ದುಬಾರಿಯಾದರೂ ಸಮಸ್ಯೆ ಕಡಿಮೆ ಪ್ರಮಾಣದಲ್ಲಿದ್ದರೂ ಪತ್ತೆ ಮಾಡಿಕೊಳ್ಳಬಹುದಾಗಿದೆ ಎನ್ನುತ್ತಾರೆ ಅವರು.

ಗುಣಮುಖವಾದವರು

‘ಕೋವಿಡ್ ನ್ಯುಮೋನಿಯಾದಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಕೆಲವರಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡ ಉದಾಹರಣೆ ಇದೆ. ಹೀಗಾಗಿ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದನ್ನು ಬಿಡಲೇಬಾರದು. ಇಮ್ಯುನಿಟಿ ವೃದ್ಧಿಸಿಕೊಳ್ಳಬೇಕು. ಇದಕ್ಕಾಗಿ ಜಿಂಕ್ ಹಾಗೂ ವಿಟಿಮಿನ್–ಸಿ ಮಾತ್ರೆಗಳನ್ನು ಮುಂದುವರಿಸಬೇಕು’ ಎಂದು ಸಲಹೆ ನೀಡುತ್ತಾರೆ ಪಾಟೀಲ.

‘ಧೂಮಪಾನದಂತಹ ದುಶ್ಚಟವಿರುವವರಿಗೆ ಸಮಸ್ಯೆ ಹೆಚ್ಚಾಗಿ ಬಾಧಿಸುತ್ತದೆ. ಬೊಜ್ಜು ಇರುವವರಿಗೂ ಗಂಭೀರವೇ. ಏಕೆಂದರೆ, ಅವರಿಗೆ ಶ್ವಾಸಕೋಶದ ಸಾಮರ್ಥ್ಯ ಕ್ಷೀಣವಾಗಿರುತ್ತದೆ. ಅದರೊಂದಿಗೆ ಕೋವಿಡ್ ನ್ಯುಮೋನಿಯಾ ಕೂಡ ಸೇರಿದರೆ ಶ್ವಾಸಕೋಶಕ್ಕೆ ಆಕ್ಸಿಜನ್ ಪ್ರಮಾಣ ಕಡಿಮೆ ಆಗುತ್ತದೆ. ಚೇತರಿಸಿಕೊಳ್ಳುವುದು ಕೂಡ ಬಹಳ ತಡವಾಗುತ್ತದೆ. ಹೀಗಾಗಿ, ಚಳಿಗಾಲದ ಈ ದಿನಗಳಲ್ಲಿ ಬಹಳ ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.

ದೂರವಿರುವುದು ಹೇಗೆ?

* ಹೊರಗಡೆ ಹೋಗುವಾಗ ಮಾಸ್ಕ್‌ ಧರಿಸುವುದನ್ನು ಮರೆಯಲೇಬಾರದು.

* ಮಾತನಾಡುವಾಗ ಕೂಡ ಮಾಸ್ಕ್ ಕೆಳಗಿಳಿಸಬಾರದು

* ಮಾಸ್ಕ್‌ನ ಮೇಲ್ಮೈಯನ್ನು ಮುಟ್ಟಲೇಬಾರದು. ಒಂದು ವೇಳೆ ಮುಟ್ಟಿದರೂ ಕೂಡಲೇ ಕೈಗಳಿಗೆ ಸ್ಯಾನಿಟೈಸರ್‌ ಹಾಕಿಕೊಳ್ಳಬೇಕು.

* ಜನಸಂದಣಿ ಇರುವಲ್ಲಿಗೆ ಹೋಗುವುದನ್ನು ತಪ್ಪಿಸಬೇಕು.

* ಅಂತರ ಕಾಯ್ದುಕೊಳ್ಳಲೇಬೇಕು.

* ಸಮಸ್ಯೆ ಕಾಣಿಸಿಕೊಂಡ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT