ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯೊಂದಿಗೆ ಕುದುರದ ಅನೈತಿಕ ಸಂಬಂಧ: ಬಾಲಕನ ರುಂಡ ಕತ್ತರಿಸಿ ಹತ್ಯೆ

ಬಾಲಕನ ಬರ್ಬರ ಕೊಲೆ: ಇಬ್ಬರ ಬಂಧನ
Last Updated 27 ಸೆಪ್ಟೆಂಬರ್ 2022, 15:19 IST
ಅಕ್ಷರ ಗಾತ್ರ

ಬೆಳಗಾವಿ: ಮಹಿಳೆಯೊಂದಿಗೆ ಅನೈತಿಕ ಸಂಬಂಧ ಸಾಧ್ಯವಾಗದ ಕಾರಣ, ಶಾಲಾ ಬಾಲಕನನ್ನು ಬರ್ಬರವಾಗಿ ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಜಿಲ್ಲೆಯ ಯಮಕನಮರಡಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಹುಕ್ಕೇರಿ ತಾಲೂಕಿನ ಹೊಸೂರು ಗ್ರಾಮದ ಬಳಿ ಸೆ. 20ರಂದು ನದಿ ನೀರಿನಲ್ಲಿ ರುಂಡ ಕತ್ತರಿಸಿದ ದೇಹ ಪತ್ತೆಯಾಗಿತ್ತು. ಮೈಮೇಲಿನ ಬಟ್ಟೆಗಳನ್ನು ಕಳಚಿ, ಗೋಣಿಚೀಲದಲ್ಲಿ ಹಾಕಿ ನದಿಗೆ ಎಸೆಯಲಾಗಿತ್ತು. ಅತ್ಯಂತ ಕಠಿಣವಾಗಿದ್ದ ಈ ಪ್ರಕರಣವನ್ನು ಒಂದು ವಾರದಲ್ಲೇ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ಹೊಸೂರು ಗ್ರಾಮದ ನೂರ್ ಅಹಮದ್ ಕೊಣ್ಣೂರ (60) ಹಾಗೂ ಹಣಮಂತ ಬೇವನೂರ ಬಂಧಿತರು. ಬಾಲಕನ ರುಂಡವನ್ನು ಬೇರೊಂದು ಕಡೆ ಎಸೆದಿದ್ದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಆದರೂ ಇದೂವರೆಗೆ ಪತ್ತೆಯಾಗಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದರು.

ಹೃದಯ ವಿದ್ರಾವಕ ಕೃತ್ಯ:

ನಿಪ್ಪಾಣಿ ತಾಲ್ಲೂಕಿನ ನಾಯಿಂಗ್ಲಜ ಗ್ರಾಮದ ವಾಶಪ್ಪ ಎನ್ನುವವರು ತಮ್ಮ 12 ವರ್ಷದ ಒಬ್ಬನೇ ಪುತ್ರನನ್ನು ತಂಗಿಯ ಮನೆಯಲ್ಲಿ ಓದಲು ಬಿಟ್ಟಿದ್ದರು. ವಾಶಪ್ಪನ ಸಹೋದರಿಯ ಊರಾದ ಹೊಸೂರಿನಲ್ಲಿ ಬಾಲಕ ಶಾಲೆಗೆ ಹೋಗುತ್ತಿದ್ದ. ಇದೇ ಗ್ರಾಮದ ನೂರ್‌ಅಹಮದ್‌,ಬಾಲಕ ವಾಸವಿದ್ದ ಕುಟುಂಬದ ಮಹಿಳೆಹೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಳ್ಳಲು ಯತ್ನ ನಡೆಸಿದ್ದ. ಇದು ಸಾಧ್ಯವಾಗದ ಕಾರಣ, ಮಹಿಳೆ ಮೇಲೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶದಿಂದ ಬಾಲಕನನ್ನು ಕೊಲೆ ಮಾಡಿದ್ದಾನೆ ಎಂದು ಎಸ್ಪಿ ತಿಳಿಸಿದರು.

ಸೆ.17ರಂದು ಸೈಕಲ್‌ ಮೇಲೆ ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕನನ್ನು ನೂರ್‌ ಅಹಮದ್‌ ಅ‍ಪಹರಿಸಿದ್ದ. ಗಬ್ಬಿನ ಗದ್ದೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಇಡೀ ದಿನ ಬಾಲಕನ ಶವ, ಸೈಕಲ್‌ ಹಾಗೂ ಶಾಲಾ ಬ್ಯಾಗನ್ನು ಹೊಲದಲ್ಲೇ ಮುಚ್ಚಿಟ್ಟಿದ್ದ. ಮಾರನೆಯ ದಿನ ತನ್ನ ಸ್ನೇಹಿತ ಹಣಮಂತನಿಗೆ ವಿಷಯ ತಿಳಿಸಿದ್ದ.

ಇಬ್ಬರೂ ಸೇರಿಕೊಂಡು ಕುಡಗೋಲಿನಿಂದ ಬಾಲಕನ ತಲೆ ಕತ್ತರಿಸಿ, ಮೈಮೇಲಿನ ಬಟ್ಟೆ ತೆಗೆದಿದ್ದರು. ತಲೆಯನ್ನು ಒಂದು ಕಡೆ, ದೇಹವನ್ನು ಇನ್ನೊಂದು ಕಡೆ ನದಿಗೆ ಎಸೆದಿದ್ದರು. ಸೈಕಲ್‌ ಹಾಗೂ ಶಾಲಾ ಬ್ಯಾಗನ್ನು ಬೇರೆಬೇರೆ ಬಾವಿಗಳಿಗೆ ಹಾಕಿದ್ದರು. ಯಾರಿಂದಲೂ ಗುರುತಿಸಲು ಆಗದಂತೆ ಸಾಕ್ಷ್ಯ ನಾಶ ಮಾಡಿದ್ದರು ಎಂದು ಡಾ.ಸಂಜೀವ ಮಾಹಿತಿ ನೀಡಿದರು.

ತನಿಖೆಗೆ ಆಸರೆಯಾದ ಟೈ:

ಬಾಲಕನ ಶವ ಸಿಕ್ಕಾಗ ಒಳ ಉಡುಪು ಮಾತ್ರ ಇತ್ತು. ಆದರೆ, ಅದಕ್ಕೆ ಸಿಕ್ಕಿಕೊಂಡಿದ್ದ ಬಾಲಕನ ಶಾಲಾ ಟೈ ಪ್ರಕರಣ ಭೇದಿಸಲು ನೆರವಾಯಿತು. ಹೊಸೂರ ಗ್ರಾಮದಲ್ಲಿ ಸಾಕಷ್ಟು ವಿಚಾರಣೆ ನಡೆಸಿದ ಪೊಲೀಸರು ಕೊಲೆಯ ಮಾಹಿತಿ ಕಲೆ ಹಾಕಿದ್ದರು. ಸುಮಾರು 50 ಎಕರೆ ಕಬ್ಬಿನ ಗದ್ದೆಯಲ್ಲಿ ಡ್ರೋನ್‌ ಬಳಸಿ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾದರು ಎಂದೂ ಹೇಳಿದರು.

ಪ್ರಕರಣ ಭೇದಿಸಿದ ಹುಕ್ಕೇರಿ ಇನ್‌ಸ್ಪೆಕ್ಟರ್‌ ಮೊಹಮದ್‌ ರಫೀಕ್‌ ತಹಶೀಲ್ದಾರ್, ಯಮಕನಮರಡಿ ಇನ್‌ಸ್ಪೆಕ್ಟರ್ ರಮೇಶ ಛಾಯಾಗೋಳ, ಸಂಕೇಶ್ವರ ಇನ್‌ಸ್ಪೆಕ್ಟರ್‌ ಪ್ರಹ್ಲಾದ ಚೆನ್ನಗಿರಿ ಅವರ ನೇತೃತ್ವದ ತಂಡವನ್ನು ಎಸ್ಪಿ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT