ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಆರಂಭಗೊಳ್ಳದ ಪಿಯು ಕಾಲೇಜುಗಳು

ತಪ್ಪದ ಗ್ರಾಮೀಣ ವಿದ್ಯಾರ್ಥಿಗಳ ಪರದಾಟ, ಹೊಸ ಸರ್ಕಾರದ ಮೇಲೆ ನಿರೀಕ್ಷೆ
Published 3 ಆಗಸ್ಟ್ 2023, 23:57 IST
Last Updated 3 ಆಗಸ್ಟ್ 2023, 23:57 IST
ಅಕ್ಷರ ಗಾತ್ರ

ಇಮಾಮ್‌ಹುಸೇನ್ ಗೂಡುನವರ

ಬೆಳಗಾವಿ: ಹಿಂದಿನ ಬಿಜೆಪಿ ಸರ್ಕಾರ ಕಳೆದ ವರ್ಷ ರಾಜ್ಯಕ್ಕೆ ಮಂಜೂರು ಮಾಡಿದ್ದ 50 ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಈವರೆಗೆ ಕಾರ್ಯಾರಂಭ ಮಾಡದ ಕಾರಣ ಈ ವರ್ಷವೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪಿಯು ಶಿಕ್ಷಣಕ್ಕೆ ಪಟ್ಟಣಗಳಿಗೆ ಹೋಗಬೇಕಿದೆ.

ರಾಜ್ಯದ ಬಹುತೇಕ ಹಳ್ಳಿ, ಪಟ್ಟಣಗಳಿಗೆ ಸಮರ್ಪಕ ಬಸ್‌ ಸೌಕರ್ಯವಿಲ್ಲ. ಆರ್ಥಿಕ ಸಂಕಷ್ಟ, ಸುರಕ್ಷತೆ ಮತ್ತಿತರ ಕಾರಣಕ್ಕೆ ಹಲವರು ಪಿಯು ಶಿಕ್ಷಣ ಮೊಟಕುಗೊಳಿಸಿದ ಉದಾಹರಣೆಗಳಿವೆ. ಇದನ್ನು ಅರಿತ ಸರ್ಕಾರ, 2022ರ ಸೆಪ್ಟೆಂಬರ್‌ನಲ್ಲಿ ರಾಜ್ಯದ ವಿವಿಧೆಡೆ 50 ಸರ್ಕಾರಿ ಪಿಯು ಕಾಲೇಜು ಮಂಜೂರು ಮಾಡಿತು. ಇದಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳಲು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ನಿರ್ದೇಶಕರಿಗೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪತ್ರ ಬರೆದರು.

ಇದರ ಬೆನ್ನಲ್ಲೇ ರಾಜ್ಯದಲ್ಲಿನ 29 ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತೀಕರಿಸಿ, ಹೊಸ ಪಿಯು ಕಾಲೇಜುಗಳನ್ನು ಆರಂಭಿಸಲು ಬೇಕಾದ ಮೂಲಸೌಕರ್ಯಗಳ ಕುರಿತು ಆಯಾ ಜಿಲ್ಲೆಗಳ ಉಪನಿರ್ದೇಶಕರಿಂದ ಸರ್ಕಾರ ಮಾಹಿತಿ ಪಡೆದಿತ್ತು. ‘2023–24ನೇ ಸಾಲಿನಿಂದಲೇ ಈ ಕಾಲೇಜು ಆರಂಭವಾಗಲಿವೆ’ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ, ವಿಧಾನಸಭೆ ಚುನಾವಣೆ ಮತ್ತಿತರ ಕಾರಣಗಳಿಂದ ಹೊಸ ಕಾಲೇಜುಗಳ ಆರಂಭ ನನೆಗುದಿಗೆ ಬಿತ್ತು.

ಈ ಮಧ್ಯೆ, ರಾಜ್ಯದಲ್ಲಿನ 101 ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತೀಕರಿಸಿ ಹೊಸ ಸರ್ಕಾರಿ ಪದವಿಪೂರ್ವ ಕಾಲೇಜುಗಳನ್ನು ಆರಂಭಿಸುವ ಕುರಿತು ಸರ್ಕಾರವು 2023ರ ಏಪ್ರಿಲ್‌ನಲ್ಲಿ ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ)ಯಿಂದ ಮಾಹಿತಿ ಕೇಳಿದೆ.

ನಿರಾಸೆ ಮೂಡಿಸಿದೆ:

‘ನಮ್ಮೂರಿನಲ್ಲಿ ಸರ್ಕಾರಿ ಪಿಯು ಕಾಲೇಜು ಆರಂಭಗೊಳ್ಳುವ ನಿರೀಕ್ಷೆ ಇತ್ತು. ಆದರೆ, ಕಾರ್ಯಾರಂಭ ಮಾಡದಿರುವುದು ನಿರಾಸೆ ತಂದಿದೆ. 6 ಕಿ.ಮೀ ದೂರದ ಕಟಕೋಳ ಮತ್ತು 26 ಕಿ.ಮೀ ದೂರದ ರಾಮದುರ್ಗಕ್ಕೆ ವಿದ್ಯಾರ್ಥಿಗಳು ಹೋಗಬೇಕಿದೆ. ಬೆಳಗಿನ ಹೊತ್ತು ಸಕಾಲಕ್ಕೆ ಬಸ್‌ ಸಿಗದ ಕಾರಣ ತುಂಬಾ ಸಮಸ್ಯೆಯಾಗಿದೆ’ ಎಂದು ರಾಮದುರ್ಗ ತಾಲ್ಲೂಕಿನ ಕೆ.ಚಂದರಗಿಯ ಉದಯ ಸೋಮನಟ್ಟಿ ತಿಳಿಸಿದರು.

‘ಬೇಡಿಕೆ ಇರುವ ಕಡೆ ತ್ವರಿತವಾಗಿ ಸರ್ಕಾರಿ ಪಿಯು ಕಾಲೇಜು ಆರಂಭವಾದರೆ, ವಿದ್ಯಾರ್ಥಿಗಳಿಗೆ ಹಣ ಮತ್ತು ಸಮಯದ ಉಳಿತಾಯ ಆಗುತ್ತದೆ. ಸುರಕ್ಷತೆ ಕಾರಣಕ್ಕೆ ಹೆಣ್ಣುಮಕ್ಕಳು ಬೇರೆಡೆ ಅಧ್ಯಯನಕ್ಕೆ ತೆರಳಲಾಗದೆ, ಪಿಯು ಶಿಕ್ಷಣ ಮೊಟಕುಗೊಳಿಸುವುದು ತಪ್ಪುತ್ತದೆ’ ಎನ್ನುತ್ತಾರೆ ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ನಿವೃತ್ತ ಉಪನಿರ್ದೇಶಕ ಜಿ.ಎ.ತಿಗಡಿ.

ರಾಜ್ಯದಲ್ಲಿ 101 ಸ್ಥಳಗಳಲ್ಲಿ ಹೊಸ ಸರ್ಕಾರಿ ಪಿಯು ಕಾಲೇಜುಗಳ ಆರಂಭಕ್ಕೆ ಅಗತ್ಯವಿರುವ ಸೌಕರ್ಯಗಳ ಕುರಿತು ರಾಜ್ಯ ಸರ್ಕಾರಕ್ಕೆ ವರದಿ ನೀಡಬೇಕಿದೆ. –ಸಿಂಧೂ ರೂಪೇಶ ನಿರ್ದೇಶಕಿ ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ)

ಬೆಳಗಾವಿ ಜಿಲ್ಲೆಗೆ ಮಂಜೂರಾಗಿದ್ದ ಸರ್ಕಾರಿ ಪಿಯು ಕಾಲೇಜುಗಳಿಗೆ ಅಗತ್ಯವಿರುವ ಸೌಕರ್ಯಗಳ ಮಾಹಿತಿ ಸರ್ಕಾರಕ್ಕೆ ನೀಡಲಾಗಿದೆ. ಶೀಘ್ರ ಕಾಲೇಜು ಆರಂಭವಾದರೆ ವಿದ್ಯಾರ್ಥಿಗಳಿಗೆ ಅನುಕೂಲ

–ಎಂ.ಎಂ.ಕಾಂಬಳೆ ಉಪನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT