ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮಿ ಹೆಬ್ಬಾಳಕರ ಸಹಾಯ ಮರೆಯಲಾರೆ: ನಿರಂಜನಯ್ಯ

ಸಚಿವೆ ಮನೆಗೆ ಭೇಟಿ ನೀಡಿದ ನೇಹಾ ತಂದೆ ನಿರಂಜನಯ್ಯ: ಮೃಣಾಲ್‌ಗೆ ಮತ ನೀಡಲು ಮನವಿ
Published 3 ಮೇ 2024, 8:55 IST
Last Updated 3 ಮೇ 2024, 8:55 IST
ಅಕ್ಷರ ಗಾತ್ರ

ಬೆಳಗಾವಿ: ‘ನನ್ನ ಮಗಳ ಕೊಲೆಯಾದಾಗ ಎಲ್ಲರೂ ಪಕ್ಷಭೇದ ಮರೆತು ಸ್ಪಂದಿಸಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ತಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಮನೆಗೆ ಬಂದು ಧೈರ್ಯ ತುಂಬಿದರು. ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು. ಅವರಿಗೆ ಕೃತಜ್ಞತೆ ಸಲ್ಲಿಸಲು ಬೆಳಗಾವಿಗೆ ಬಂದಿದ್ದೇವೆ’ ಎಂದು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಮನೆಗೆ ಗುರುವಾರ ಭೇಟಿ ನೀಡಿದ ಮಾತನಾಡಿದ ಅವರು, ‘ಲಕ್ಷ್ಮಿ ಹೆಬ್ಬಾಳಕರ ಸಹೋದರಿ ಸ್ಥಾನದಲ್ಲಿ ನಿಂತು ನಮಗೆ ನ್ಯಾಯ ಕೊಡಿಸಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಅವರ ಬಳಿ ಮಾತನಾಡಿ ಪ್ರಕರಣವನ್ನು ಸಿಐಡಿಗೆ ವಹಿಸಿದ್ದಾರೆ. ವಿಶೇಷ ನ್ಯಾಯಾಲಯ ಕೂಡ ಸ್ಥಾಪನೆ ಮಾಡಲು ಕಾರಣರಾಗಿದ್ದಾರೆ. ಖುದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಮನೆಗೆ ಬಂದು ಸಾಂತ್ವನ ಹೇಳಿದರು. ನುಡಿದಂತೆ ನಡೆದ ಹೆಬ್ಬಾಳಕರ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.

‘ವಿಧಾನಸೌಧದಲ್ಲೂ ಲಕ್ಷ್ಮಿ ಹೆಬ್ಬಾಳಕರ ಚರ್ಚಿಸುವುದಾಗಿ ಹೇಳಿದ್ದಾರೆ. ನಮ್ಮ ವೀರಶೈವ ಲಿಂಗಾಯತ ಸಮಾಜದವರಾದ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಸಂಸದರಾದರೆ ಅವರೂ ಸಂಸತ್ತಿನಲ್ಲಿ ಧ್ವನಿ ಎತ್ತುತ್ತಾರೆ. ಆದ್ದರಿಂದ ಅವರಿಗೆ ಮತದಾರ ಬಾಂಧವರು ಆಶೀರ್ವಾದ ಮಾಡಬೇಕು’ ಎಂದೂ ಮನವಿ ಮಾಡಿದರು.

‘ನನ್ನ ಪರವಾಗಿ ಲಕ್ಷ್ಮಿ ಅವರು ಧ್ವನಿಯಾಗಿ ನಿಂತಿದ್ದಾರೆ. ನಾವೀಗ ಅವರ ಮಗನ ಪರವಾಗಿ ನಿಲ್ಲಬೇಕಿದೆ. ಅದಕ್ಕಾಗಿಯೇ ನಾನು ಪತ್ನಿಯ ಜತೆಗೆ ಇಲ್ಲಿಗೆ ಬಂದಿದ್ದೇನೆ’ ಎಂದೂ ಹೇಳಿದರು.

‘ಮಗಳ ಕೊಲೆ ವಿಚಾರವನ್ನು ಯಾರು ಕೂಡ ರಾಜಕೀಯಕ್ಕೆ ಬಳಸಿಲ್ಲ. ಎಲ್ಲರೂ ಪಕ್ಷಾತೀತ, ಜಾತ್ಯತೀತವಾಗಿ ಹೋರಾಟ ಮಾಡಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಪ್ರಲ್ಹಾದ್‌ ಜೋಶಿ ಅವರಿಗೆ ಹೇಳಿದ್ದೆ. ಅವರೂ ಭರವಸೆ ಕೊಟ್ಟಿದ್ದಾರೆ’ ಎಂದರು.

ನೇಹಾ ಹತ್ಯೆ ಆರೋಪಿ ಫಯಾಜ್‌ ಅವರನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸನ್ಮಾನ ಮಾಡಿದ ಫೋಟೊ ಕುರಿತು ಪ್ರತಿಕ್ರಿಯಿಸಿದ ನಿರಂಜನ್‌, ‘ಎಸ್ಸೆಸ್ಸೆಲ್ಸಿ ಇದ್ದಾಗ ಪ್ರತಿಭಾ ಪುರಸ್ಕಾರ ಮಾಡುತ್ತೇವೆ. ಅವರು ಬೆಳೆದ ಮೇಲೆ ಅಪರಾಧಿಯಾದರೆ ಏನು ಮಾಡಲು ಸಾಧ್ಯ? ಚನ್ನರಾಜ ಅವರು ಫಯಾಜ್‌ ಜತೆ ಇರುವ ಚಿತ್ರ ನಾಲ್ಕು ವರ್ಷ ಹಳೆಯದು. ಅದನ್ನು ರಾಜಕೀಯಕ್ಕೆ ಬಳಸುವುದು ತಪ್ಪು’ ಎಂದರು.

ನೇಹಾ ತಾಯಿ‌ ಗೀತಾ ಹಿರೇಮಠ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಇದ್ದರು.

ಇದಕ್ಕೂ ಮುನ್ನ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರೊಂದಿಗೆ ಚರ್ಚೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT