ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಉಸ್ತುವಾರಿ ಸಚಿವರೇ ಇಲ್ಲ, ಅಧಿಕಾರಿಗಳದ್ದೇ ದರ್ಬಾರು

ಜಿಲ್ಲೆಯವರೇ ನಾಲ್ವರು ಸಚಿವರಿದ್ದರೂ ನೇಮಕವಾಗಿಲ್ಲ
Last Updated 21 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲದಿರುವುದು, ಕೋವಿಡ್ ನಿರ್ವಹಣೆಯ ಮೇಲ್ವಿಚಾರಣೆಗೆ ತೊಡಕಾಗಿ ಪರಿಣಮಿಸಿದೆ. ಕಾಲಕಾಲಕ್ಕೆ ಪರಿಶೀಲನೆ ನಡೆಸುವವರು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವವರು ಮತ್ತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಅವರಿಂದ ಕೆಲಸ ತೆಗೆಸುವವರು ಇಲ್ಲವಾಗಿದೆ.

ಜಲಸಂಪನ್ಮೂಲ ಖಾತೆಯ ನಿರ್ವಹಣೆಯೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಅವರು ‘ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ಯುವತಿಯೊಬ್ಬರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿರುವ ಆರೋಪ’ಕ್ಕೆ ಸಿಲುಕಿದ್ದರಿಂದಾಗಿ, ನೈತಿಕ ಹೊಣೆ ಹೊತ್ತು ಮಾರ್ಚ್‌ 3ರಂದು ರಾಜೀನಾಮೆ ಸಲ್ಲಿಸಿದ್ದರು. ಇದಾಗಿ ಒಂದೂವರೆ ತಿಂಗಳೇ ಉರುಳಿದ್ದರು ಉಸ್ತುವಾರಿ ಸಚಿವರ ನೇಮಕ ಪ್ರಕ್ರಿಯೆ ನಡೆದಿಲ್ಲ. ಪರಿಣಾಮ, ಸಮನ್ವಯ ಕಾಯ್ದುಕೊಳ್ಳಲು ನಾಯಕನಿಲ್ಲದಂತಾಗಿದೆ.

ಉಪ ಮುಖ್ಯಮಂತ್ರಿಯೂ ಆಗಿರುವ ಲಕ್ಷ್ಮಣ ಸವದಿ, ಉಮೇಶ ಕತ್ತಿ, ಶಶಿಕಲಾ ಜೊಲ್ಲೆ ಹಾಗೂ ಶ್ರೀಮಂತ ಪಾಟೀಲ ಇದೇ ಜಿಲ್ಲೆಯ ಸಚಿವರಾಗಿದ್ದಾರೆ. ಇವರಲ್ಲಿ ಸವದಿ ಅವರಿಗೆ ರಾಯಚೂರು ಮತ್ತು ಶಶಿಕಲಾ ಅವರಿಗೆ ಪಕ್ಕದ ವಿಜಯಪುರ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ.

ಎರಡು ಜಿಲ್ಲೆಗಳಿಗೆ:ಜೆಡಿಎಸ್‌–ಕಾಂಗ್ರೆಸ್‌ ಸರ್ಕಾರ ಪತನವಾಗಿ, ಬಿಜೆಪಿ ಸರ್ಕಾರ ರಚನೆಯಾದ ಬಳಿಕ ನೆರೆಯ ಹುಬ್ಬಳ್ಳಿಯ ಜಗದೀಶ ಶೆಟ್ಟರ್‌ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇಮಿಸಿದ್ದರು. ಧಾರವಾಡದೊಂದಿಗೆ ಈ ಜಿಲ್ಲೆಯ ಉಸ್ತುವಾರಿಯನ್ನೂ ನೋಡಿಕೊಳ್ಳಬೇಕಾದ ಜವಾಬ್ದಾರಿ ಇದ್ದಿದ್ದರಿಂದಾಗಿ ಇಲ್ಲಿಗೆ ಆಗಾಗ ಭೇಟಿ ನೀಡುವುದಕ್ಕೆ ಸಾಧ್ಯವಾಗಿರಲಿಲ್ಲ. ಸಾರ್ವಜನಿಕರ ಸಂಪರ್ಕಕ್ಕಾಗಿ ಇಲ್ಲಿನ ಜಿಲ್ಲಾ ಪಂಚಾಯ್ತಿ ಹಳೆಯ ಕಟ್ಟಡದಲ್ಲಿ ಕಚೇರಿ ತೆರೆದಿದ್ದರಾದರೂ ಅಲ್ಲಿಗೆ ಬಂದಿದ್ದು ಅಪರೂಪವೇ ಆಗಿತ್ತು. ಆದರೆ, ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳನ್ನು ಎಚ್ಚರಿಸುತ್ತಿದ್ದರು.

ಬಳಿಕ ನೇಮಕವಾಗಿದ್ದ (2020ರ ಜೂನ್ 2) ಗೋಕಾಕ ಶಾಸಕ ರಮೇಶ ಜಾರಕಿಹೊಳಿ ನಗರದಲ್ಲಿ ಸಾರ್ವಜನಿಕ ಕುಂದುಕೊರತೆ ಕಚೇರಿ ಆರಂಭಿಸಿರಲಿಲ್ಲ. ಪ್ರವಾಸಿ ಮಂದಿರದಲ್ಲಿ ಆಗಾಗ ಅಧಿಕಾರಿಗಳ ಸಭೆ ನಡೆಸಿ, ಕೋವಿಡ್ ಪರಿಸ್ಥಿತಿಯ ಮಾಹಿತಿ ಪಡೆಯುತ್ತಿದ್ದರು. ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸುತ್ತಿದ್ದರು. ಜಿಲ್ಲೆಯ ಮಟ್ಟದಲ್ಲಿ ನಿರ್ದಿಷ್ಟ ತೀರ್ಮಾನಗಳನ್ನು ಕೈಗೊಳ್ಳುವುದು ಸಾಧ್ಯವಾಗುತ್ತಿತ್ತು. ಪ್ರಸ್ತುತ, ಜಿಲ್ಲಾಮಟ್ಟದ ಅಧಿಕಾರಿಗಳೇ ಎಲ್ಲ ಹೊಣೆಯನ್ನೂ ನಿರ್ವಹಿಸುವಂತಾಗಿದೆ. ಲೋಪ–ದೋಷಗಳಾದಲ್ಲಿ ಸರಿಪಡಿಸುವ ಹಾಗೂ ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಕೋವಿಡ್ ತುರ್ತು ಪರಿಸ್ಥಿತಿಯ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿ ಎದ್ದು ಕಾಣುತ್ತಿದೆ.

ಮಹತ್ವದ್ದಾಗಿದೆ:ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಅವರು, ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕೆಲವು ಸೂಚನೆಗಳನ್ನೂ ನೀಡಿದ್ದಾರೆ. ಆದರೆ, ಉಸ್ತುವಾರಿ ಸಚಿವರು ನಡೆಸುವ ಸಭೆಗೆ ಹೆಚ್ಚಿನ ಮಹತ್ವ ಇರುತ್ತದೆ. ಈ ಹಿನ್ನೆಲೆಯಲ್ಲಿ ‘ಉಸ್ತುವಾರಿ’ ನೇಮಕದ ವಿಷಯ ಮಹತ್ವ ಪಡೆದುಕೊಂಡಿದೆ.

ಜಿಲ್ಲಾ ಉಸ್ತುವಾರಿ ಆಗುವುದಕ್ಕೆ ಜಿಲ್ಲೆಯ ಸಚಿವರ ನಡುವೆ ತೀವ್ರ ಪೈಪೋಟಿ ಕಂಡುಬಂದಿರುವುದರಿಂದ ನೇಮಕ ಪ್ರಕ್ರಿಯೆಗೆ ಮುಖ್ಯಮಂತ್ರಿ ಮುಂದಾಗಿಲ್ಲ ಎನ್ನಲಾಗಿದೆ. ಜಿಲ್ಲೆಯವರಿಗೇ ಆ ಸ್ಥಾನ ಸಿಗುವುದೋ ಅಥವಾ ಮತ್ತೆ ಶೆಟ್ಟರ್ ಅವರ ಹೆಗಲೇರುವುದೋ ಎನ್ನುವ ಕುತೂಹಲವೂ ಜನರಲ್ಲಿದೆ. ಉಸ್ತುವಾರಿ ಸಚಿವರಿಗೆ ಸಾಥ್ ನೀಡುತ್ತಿದ್ದ ಬೆಳಗಾವಿ ಸಂಸದರೂ ಈಗ ಇಲ್ಲವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT