ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ಬಡಾವಣೆ: ಸೌಲಭ್ಯಕ್ಕೆ ಆಗ್ರಹ

Last Updated 11 ಮೇ 2019, 14:24 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ಬಾಕ್ಸೈಟ್ ರಸ್ತೆ ಪಕ್ಕದಲ್ಲಿರುವ ಎಚ್‌.ಡಿ. ಕುಮಾರಸ್ವಾಮಿ ಬಡಾವಣೆಗೆ ಮೂಲಸೌಲಭ್ಯ ಕಲ್ಪಿಸಬೇಕು’ ಎಂದು ಅಲ್ಲಿನ ನಿವಾಸಿಗಳ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಪಟ್ಕಲ್‌ ಆಗ್ರಹಿಸಿದರು.

‘12 ವರ್ಷಗಳ ಹಿಂದೆಯೇ ಈ ಬಡಾವಣೆ ನಿರ್ಮಾಣವಾಗಿದೆ. ಆಗಿನಿಂದಲೂ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದೇವೆ. ಹಲವು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಈ ಬಡಾವಣೆ ಬುಡಾ ವ್ಯಾಪ್ತಿಯಲ್ಲಿ ಬರುತ್ತದೆ. ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿಲ್ಲ. ನಗರಪಾಲಿಕೆ ಹಾಗೂ ಬುಡಾ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ರಹವಾಸಿಗಳು ಪರದಾಡುವಂತಾಗಿದೆ’ ಎಂದು ಆರೋಪಿಸಿದರು.

‘ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮತ್ತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗಮನಕ್ಕೂ ತಂದಿದ್ದೆವು. ಸಮಸ್ಯೆ ಪರಿಹರಿಸುವಂತೆ ಅವರು ಸೂಚಿಸಿ 8 ತಿಂಗಳುಗಳು ಕಳೆದಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ, ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ನಿವಾಸಿಗಳು ಖಾಲಿ ಕೊಡಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಈಶ್ವರ ಗಾಣಿಗೇರ, ಅರವಿಂದ ಜೋಶಿ, ಅಭಿನಯ ಸೋಲಿ, ಯಲ್ಲಪ್ಪ ಪಾಟೀಲ, ಮಹಾದೇವ ಹೊಂಗಲ, ಬಿ.ಜಿ. ಪಟ್ಟಣಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT