ಬೆಳಗಾವಿ: ‘ದೇಶಕ್ಕೆ ಪಾರದರ್ಶಕ ಮತ್ತು ಸುಭದ್ರ ಆಡಳಿತ ಒದಗಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸಲು ರಾಷ್ಟ್ರದ ಇತರೆ ರಾಜಕೀಯ ಪಕ್ಷಗಳೆಲ್ಲ ಒಂದಾಗಿರುವುದು ದೇಶದ ಪಾಲಿಗೆ ಅಪಾಯಕಾರಿ ಬೆಳವಣಿಗೆ. ಪ್ರತಿಪಕ್ಷಗಳು ಎಷ್ಟೇ ಪ್ರಯತ್ನಿಸಿದರೂ ಮೋದಿ ಮಣಿಸಲು ಆಗುವುದಿಲ್ಲ’ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದರು.
ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ವಿರೋಧಿ ಮತಗಳಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆಯೇ ಹೊರತು, ಇದು ವಾಸ್ತವವಾಗಿ ಕಾಂಗ್ರೆಸ್ ಗೆಲುವಲ್ಲ. ದೇಶಕ್ಕೆ ಮೋದಿ ಬೇಕಿದೆ. ದೇಶ ಸುರಕ್ಷಿತವಿದ್ದರೆ ಮಾತ್ರ, ಎಲ್ಲ ರಾಜ್ಯಗಳೂ ಸುರಕ್ಷಿತವಾಗಿರುತ್ತವೆ. ಇಲ್ಲದಿದ್ದರೆ ಕರ್ನಾಟಕವೂ ತಾಲಿಬಾನ್ ಆಗಲಿದೆ. ಅಗತ್ಯಬಿದ್ದರೆ ಶ್ರೀರಾಮ ಸೇನೆಯಿಂದಲೇ ‘ಮೋದಿ ಗೆಲ್ಲಿಸಿ, ದೇಶ ಉಳಿಸಿ’ ಎಂಬ ಅಭಿಯಾನ ಆರಂಭಿಸುತ್ತೇವೆ’ ಎಂದರು.
‘ಯುಪಿಎ ಬಣದಲ್ಲಿರುವ ಪ್ರತಿಪಕ್ಷಗಳಿಗೆ ಮುಸ್ಲಿಂ ತುಷ್ಠೀಕರಣ ಬೇಕಾಗಿದೆಯೇ ಹೊರತು, ಹಿಂದುತ್ವ ಬೇಡ. ಅವರಿಗೆ ದೇಶದ್ರೋಹಿಗಳು ಬೇಕೇ ಹೊರತು ದೇಶಭಕ್ತರಲ್ಲ. ದೇಶಕ್ಕಾಗಿ ಹೋರಾಡಿದ ವೀರ್ ಸಾವರ್ಕರ್, ಭಗತ್ ಸಿಂಗ್ ಅವರಂತಹ ನಾಯಕರ ಪಾಠಗಳನ್ನು ಕಾಂಗ್ರೆಸ್ ಸರ್ಕಾರ ಪಠ್ಯದಿಂದ ತೆಗೆದಿದ್ದು ಏಕೆ?’ ಎಂದು ಪ್ರಶ್ನಿಸಿದರು.
ಏಕರೂಪ ನಾಗರಿಕ ಸಂಹಿತೆ ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಮುತಾಲಿಕ, ‘50 ಲಕ್ಷಕ್ಕೂ ಅಧಿಕ ಜನರು ಇದರ ಜಾರಿಗೆ ಬೆಂಬಲ ನೀಡಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಮೀನಮೇಷ ಎಣಿಸದೆ ತಕ್ಷಣವೇ ಜಾರಿಗೊಳಿಸಬೇಕು. ಏಕರೂಪ ನಾಗರಿಕ ಸಂಹಿತೆ ಜಾರಿಗೆ ಒತ್ತಾಯಿಸಿ ಶ್ರೀರಾಮಸೇನೆ ಸಂಘಟನೆಯಿಂದ ಜುಲೈ 18ರಿಂದ 28ರ ವರೆಗೆ 5 ಲಕ್ಷ ಸಹಿ ಸಂಗ್ರಹಿಸುವ ಆಂದೋಲನ ಆರಂಭಿಸಲಾಗುವುದು’ ಎಂದರು.
‘ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ 30 ವರ್ಷಗಳಿಂದ ಎಲ್ಲ ಸರ್ಕಾರಗಳಿಗೆ ಸೂಚನೆ ಕೊಡುತ್ತಿದೆ. ಕಾಂಗ್ರೆಸ್‌ನ ಮುಸ್ಲಿಂ ತುಷ್ಠೀಕರಣದ ಪರಿಣಾಮ ಇದು ಜಾರಿಯಾಗಿಲ್ಲ. ಸತತ ಎರಡನೇ ಬಾರಿ ಅಧಿಕಾರದಲ್ಲಿರುವ ಬಿಜೆಪಿಯು ಇದಕ್ಕಾಗಿ 9 ವರ್ಷ ಕಾಯುವ ಅಗತ್ಯವಿರಲಿಲ್ಲ. ಶರಿಯಾ ಕಾನೂನು ಪ್ರಕಾರ, ನಡೆಯಬೇಕು ಎನ್ನುವವರು ಇಲ್ಲಿಂದ ಅಫ್ಘಾನಿಸ್ತಾನಕ್ಕೆ ಹೋಗಬೇಕು. ಆರು ತಿಂಗಳಲ್ಲಿ ಕಾನೂನು ಜಾರಿಗೊಳಿಸದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಧಾವೆ ಹೂಡುತ್ತೇವೆ’ ಎಂದು ಎಚ್ಚರಿಸಿದರು.
‘ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವ ಕುರಿತು ಕಾಂಗ್ರೆಸ್ ಸರ್ಕಾರ ಕೈಗೊಂಡ ನಿರ್ಧಾರ ಸ್ವಾಗತಾರ್ಹ. ಖಾಸಗಿ ದೇವಸ್ಥಾನಗಳಲ್ಲೂ ಈ ನಿಯಮ ಜಾರಿಯಾಗಬೇಕು’ ಎಂದು ಆಗ್ರಹಿಸಿದರು.
‘ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ಜೈನ ಮುನಿಗಳ ಹತ್ಯೆ ತಾಲಿಬಾನ್ ಮಾದರಿಯಲ್ಲಿ ನಡೆದಿದೆ. ತಾಲಿಬಾನ್ ಮನಸ್ಥಿತಿ ಹೊಂದಿದವರೇ ಈ ಕೃತ್ಯ ಎಸಗಿದ್ದಾರೆ. ಇದರಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಬೇಕು. ಈ ಪ್ರಕರಣವನ್ನು ತನಿಖೆಗಾಗಿ ಸಿಬಿಐಗೆ ವಹಿಸುವ ಅಗತ್ಯವಿಲ್ಲ. ಆದರೆ, ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.
ಜೈನ ಮುನಿಗಳ ಕೊಲೆ ಮಾಡಿದ ಆರೋಪಿಗಳ ಪರವಾಗಿ ಬೆಳಗಾವಿ ವಕೀಲರ ಸಂಘದವರು ಯಾರೂ ವಕಾಲತ್ತು ವಹಿಸಬಾರದು. ಒಂದುವೇಳೆ ವಕಾಲತು ವಹಿಸಿದರೆ ನಾವು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಎ.ಕೆ.ಕೊಟ್ಟೂರಶೆಟ್ಟಿ, ಆದಿತ್ಯ ಶಾಸ್ತ್ರಿ, ರಾಜು ಕೋಕಿತ್ಕರ್ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.