ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟರಿಗಳಿಗೆ ಸೌಲಭ್ಯ ಒದಗಿಸಲು ಪ್ರಯತ್ನ: ಕಡಾಡಿ

Published 27 ಫೆಬ್ರುವರಿ 2024, 4:26 IST
Last Updated 27 ಫೆಬ್ರುವರಿ 2024, 4:26 IST
ಅಕ್ಷರ ಗಾತ್ರ

ಬೆಳಗಾವಿ: ‘ಜನರಿಗೆ ತ್ವರಿತವಾಗಿ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನೋಟರಿಗಳಿಗೆ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು’ ಎಂದು ರಾಜ್ಯಸಭಾ ಸದಸ್ಯ ಈರ‌ಣ್ಣ ಕಡಾಡಿ ಭರವಸೆ ನೀಡಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ರಾಜ್ಯ ನೋಟರಿಗಳ ಸಂಘ ಭಾನುವಾರ ಹಮ್ಮಿಕೊಂಡಿದ್ದ 14ನೇ ರಾಜ್ಯಮಟ್ಟದ ನೋಟರಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವು ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತಿವೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನೋಟರಿಗಳ ಪಾತ್ರ ಹಿರಿದಾಗಿದೆ. ರಾಜ್ಯಸಭೆಯಲ್ಲಿ ನಿಮ್ಮ ಪರವಾಗಿ ಧ್ವನಿ ಎತ್ತುತ್ತೇನೆ’ ಎಂದರು.

ಶಾಸಕ ಆಸೀಫ್‌ ಸೇಠ್‌, ‘ಬೆಳಗಾವಿಯಲ್ಲಿ ನೋಟರಿ ಸಮುದಾಯ ಭವನ ನಿರ್ಮಾಣಕ್ಕಾಗಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಒದಗಿಸಲು ಪ್ರಯತ್ನಿಸಲಾಗುವುದು. ಅಲ್ಲದೆ, ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ₹9 ಲಕ್ಷ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಾಧೀಶ ವಿ.ಗೋಪಾಲಗೌಡ, ‘ಕೇಂದ್ರ ಮತ್ತು ರಾಜ್ಯ ಸರ್ಕಾರವು ನೋಟರಿಗಳನ್ನು ಸಂವಿಧಾನಬದ್ಧವಾಗಿ ಆಯ್ಕೆ ಮಾಡುತ್ತದೆ. ಆದರೆ, ಸರ್ಕಾರದ ಇತರೆ ಅಧಿಕಾರಿಗಳಂತೆ ಅವರಿಗೆ ವೇತನ, ಸೌಲಭ್ಯ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ನೋಟರಿಗಳು ಹೋರಾಟ ನಡೆಸಬೇಕಿದೆ’ ಎಂದರು.

ರಾಜ್ಯ ನೋಟರಿಗಳ ಸಂಘದ ಅಧ್ಯಕ್ಷ ಶ್ರೀಕಾಂತ ಪಾಟೀಲ, ‘ರಾಜ್ಯದಾದ್ಯಂತ ನೋಟರಿಗಳು ಅನುಭವಿಸುತ್ತಿರುವ ಸಮಸ್ಯೆಗಳು ಗಮನಕ್ಕೆ ಬಂದಿವೆ. ಸರ್ಕಾರದ ನೆರವಿನೊಂದಿಗೆ ಅವುಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್‌ ನ್ಯಾಯಾಧೀಶೆ ಎಲ್.ವಿಜಯಲಕ್ಷ್ಮಿ ದೇವಿ, ಅಖಿಲ ಭಾರತ ನೋಟರಿ ಸಂಘದ ಪ್ರಧಾನ ಕಾರ್ಯದರ್ಶಿ ಆಸೀಫ್‌ಅಲಿ ಶೇಖ್‌ಹುಸೇನ್ ಮಾತನಾಡಿದರು. ರಾಜ್ಯ ನೋಟರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಚಿಕ್ಕನಗೌಡರ, ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸಪ್ಪ ಬಾಗೇವಾಡಿ, ರಾಜ್ಯ ನೋಟರಿ ಅಕಾಡೆಮಿ ಅಧ್ಯಕ್ಷ ಬಿ.ಎಸ್.ಪ್ರಶಾಂತ, ಎಸ್.ಎಸ್.ಕಿವಡಸಣ್ಣವರ, ಕೆ.ಬಿ.ನಾಯಕ, ಇ.ಎಂ.ಪುಟ್ಟಸ್ವಾಮಿ ಇತರರಿದ್ದರು. ರಾಜ್ಯದ ವಿವಿಧೆಡೆಯ ನೋಟರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT