ಬುಧವಾರ, ಮಾರ್ಚ್ 29, 2023
31 °C
ಸರ್ಕಾರದ ಕ್ರಮಕ್ಕೆ ಸ್ವಾಗತ; ವಿಶೇಷ ಅನುದಾನಕ್ಕೆ ಒತ್ತಾಯ

‘ಕಿತ್ತೂರು ಕರ್ನಾಟಕ’: ಹೆಸರಾಯಿತು, ಅಭಿವೃದ್ಧಿಯೂ ಆಗಲಿ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಮುಂಬೈ ಕರ್ನಾಟಕ ಪ್ರದೇಶವನ್ನು ‘ಕಿತ್ತೂರು ಕರ್ನಾಟಕ’ ಎಂದು ಮರುನಾಮಕರಣ ಮಾಡಬೇಕು ಎನ್ನುವ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿರುವುದಕ್ಕೆ ಇಲ್ಲಿನ ಜನರಲ್ಲಿ ಸಂಭ್ರಮ ವ್ಯಕ್ತವಾಗಿದೆ. ಇದೇ ವೇಳೆ, ಈ ಭಾಗದ ಅಭಿವೃದ್ಧಿಗೆ ಅನುದಾನವನ್ನೂ ಒದಗಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಚನ್ನಮ್ಮನ ಕಿತ್ತೂರು ಉತ್ಸವ’ದಲ್ಲೆ ಈ ಘೋಷಿಸುವಂತೆ ಜನರು ಹಾಗೂ ಸಂಘಟನೆಗಳವರು ಆಗ್ರಹಿಸಿದ್ದರು. ಉತ್ಸವದಲ್ಲಿ ಘೋಷಿಸಿ ಸ್ಪಂದಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ಸಭೆಯಲ್ಲೂ ಅನುಮೋದನೆ ಸಿಗುವಂತೆ ಮಾಡಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

‘ಮುಂಬೈ ಕರ್ನಾಟಕ’ ಎನ್ನುವುದು ದಾಸ್ಯದ ಸಂಕೇತವಾಗಿದೆ. ಅದರಿಂದ ಮುಕ್ತಿ ಕೊಟ್ಟು ನಮ್ಮ ಅಸ್ಮಿತೆ ಪೋಷಿಸಬೇಕು ಎನ್ನುವ ಬಹು ವರ್ಷಗಳ ಬೇಡಿಕೆಗೆ ಈ ಭಾಗದವರೇ ಆದ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ. ಇದು ಸಂತಸಕ್ಕೆ ಕಾರಣವಾಗಿದೆ. ಮುಂಬೈ ಪ್ರಾಂತ್ಯದಲ್ಲಿನ 4 ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ವಿಜಯಪುರ ಮತ್ತು ಉತ್ತರ ಕನ್ನಡ (ಪ್ರಸ್ತುತ ಗದಗ, ಹಾವೇರಿ ಮತ್ತು ಬಾಗಲಕೋಟೆ ಸೇರಿ 7 ಜಿಲ್ಲೆಗಳು) ಅಖಂಡ ಕರ್ನಾಟಕಕ್ಕೆ ಸೇರಿ 65 ವರ್ಷಗಳಾಗಿವೆ. ಆಗಿನಿಂದಲೂ ಮುಂಬೈ ಕರ್ನಾಟಕ ಎಂದೇ ಕರೆಯಲಾಗುತ್ತಿತ್ತು.

‘ಹೈದರಾಬಾದ್‌ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಎಂದು ಕರೆಯುವುದು ದಾಸ್ಯದ ಸಂಕೇತ. ಅವುಗಳನ್ನು ಕ್ರಮವಾಗಿ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು’ ಎಂದು ಖ್ಯಾತ ಸಂಶೋಧಕ ದಿ.ಚಿದಾನಂದಮೂರ್ತಿ ಬಲವಾಗಿ ಪ್ರತಿಪಾದಿಸಿದ್ದರು. ಹಲವು ಬಾರಿ ಸರ್ಕಾರದ ಗಮನಸೆಳೆದಿದ್ದರು. ಸಂಘಟನೆಗಳು ಕೂಡ ದನಿಗೂಡಿಸಿದ್ದವು.

ಇನ್ನೊಂದೆಡೆ, ಕೇವಲ ಹೆಸರು ಬದಲಾವಣೆಯಿಂದ ಈ ಭಾಗದ ಅಭಿವೃದ್ಧಿ ಆಗುವುದಿಲ್ಲ. ಜೊತೆಗೆ ಸಮಗ್ರ ಅಭಿವೃದ್ಧಿಗೆ ಬೇಕಾದ ಆರ್ಥಿಕ ಶಕ್ತಿಯನ್ನೂ ತುಂಬಬೇಕು ಎನ್ನುವ ಒತ್ತಾಯವೂ ಕೇಳಿಬಂದಿದೆ.

‘ದಾಸ್ಯದ ಸಂಕೇತದ ಹೆಸರನ್ನು ಕಿತ್ತು ಹಾಕಬೇಕು. ನಮ್ಮದೇ ಆದ ಹೆಸರಿಡಬೇಕು ಎಂಬ ಈ ಭಾಗದ ಜನರ ಕೂಗನ್ನು ಮುಖ್ಯಮಂತ್ರಿ ಅರ್ಥ ಮಾಡಿಕೊಂಡು ಅಭಿನಂದನಾರ್ಹ ನಿರ್ಧಾರ ಕೈಗೊಂಡಿದ್ದಾರೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪ್ರತಿಕ್ರಿಯಿಸಿದರು.

‘ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕ್ರಮ ವಹಿಸಿದಂತೆ, ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿ ದೊಡ್ದ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಬೇಕು. ಗಡಿ ಸೇರಿದಂತೆ ಅನೇಕ ವಿಷಯಗಳನ್ನು ಮರೆತು ಜನರು ನಮಗೆ (ಬಿಜೆಪಿಗೆ) ಬೆಂಬಲ ನೀಡಿದ್ದಾರೆ. ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭಿವೃದ್ಧಿ ಪರವಾಗಿ ಚಿಂತನೆ ಮಾಡುವ ಅಗತ್ಯವಿದೆ’ ಎಂದು ಹೇಳಿದರು.

‘ಕನ್ನಡ ನಾಡು–ನುಡಿಯ ಬಗ್ಗೆ ಅಧ್ಯಯನ ಮಾಡಿದ್ದ ಪ್ರೊ.ಚಿದಾನಂದ ಮೂರ್ತಿ, ಎಂ.ಎಂ. ಕಲ್ಬುರ್ಗಿ ಅವರ ಪರಿಕಲ್ಪನೆ ಇದಾಗಿತ್ತು. ಅದಕ್ಕೆ ಕೊನೆಗೂ ಮನ್ನಣೆ ದೊರೆತಂತಾಗಿದೆ. ಕಿತ್ತೂರು ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಮಹತ್ವದ ಹೆಸರು. ನಮ್ಮ ಅಸ್ಮಿತೆಯನ್ನು ಗುರುತಿಸುವ ಕೆಲಸ ಹೆಸರು ಬದಲಾವಣೆ ಮೂಲಕ ಆಗಿದೆ. ನಾವು ಯಾವ ಪ್ರದೇಶದವರು ಎನ್ನುವುದನ್ನು ಈಗ ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ’ ಎನ್ನುತ್ತಾರೆ ಸಾಹಿತಿ ಡಾ.ರಾಮಕೃಷ್ಣ ಮರಾಠೆ.

‘ಮುಖ್ಯಮಂತ್ರಿಯು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ. ಈ ಭಾಗದವರು ಅದರಲ್ಲೂ ಗಡಿ ನಾಡಿನ ಕನ್ನಡಿಗರು ಸಂತಸಪಡುವ ವಿಷಯ ಇದಾಗಿದೆ. ಸಾಂಸ್ಕೃತಿಕ ಮುದ್ರೆ ಒತ್ತಿರುವ ಮಹತ್ವದ ನಿರ್ಣಯ ಇದಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಆತಂಕವಿದೆ’
‘ಕಿತ್ತೂರು ಕರ್ನಾಟಕ ಎಂದು ಹೆಸರಿಟ್ಟಿರುವುದರಿಂದ ದೇಶಾಭಿಮಾನ ಹಾಗೂ ಹೆಮ್ಮೆ ಮೂಡುತ್ತದೆ ನಿಜ. ಆದರೆ, ಇದನ್ನೇ ಆಧಾರವಾಗಿ ಇಟ್ಟುಕೊಂಡು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಗೆ ಕೆಲವರು ಮುಂದಿನ ದಿನಗಳಲ್ಲಿ ಆಗ್ರಹಿಸಬಹುದು ಎನ್ನುವ ಆತಂಕ ನನಗಿದೆ. ಕರ್ನಾಟಕದ ಏಕೀಕರಣಕ್ಕಾಗಿ ಬಹಳಷ್ಟು ಮಂದಿ ಹೋರಾಡಿದ್ದಾರೆ; ತ್ಯಾಗ ಮಾಡಿದ್ದಾರೆ. ಹೀಗಿರುವಾಗ, ಏನೇನೋ ಕಾರಣ ಹುಡುಕಿ ಕರ್ನಾಟಕವನ್ನು ಒಡೆಯುವ ಕೆಲಸ ಮಾಡಬಾರದು’ ಎಂದು ಕವಿ ಜಿನದತ್ತ ದೇಸಾಯಿ ಪ್ರತಿಕ್ರಿಯಿಸಿದರು.

‘ಹೆಸರು ಬದಲಾವಣೆಯಿಂದ ಮಹತ್ವದ ಸುಧಾರಣೆಯೇನೂ ಆಗುವುದಿಲ್ಲ. ರಾಜಕೀಯದವರು ದುರ್ಲಾಭ ಪಡೆಯುವಂತಹ ಸಾಧ್ಯತೆಯೂ ಇರುತ್ತದೆ. ರಾಜ್ಯದಲ್ಲಿರುವ ನಾವೆಲ್ಲರೂ ಒಂದು ಎನ್ನುವ ಭಾವನೆ ಜನರಲ್ಲಿ ಇತ್ತೀಚೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ಪ್ರಾದೇಶಿಕ ಭಿನ್ನತೆಗಳಿರುವುದನ್ನು ಗಟ್ಟಿಗೊಳಿಸುವ ಕೆಲಸಕ್ಕೆ ಕೈ ಹಾಕಬಾರದು’ ಎಂದು ಅವರು ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು