ಸೋಮವಾರ, ಜೂನ್ 27, 2022
24 °C
ಬಸ್‌ ಹೊಂದಿಸಲು ಚುನಾವಣಾ ಸಿಬ್ಬಂದಿ ಪರದಾಟ

ಉಪ ಚುನಾವಣೆ ಮೇಲೆ ಮುಷ್ಕರ ಪರಿಣಾಮ

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಇಲ್ಲಿನ ಎನ್‌ಡಬ್ಲ್ಯುಕೆಆರ್‌ಟಿಸಿ ನೌಕರರು ಮುಷ್ಕರ ಮುಂದುವರಿಸಿರುವುದು, ಬೆಳಗಾವಿ  ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಕಾರ್ಯಚಟುವಟಿಕೆ ಮೇಲೂ ಪರಿಣಾಮ ಬೀರಿದೆ.

ಏ. 17ರಂದು ಮತದಾನ ನಡೆಯಲಿದೆ. ಕ್ಷೇತ್ರವು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, 2,566 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಿದ್ಯುನ್ಮಾನ ಮತಯಂತ್ರಗಳು, ವಿವಿ ಪ್ಯಾಟ್‌ಗಳು ಮೊದಲಾದ ಚುನಾವಣಾ ಸಾಮಗ್ರಿಗಳನ್ನು ತಾಲ್ಲೂಕು ಕೇಂದ್ರಗಳಿಂದ ಗ್ರಾಮಗಳಲ್ಲಿನ ಮತಗಟ್ಟೆಗಳಿಗೆ ರವಾನಿಸಬೇಕಾಗುತ್ತದೆ. ಮತದಾನದ ಮುನ್ನಾ ದಿನವಾದ ಏ.16ರಂದು ನಿಯೋಜಿತ ಸಿಬ್ಬಂದಿಯು ಆಯಾ ಮತಗಟ್ಟೆಗಳನ್ನು ತಲುಪುವುದಕ್ಕೆ ಬಸ್‌ಗಳು ಬೇಕಾಗುತ್ತವೆ. ಸಾರಿಗೆ ಸಂಸ್ಥೆ ನೌಕರರು ಕೆಲಸದಿಂದ ದೂರ ಉಳಿದು ಮುಷ್ಕರದಲ್ಲಿ ತೊಡಗಿರುವುದರಿಂದಾಗಿ, ಬಸ್‌ಗಳ ವ್ಯವಸ್ಯೆ ಮಾಡಿಕೊಳ್ಳುವುದು ಚುನಾವಣಾ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಸೋಮವಾರ ನಿಗದಿಯಾಗಿದ್ದ ತರಬೇತಿ ಕಾರ್ಯಕ್ರಮಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಬಂದು ತಲುಪುವಂತೆ ಸಹಾಯಕ ಚುನಾವಣಾ ಅಧಿಕಾರಿಗಳು ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಸಿಬ್ಬಂದಿಗೆ ಸೂಚಿಸಿದ್ದರು. ಎನ್‌ಡಬ್ಲ್ಯುಕೆಆರ್‌ಟಿಸಿಯ ಕೆಲವು ನೌಕರರು ಕೊನೆ ಕ್ಷಣದಲ್ಲಿ ಕೆಲಸಕ್ಕೆ ಬಂದಿದ್ದರಿಂದಾಗಿ 32 ಬಸ್‌ಗಳು ಲಭ್ಯವಾದವು. ಮತದಾನಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಿದ್ಧತೆ ಮಾಡಿಕೊಳ್ಳುವುದಕ್ಕಾಗಿ ಹೆಚ್ಚಿನ ಬಸ್‌ಗಳು ಬೇಕಾಗುತ್ತವೆ ಎಂದು ಅಂದಾಜಿಸಲಾಗಿದೆ.

‘ಚುನಾವಣಾ ಕಾರ್ಯಕ್ಕೆ 300ರಿಂದ 400 ಬಸ್‌ಗಳು ಬೇಕಾಗುತ್ತವೆ. ಒದಗಿಸುವಂತೆ ಕೆಎಸ್‌ಆರ್‌ಟಿಸಿಯನ್ನು ಕೇಳಿದ್ದೇವೆ. ಸಾರಿಗೆ ನೌಕರರು ಮುಷ್ಕರ ಮುಂದುವರಿಸಿರುವುರಿಂದ ಪರ್ಯಾಯ ವ್ಯವಸ್ಥೆಗೂ ಕ್ರಮ ವಹಿಸಿದ್ದೇವೆ. ನೆರೆಯ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯನ್ನೂ ಸಂಪರ್ಕಿಸಿದ್ದೇವೆ. ಬಸ್‌ಗಳನ್ನು ಕೊಡುವುದಕ್ಕೆ ಅವರು ಸಿದ್ಧವಿದ್ದಾರೆ. ಆದರೆ, ಚುನಾವಣೆಯು ಸೂಕ್ಷ್ಮ ವಿಚಾರ ಆಗಿರುವುದರಿಂದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಪಡೆಯುವುದು ನಮ್ಮ ಆದ್ಯತೆಯಾಗಿದೆ. ಮತದಾನನ ಕಾರ್ಯಕ್ಕೆ ಮತ್ತು ಅಲ್ಲಿಗೆ ತೆರಳುವ ನಿಯೋಜಿತ ಸಿಬ್ಬಂದಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ. ಹರೀಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

***

ನೌಕರರು ಲಭ್ಯವಿಲ್ಲದೆ ಇರುವುದರಿಂದಾಗಿ ಬಸ್‌ಗಳನ್ನು ಒದಗಿಸುವುದಕ್ಕೆ ಆಗುತ್ತಿಲ್ಲ. ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದಿಂದ 100 ಬಸ್‌ಗಳನ್ನು ಒದಗಿಸಬಹುದಾಗಿದೆ ಎಂದು ಚುಣಾವಣಾ ಅಧಿಕಾರಿ ಕಚೇರಿಗೆ ತಿಳಿಸಿದ್ದೇವೆ

-ಎಂ.ಆರ್. ಮುಂಜಿ, ವಿಭಾಗೀಯ ನಿಯಂತ್ರಣಾಧಿಕಾರಿ, ಎನ್‌ಡಬ್ಲ್ಯುಕೆಆರ್‌ಟಿಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು