ಗುರುವಾರ , ಸೆಪ್ಟೆಂಬರ್ 23, 2021
20 °C
ಲಸಿಕೆ ಇಲ್ಲದೇ ಸಂಕಷ್ಟಕ್ಕೆ ದೂಡುವುದು ಸರಿಯೇ?: ಜಿನದತ್ತ

ಭೌತಿಕ ತರಗತಿ ಆರಂಭಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇದೇ 23ರಿಂದ 9ರಿಂದ 12ನೇ ತರಗತಿಗಳ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭಿಸುವುದಕ್ಕೆ ಕವಿ ಮತ್ತು ನಿವೃತ್ತ ಜಿಲ್ಲಾ ನ್ಯಾಯಾಧೀಶ ಜಿನದತ್ತ ದೇಸಾಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಈಗ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಬಂದಿಲ್ಲ. 18 ವರ್ಷ ಮೇಲಿನವರಲ್ಲಿ ಮೊದಲ ಡೋಸ್ ತೆಗೆದುಕೊಂಡವರೆ 2ನೇ ಡೋಸ್‌ಗಾಗಿ ಪರಿದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸುರಕ್ಷಾ ಕವಚವೇ ಇಲ್ಲದೆ ಮಕ್ಕಳನ್ನು ಅಪಾಯಕ್ಕೆ ದೂಡುವುದು ಎಷ್ಟು ಸರಿ?’ ಎಂದು ಕೇಳಿದ್ದಾರೆ.

‘ತರಗತಿ ಕೋಣೆಯಲ್ಲಿ ಒತ್ತಾಯದಿಂದ ಮಾಸ್ಕ್ ಹಾಕಿಸಬಹುದು. ಆದರೆ, ಅವರು ಅಂತರ ಕಾಯ್ದುಕೊಳ್ಳುವಂತೆ ಮಾಡಲು ಸಾಧ್ಯವೆ. ಎರಡು ಮೀಟರ್‌ಗೊಬ್ಬ ವಿದ್ಯಾರ್ಥಿಯನ್ನು ಕೂರಿಸಿದರೂ ಒಂದು ಕೋಣೆಯಲ್ಲಿ ಹೆಚ್ಚೆಂದರೆ 10 ಮಂದಿ ಕೂರಬಹುದು. ಇದರಿಂದ ಹೆಚ್ಚಿನ ಕೋಣೆಗಳನ್ನು, ಕಲಿಸಬೇಕಾಗುವ ಶಿಕ್ಷಕರನ್ನು
ಹೊಂದಿಸಲಾಗುತ್ತದೆಯೇ? ಕೋಣೆ ಹೊರಗೆ ಮಕ್ಕಳು ವಯೋಸಹಜ ಸ್ವಭಾವದಂತೆ ಕೂಡಿ ಆಡುವುದು, ಜಿಗಿಯುವುದು, ಒಬ್ಬರೊಂದಿಗೆ ಮತ್ತೊಬ್ಬರು ಮಾತನಾಡುವುದು ಮಾಡಿಯೇ ಮಾಡುತ್ತಾರೆ. ಇದನ್ನು ತಡೆಯುವುದು ಸಾಧ್ಯವೇ ಇಲ್ಲ’ ಎಂದು ಹೇಳಿದ್ದಾರೆ.

‘ಯಾವುದೇ ಪಾಲಕರೂ ಮಕ್ಕಳ ಜೀವಕ್ಕಿಂತ ಶಿಕ್ಷಣ ಹೆಚ್ಚಿನದೆಂದು ಹೇಳಲು ಸಾಧ್ಯವಿಲ್ಲ. ಲಸಿಕೆ ಇಲ್ಲದೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪುವುದೂ ಇಲ್ಲ. ಯಾರು ತಾನೆ ಈ ಸಾವಿನ ಬಾಗಿಲಿಗೆ ಮಕ್ಕಳನ್ನು ಕಳುಹಿಸಲು ಬಯಸುತ್ತಾರೆ? ಅಕಸ್ಮಾತ್‌ ಯಾರಾದರೂ ಮರಣ ಹೊಂದಿದರೆ ಯಾರು ಜವಾಬ್ದಾರಿ ಹೊರುತ್ತಾರೆ. ಹೀಗಾಗಿ, ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಶಾಲೆಗಳನ್ನು ಆರಂಭಿಸುವುದು (ಭೌತಿಕ ತರಗತಿ) ಬಹಳ ಅವೈಜ್ಞಾನಿಕವಾಗಿದೆ’ ಎಂದು ತಿಳಿಸಿದ್ದಾರೆ.

‘ಕೋವಿಡ್ 3ನೇ ಅಲೆಯು ಮಕ್ಕಳನ್ನು ಬಾಧಿಸಲಿದೆ ಎಂದು ತಜ್ಞರ ವರದಿಗಳು ಹೇಳುತ್ತಿವೆ. ಒಂದೆಡೆ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಇನ್ನೊಂದೆಡೆ, ಭೌತಿಕ ತರಗತಿಗಳನ್ನು ಆರಂಭಿಸುವುದಾಗಿ ಪ್ರಕಟಿಸಲಾಗಿದೆ. ಸರ್ಕಾರದ ನಿರ್ಧಾರಗಳು ಬಹಳ ದ್ವಂದ್ವದಿಂದ ಕೂಡಿವೆ. ಮೊದಲು ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು. ಅಲ್ಲಿವರೆಗೆ ಭೌತಿಕ ತರಗತಿಗಳನ್ನು ಆರಂಭಿಸುವುದು ಸೂಕ್ತವಲ್ಲ. ಈ ನಿಟ್ಟಿನಲ್ಲಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳುವುದು ಸಮಂಜಸವಾಗಿದೆ. ಮಕ್ಕಳನ್ನು ಅವರೊಂದಿಗೆ ಪೋಷಕರನ್ನು ಸಂಕಷ್ಟಕ್ಕೆ ದೂಡುವುದು ಸರಿಯಲ್ಲ’ ಎಂದು ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು