ಚಿಕ್ಕೋಡಿ: ಸರ್ಕಾರ ಚಿಕ್ಕೋಡಿಗೆ ಪ್ರತ್ಯೇಕವಾಗಿ ಅಪರ ಜಿಲ್ಲಾಧಿಕಾರಿ ನೇಮಿಸುವ ಬದಲಾಗಿ ಬೆಳಗಾವಿಯನ್ನು ವಿಭಜಿಸಿ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಿ ಜಿಲ್ಲಾಧಿಕಾರಿ ನೇಮಕ ಮಾಡುವಂತೆ ಒತ್ತಾಯಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಸದಸ್ಯರು ತಹಶೀಲ್ದಾರ್ ಚಿದಂಬರ ಕುಲಕರ್ಣಿ ಅವರಿಗೆ ಶನಿವಾರ ಮನವಿ ಸಲ್ಲಿಸಿತು.
ಕಳೆದ ಕೆಲವು ದಿನಗಳ ಹಿಂದೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಬೆಳಗಾವಿಗೆ ಭೇಟಿ ನೀಡಿ ಸಭೆ ನಡೆಸಿ, ಚಿಕ್ಕೋಡಿಗೆ ಅಪರ ಜಿಲ್ಲಾಧಿಕಾರಿಯೊಬ್ಬರನ್ನು ನೇಮಕ ಮಾಡುವಂತೆ ಈ ಹಿಂದಿನ ಜಿಲ್ಲಾಧಕಾರಿಗಳು ನಿಯೋಗಕ್ಕೆ ಸಲಹೆ ನೀಡಿದ್ದರು. ಹೀಗಾಗಿ ನಿಯೋಗ ರಾಜ್ಯ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವ ಸಲ್ಲಿಸಿತ್ತು. ಹೀಗಾಗಿ ಚಿಕ್ಕೋಡಿ ಉಪ ವಿಭಾಗಕ್ಕೆ ಅಪರ ಜಿಲ್ಲಾಧಿಕಾರಿ ನೇಮಕ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಮನವಿ ಸಲ್ಲಿಸಿದೆ.
ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವುದೊಂದೇ ಪರಿಹಾರವಾಗಿದೆ. ಹೀಗಾಗಿ ಅಪರ ಜಿಲ್ಲಾಧಿಕಾರಿ ಹುದ್ದೆಯನ್ನು ಸೃಜಿಸಿದಲ್ಲಿ ಚಿಕ್ಕೋಡಿ ಜಿಲ್ಲಾ ಘೋಷಣೆ ನನೆಗುದಿಗೆ ಬೀಳುವ ಸಾಧ್ಯತೆ ಇರುವುದರಿಂದ ಸರ್ಕಾರದ ನಿರ್ಧಾರವನ್ನು ಹೋರಾಟ ಸಮಿತಿ ವಿರೋಧಿಸಿ ಮನವಿ ನೀಡಿತು.
ಹೋರಾಟ ಸಮಿತಿ ಅಧ್ಯಕ್ಷ ಸಂಜು ಬಡಿಗೇರ, ಚಂದ್ರಕಾಂತ ಹುಕ್ಕೇರಿ, ಸಂಜಯ ಪಾಟೀಲ, ಬಸವರಾಜ ಸಾಜನೆ, ಶ್ರೀಕಾಂತ ಅಸೋದೆ, ಅಮೋಲ ನಾವಿ, ರುದ್ರಯ್ಯಾ ಹಿರೇಮಠ, ರಣಜೀತ ಶಿಂಧೆ, ಸುಲೇಮಾನ ನಾಲಬಂದ, ಖಾನಪ್ಪ ಬಾಡಕರ, ಸಚಿನ ದೊಡಮನಿ, ರಫೀಕ ಪಠಾಣ ಇದ್ದರು.