ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಬಾಗೇವಾಡಿ | ಸಾವಯವ ಕೃಷಿ: ರೈತ ಮಹಿಳೆ ಯಶಸ್ಸು

ಜಿಲ್ಲಾಮಟ್ಟದ ಶ್ರೇಷ್ಠ ಕೃಷಿ ಮಹಿಳಾ ಪ್ರಶಸ್ತಿಗೆ ಭಾಜರಾಗಿರುವ ಸುವರ್ಣಾ ಶಂಕರಗೌಡ ಹಾದಿಮನಿ
Published 8 ಸೆಪ್ಟೆಂಬರ್ 2023, 5:38 IST
Last Updated 8 ಸೆಪ್ಟೆಂಬರ್ 2023, 5:38 IST
ಅಕ್ಷರ ಗಾತ್ರ

-ಶಿವಕುಮಾರ ಪಾಟೀಲ

ಹಿರೇಬಾಗೇವಾಡಿ: ಕೃಷಿ ಕಾಯಕ ನಂಬಿದವರನ್ನು ಕೈಬಿಟ್ಟಿಲ್ಲ. ಕೃಷಿಯಲ್ಲಿ ಶ್ರದ್ಧೆ, ಛಲ, ಆಸಕ್ತಿ ಇದ್ದರೆ ಸಾಧನೆ ಮಾಡಬಹುದು. ಇದಕ್ಕೆ ಉದಾಹರಣೆಯೇ ಸಿದ್ದನಬಾವಿಯ ರೈತ ಮಹಿಳೆ ಸುವರ್ಣಾ ಶಂಕರಗೌಡ ಹಾದಿಮನಿ. ಸುವರ್ಣಾ ಅವರು ಸಾವಯವ ಕೃಷಿಯನ್ನೇ ನೆಚ್ಚಿಕೊಂಡಿದ್ದು, ಅದರಲ್ಲಿ ಯಶಸ್ಸು ಕೂಡ ಕಂಡಿದ್ದಾರೆ.

ಸಿದ್ದನಬಾವಿಯಲ್ಲಿ ಒಟ್ಟು 15 ಎಕರೆ ಜಮೀನು ಹೊಂದಿರುವ ಇವರು, ಸಾವಯವ ಕೃಷಿಯನ್ನೇ ಪ್ರಧಾನವನ್ನಾಗಿಸಿ ದುಡಿಯುತ್ತಿದ್ದಾರೆ. ಪತಿ ಶಂಕರಗೌಡರಿಗೆ ಪ್ರತಿಯೊಂದು ಕೃಷಿ ಚಟುವಟಿಕೆಯಲ್ಲಿ ಕೈಜೋಡಿಸುತ್ತಾರೆ. ಇವರ ಕೃಷಿ ಸೇವೆ ಗಮನಿಸಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯವು 2022-23ನೇ ಸಾಲಿನ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿ ಮಹಿಳಾ ಪ್ರಶಸ್ತಿಗೆ ಆಯ್ಕೆ ಮಾಡಿದೆ.

7ನೇ ತರಗತಿವರೆಗೆ ಓದಿರುವ ಸುವರ್ಣಾ ಹಾದಿಮನಿ ಅವರಿಗೆ ಕೃಷಿ ಕೆಲಸವೇ ಉಸಿರು. ಪತಿ ಶಂಕರಗೌಡರಿಗೆ ಸಾವಯವ ಕೃಷಿ ಕುರಿತು ಮಾಹಿತಿ ನೀಡಿ, ಜಮೀನಿನಲ್ಲೇ ಆ ಪದ್ಧತಿ ಮೂಲಕವೇ ಬೆಳೆ ಬೆಳೆದು ಸಾಕಷ್ಟು ಲಾಭ ಗಳಿಸುತ್ತಿದ್ದಾರೆ. ತಮ್ಮ ಜಮೀನಿನ ಕೆಲಸಗಳಿಗೆ ಆಳುಗಳನ್ನು ಹಚ್ಚದೆ ತಾವೇ ಎಲ್ಲ ಕೆಲಸ ನಿರ್ವಹಿಸುತ್ತಾ, ಕೃಷಿ ಚಟುವಟಿಕೆಗಳಿಗೆ ಬೇಕಾದ ಸಲಕರಣೆಗಳನ್ನು ತಾವೇ ತಯಾರಿಸಿಕೊಳ್ಳುತ್ತಾ ಇತರ ರೈತರಿಗೆ ಮಾದರಿಯಾಗಿದ್ದಾರೆ.

‘ಭೂಮಿಗೆ ರಾಸಾಯನಿಕ ಗೊಬ್ಬರ ಹಾಕಿದರೆ ಮಣ್ಣು ಸತ್ವ ಕಳೆದುಕೊಳ್ಳುತ್ತದೆ. ಹೀಗಾಗಿ ಕೊಟ್ಟಿಗೆ ಮತ್ತು ಎರೆಹುಳು ಗೊಬ್ಬರದ ಜತೆಗೆ ಹಸುವಿನ ಸಗಣಿ ಮತ್ತು ಮೂತ್ರ, ನೀರು, ಬೆಲ್ಲ, ಧಾನ್ಯ, ಹಿಟ್ಟು ಮಣ್ಣಿನಿಂದ ಜೀವಾಮೃತ ತಯಾರಿಸಿ ಬೆಳೆಗಳಿಗೆ ಉಣಿಸುತ್ತೇವೆ. ಇದರಿಂದ ಕೃಷಿಗೆ ಹಾಕುವ ಖರ್ಚು ಕೂಡ ಶೂನ್ಯ.ಇದರಿಂದ ಉತ್ತಮ ಬೆಳೆ ಬೆಳೆಯಬಹುದು’ ಎನ್ನುತ್ತಾರೆ ರೈತ ಮಹಿಳೆ ಸುವರ್ಣಾ ಶಂಕರಗೌಡ ಹಾದಿಮನಿ.

ಕೈತೋಟದಲ್ಲಿ ಪೋಷಕಾಂಶಯುಕ್ತ ಮೇವು ಅಜೋಲಾ ಕೂಡ ಬೆಳೆಯುತ್ತಿದ್ದಾರೆ. ಇದು ಪಶುಪಾಲನೆಗೆ ಅನುಕೂಲವಾಗಿದೆ. ಹಾಲಿನ ಉತ್ಪಾದನೆಯನ್ನು ಕೂಡ ಹೆಚ್ಚಿಸುತ್ತದೆ.

ಸಿದ್ದನಬಾವಿಯ ರೈತ ಮಹಿಳೆ ಸುವರ್ಣಾ ಶಂಕರಗೌಡ ಹಾದಿಮನಿ ಅವರು ತಮ್ಮ ಮನೆಯ ಕೈತೋಟದಲ್ಲಿ ಪೋಷಕಾಂಶಯುಕ್ತ ಮೇವು ಅಜೋಲಾ ಪರೀಕ್ಷಿಸುತ್ತಿರುವುದು
ಸಿದ್ದನಬಾವಿಯ ರೈತ ಮಹಿಳೆ ಸುವರ್ಣಾ ಶಂಕರಗೌಡ ಹಾದಿಮನಿ ಅವರು ತಮ್ಮ ಮನೆಯ ಕೈತೋಟದಲ್ಲಿ ಪೋಷಕಾಂಶಯುಕ್ತ ಮೇವು ಅಜೋಲಾ ಪರೀಕ್ಷಿಸುತ್ತಿರುವುದು

ಸಾವಯವ ಕೃಷಿ ಪದ್ಧತಿಯನ್ನು ಎಲ್ಲ ರೈತರು ಅಳವಡಿಸಿಕೊಳ್ಳಬೇಕು. ಇದರಿಂದ ಉತ್ತಮ ಇಳುವರಿ ಸಿಗಲಿದೆ. ಕೃಷಿ ಸೇವೆ ಗಮನಿಸಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಪ್ರಶಸ್ತಿ ನೀಡುತ್ತಿರುವ ಸಂತಸ ತಂದಿದೆ -ಸುವರ್ಣಾ ಶಂಕರಗೌಡ ಹಾದಿಮನಿ ರೈತ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT