ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆ, ಸಿದ್ದರಾಮಯ್ಯ, ರಾಹುಲ್‌, ಡಿಕೆಶಿ ಪಾಕಿಸ್ತಾನದವರೇ?: ಜೆ.ಪಿ.ನಡ್ಡಾ

Published 5 ಮಾರ್ಚ್ 2024, 11:30 IST
Last Updated 5 ಮಾರ್ಚ್ 2024, 11:30 IST
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ಪಾಕಿಸ್ತಾನ್‌ ಜಿಂದಾಬಾದ್’ ಎಂದು ಘೋಷಣೆ ಕೂಗಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮೌನ, ಕರ್ನಾಟಕದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೌನ, ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಮೌನ. ಇವರೆಲ್ಲರೂ ಏಕೆ ಮೌನವಾಗಿದ್ದಾರೆ? ಇವರೇನು ಪಾಕಿಸ್ತಾನದವರಾ?’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಕಿಡಿ ಕಾರಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಸಿದ್ಧರಾಮಯ್ಯ ಅವರ ಸರ್ಕಾರ ರಾಜ್ಯದ ಜನರಿಗೆ ‘ಗ್ಯಾರಂಟಿ’ಗಳ ಜತೆಗೆ ಉಚಿತವಾಗಿ ಭಯೋತ್ಪಾದನೆಯನ್ನೂ ನೀಡುತ್ತಿದೆ. ಇಂಥವರನ್ನು ಭಾರತ ಮಾತೆ ಎಂದಿಗೂ ಕ್ಷಮಿಸುವುದಿಲ್ಲ’ ಎಂದರು.

‘ಪಾಕಿಸ್ತಾನ ಪರ ಘೋಷಣೆ ಕೂಗಿದವರ ಮೇಲೆ ಕ್ರಮ ಕೈಗೊಳ್ಳದೇ ಇರುವುದನ್ನು ನೋಡಿದರೆ ಕಾಂಗ್ರೆಸ್ ಮಾಡುತ್ತಿರುವುದು ಭಾರತ ಜೋಡೊ ಯಾತ್ರೆನಾ? ಭಾರತ ಥೋಡೋ ಯಾತ್ರೆನಾ? ನ್ಯಾಯ ಯಾತ್ರೆಯಾ? ಅನ್ಯಾಯ ಯಾತ್ರೆಯಾ? ಎಂಬ ಪ್ರಶ್ನೆ ಹುಟ್ಟುತ್ತದೆ’ ಎಂದೂ ದೂರಿದರು.

‘ಭ್ರಷ್ಟಾಚಾರ ಮಾಡಿದವರೆಲ್ಲ ‘ಇಂಡಿಯಾ’ ಒಕ್ಕೂಟದಲ್ಲಿದ್ದಾರೆ. ಇದು ಕುಟುಂಬ ರಾಜಕಾರಣ ಮಾಡುವವರ ಒಕ್ಕೂಟ. ಕಾಂಗ್ರೆಸ್ ರಾಮನ ಅಸ್ವಿತ್ವನ್ನೇ ನಿರಾಕರಿಸುತ್ತಿದ್ದು, ರಾಮಭಕ್ತರ ಭಾವನೆಗಳ ಮೇಲೆ ಪ್ರಹಾರ ಮಾಡುತ್ತಿದೆ’ ಎಂದರು.

‘10 ವರ್ಷಗಳ ಹಿಂದೆ ಭಾರತದ ಸ್ಥಿತಿ ಹೇಗಿತ್ತು, ಈಗ ಹೇಗಿದೆ ಎಂಬುದು ಭಾರತೀಯರಿಗೆ ಗೊತ್ತಾಗಿದೆ. ದೇಶಕ್ಕಾಗಿ ಮೂರನೇ ಬಾರಿಗೆ ಮೋದಿ ಚುಕ್ಕಾಣಿ ಹಿಡಿಯುವುದು ಅಗತ್ಯ. ಪ್ರತಿ ಮತದಾರನಿಗೂ, ಪ್ರತಿ ಮನೆಗೂ, ಪ್ರತಿಯೊಂದು ಯೋಜನೆಯ ಮಾಹಿತಿಯನ್ನು ತಲುಪಿಸುವುದು ಕಾರ್ಯಕರ್ತರ ಕೆಲಸ’ ಎಂದು ಹೇಳಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ‘ಚಿಕ್ಕೋಡಿಯನ್ನು ಮೊದಲಾಗಿಸಿಕೊಂಡು ನಡ್ಡಾ ಅವರು ರಣಕಹಳೆ ಊದಿದ್ದಾರೆ. ಬಿಜೆಪಿ– ಜೆಡಿಎಸ್ ಜೊತೆಯಾಗಿ ಎಲ್ಲ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘2006ರಿಂದ 2014ರವರೆಗೆ ಯುಪಿಎ ಸರ್ಕಾರ ₹65 ಸಾವಿರ ಕೋಟಿ ಅನುದಾನವನ್ನು ರಾಜ್ಯಕ್ಕೆ ನೀಡಿದೆ. ಆದರೆ, ಮೋದಿ ಸರ್ಕಾರ ಹತ್ತು ವರ್ಷದಲ್ಲಿ ₹2.85 ಲಕ್ಷ ಕೋಟಿ ಅನುದಾನ ನೀಡಿದೆ. ರಾಜ್ಯಕ್ಕೆ ಅನ್ಯಾಯ ಮಾಡಿದ್ದು ಯಾರು ಎಂದು ಜನ ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ದೇಶದ 9 ರಾಜ್ಯಗಳಲ್ಲಿ ಬರಗಾಲವಿದ್ದು, ಬೇರೆಲ್ಲ ಮುಖ್ಯಮಂತ್ರಿಗಳು ಈಗಾಗಲೇ ರೈತರಿಗೆ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ, ಸಿದ್ಧರಾಮಯ್ಯ ಅವರು ಮಾತ್ರ ಪರಿಹಾರ ನೀಡಿಲ್ಲ. ಈಗಾಗಲೇ 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಿದ್ದರಾಮಯ್ಯ ₹10 ಸಾವಿರ ಕೋಟಿ ಘೋಷಣೆ ಮಾಡಿದರೂ ರೈತರಿಗೆ ನಯಾ ಪೈಸೆ ನೀಡಿಲ್ಲ’ ಎಂದು ಕಿಡಿ ಕಾರಿದರು.

ಇದಕ್ಕೂ ಮೊದಲು ಪ್ರಾಸ್ತಾವಿಕ ಭಾಷಣ ಮಾಡಿದ ಸಂಸದ ಅಣ್ಣಾಸಾಹೇಬ ಜೊಲ್ಲೆ, ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷರೊಬ್ಬರು ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದ್ದು ಇದೇ ಮೊದಲು. ‘ಅಬ್ ಕಿ ಬಾರ್ ಮೋದಿ ಸರ್ಕಾರ’ ಎಂಬ ಘೋಷ ವಾಕ್ಯದೊಂದಿಗೆ ಗೆಲ್ಲಲು ಸಿದ್ಧರಾಗಬೇಕು’ ಎಂದರು.

ಚುನಾವಣಾ ಉಸ್ತುವಾರಿ ರಾಧಾಮೋಹನದಾಸ ಅಗರವಾಲ್, ಶಾಸಕರಾದ ಶಶಿಕಲಾ ಜೊಲ್ಲೆ, ಅಭಯ ಪಾಟೀಲ, ದುರ್ಯೋಧನ ಐಹೊಳೆ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಮುಖಂಡರಾದ ಮಹೇಶ ಕುಮಠಳ್ಳಿ, ರಮೇಶ ಕತ್ತಿ, ಅಮಿತ ಕೋರೆ, ಚಂದ್ರಶೇಖರ ಕವಟಗಿ, ಮಹಾಂತೇಶ ಕವಟಗಿಮಠ ಮುಂತಾದವರು ವೇದಿಕೆ ಮೇಲಿದ್ದರು.

ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಅಪ್ಪಾಜಿಗೋಳ ಸ್ವಾಗತಿಸಿದರು. ಅಮೃತ ಕುಲಕರ್ಣಿ ನಿರೂಪಿಸಿದರು. ಪ್ರಣವ ಮಾನ್ವಿ ವಂದಿಸಿದರು.

ಚಿಕ್ಕೋಡಿಯಲ್ಲಿ ಮಂಗಳವಾರ ನಡೆದ ಬೂತ್‌ಮಟ್ಟದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡ ಕಾರ್ಯಕರ್ತರು

ಚಿಕ್ಕೋಡಿಯಲ್ಲಿ ಮಂಗಳವಾರ ನಡೆದ ಬೂತ್‌ಮಟ್ಟದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡ ಕಾರ್ಯಕರ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT