ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದಲ್ಲೂ ಸಾಧನೆಯ ಛಲಕ್ಕಿಲ್ಲ ಬರ

Published 25 ನವೆಂಬರ್ 2023, 4:25 IST
Last Updated 25 ನವೆಂಬರ್ 2023, 4:25 IST
ಅಕ್ಷರ ಗಾತ್ರ

ಬೆಳಗಾವಿ: ಪ್ಯಾರಾ ಟೇಬಲ್ ಟೆನಿಸ್‌ನಲ್ಲಿ ಸಾಧನೆಯ ಕನಸು ಹೊತ್ತ ಯುವ ಪ್ರತಿಭೆ ಸವಿತಾ ಅಜ್ಜನಕಟ್ಟಿ. ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ತಾವಲಗೇರಿ ಎಂಬ ಸಣ್ಣ ಗ್ರಾಮದ ಯುವತಿಗೆ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಗೆಲ್ಲುವ ಮಹದಾಸೆ.

ಸವಿತಾ ಅವರಿಗೆ ಹುಟ್ಟುತ್ತಲೇ ಅಂಗವೈಕಲ್ಯ ಬಾಧಿಸಿತು. ಅವರ ಎರಡೂ ಕಾಲು ಸ್ವಲ್ಪ ಊನ ಇವೆ. ಆದರೆ, ಅವರ ಸಾಧನೆಯ ಹಂಬಲಕ್ಕೆ ಅದು ಅಡ್ಡಿಯೆನಿಸಲೇ ಇಲ್ಲ. ಇರುವ ಎರಡು ಎಕರೆ ಜಮೀನಿನಲ್ಲಿ ಕೃಷಿ ಕಾಯಕ ಮಾಡುತ್ತಿರುವ ವಿಠ್ಠಲ ಮತ್ತು ದುಂಡವ್ವ ದಂಪತಿ ತಮ್ಮ ಪುತ್ರಿಯ ಸಾಧನೆಯ ಸಸಿಗೆ ನೀರೆರೆಯುತ್ತಿದ್ದಾರೆ.

2023ರ ಅಕ್ಟೋಬರ್ 12ರಿಂದ 14ರವರೆಗೆ ನೈಜೀರಿಯಾದ ಜೆಟ್‌ ಲಾಗೋಸ್‌ನಲ್ಲಿ ಅಂತರರಾಷ್ಟ್ರೀಯ ಟೇಬಲ್ ಟೆನಿಸ್‌ ಫೆಡರೇಷನ್‌(ಐಟಿಟಿಎಫ್‌) ಆಯೋಜಿಸಿದ್ದ ಫಾ20 ವಾಲ್ಯೂ ಪ್ಯಾರಾ ಓಪನ್‌ ಟೂರ್ನಿಯಲ್ಲಿ ಸವಿತಾ ಅವರಿಗೆ ಎರಡು ಬೆಳ್ಳಿ ಪದಕಗಳು ಒಲಿದಿವೆ.

ಆರಂಭದಲ್ಲಿ ಸಂಗಮ್ ಬೈಲೂರ ಅವರಿಂದ ತರಬೇತಿ ಪಡೆದ ಸವಿತಾ ಸದ್ಯ ಗುಜರಾತ್‌ನ ಗಾಂಧಿನಗರದಲ್ಲಿ ಭಾರತ ಕ್ರೀಡಾ ಪ್ರಾಧಿಕಾರ ನಡೆಸುತ್ತಿರುವ ತರಬೇತಿ ಕೇಂದ್ರದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಅಲ್ಲಿ ಅವರಿಗೆ ಸತ್ಯಾ ಪಾರೀಖ್‌ ಕೋಚ್ ಆಗಿದ್ದಾರೆ.

ಎರಡು ವರ್ಷಗಳ ಹಿಂದೆ ಸ್ನೇಹಿತೆಯೊಬ್ಬರಿಂದ ಪ್ಯಾರಾ ಕ್ರೀಡೆಯ ಕುರಿತು ತಿಳಿದುಕೊಂಡ ಸವಿತಾ ಅವರಿಗೆ ಆಸಕ್ತಿ ಗರಿಗೆದರಿತು. ಅದರಲ್ಲೇ ಸಾಧನೆಯ ಶಿಖರವೇರುವ ಛಲ ಕುದುರಿತು.

ಇದೇ ವರ್ಷ ಜೂನ್‌ನಲ್ಲಿ ನಡೆದ ಯುಟಿಟಿ ರಾಷ್ಟ್ರೀಯ ಪ್ಯಾರಾ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು, ಫೆಬ್ರುವರಿಯಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಪ್ಯಾರಾ ಟಿಟಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ, ಗೋವಾದಲ್ಲಿ ಜನವರಿಯಲ್ಲಿ ನಡೆದ ಪರ್ಪಲ್ ಫಾಸ್ಟ್ ಇಂಡಿಯಾ ಪ್ಯಾರಾ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಹಲವು ಪದಕಗಳು ಅವರ ಮಡಿಲು ಸೇರಿವೆ.

ಹಲವು ಮಹತ್ವದ ಟೂರ್ನಿಗಳ‌ಲ್ಲಿ ಭಾಗವಹಿಸಿರುವ ಸವಿತಾ ಅವರಿಗೆ ದೇಶದ ಪ್ರಸಿದ್ಧ ಪ್ಯಾರಾ ಟಿಟಿ ಆಟಗಾರ್ತಿ ಭವಿನಾ ಪಟೇಲ್ ಅಂದರೆ ಅಚ್ಚುಮೆಚ್ಚು. ಭವಿನಾ ಅವರು 2021ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆಯಾಗಿದ್ದಾರೆ.

23 ವರ್ಷ ವಯಸ್ಸಿನ ಸವಿತಾ, ಪಿಯುಸಿಯವರೆಗೆ ಓದಿ ಶಿಕ್ಷಣ ಮೊಟಕುಗೊಳಿಸಿದ್ದಾರೆ. ಕಲಿಕೆ ಮುಂದುವರಿಸುವ ಹಂಬಲ ಅವರದು. ಎಲೆಮರೆ ಕಾಯಿಯಂತಿರುವ ಈ ಪ್ರತಿಭೆಗೆ ಪ್ರೋತ್ಸಾಹ ಬೇಕಿದೆ.

ಬಡತನವಿದ್ದರೂ ಕಷ್ಟಪಟ್ಟು ತಂದೆ–ತಾಯಿ ನನ್ನ ಸಾಧನೆಯ ಕನಸಿಗೆ ಬೆನ್ನೆಲುಬಾಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ದೇಶ ಪ್ರತಿನಿಧಿಸಿ ಪದಕ ಜಯಿಸುವ ದೊಡ್ಡ ಗುರಿ ಇದೆ.
ಸವಿತಾ, ಪ್ಯಾರಾ ಟಿಟಿ ಆಟಗಾರ್ತಿ
ಸವಿತಾ ಬಹಳ ಪ್ರತಿಭಾವಂತೆ. ಕೆಲವು ಕಾಲ ನನ್ನ ಬಳಿ ತರಬೇತಿ ಪಡೆದಿದ್ದಳು. ಅವಳಿಗೆ ಉತ್ತಮ ಭವಿಷ್ಯವಿದೆ.
ಸಂಗಮ್ ಬೈಲೂರ, ಕೋಚ್‌
ಸವಿತಾ ಅಜ್ಜನಕಟ್ಟಿ (ಬಲ)
ಸವಿತಾ ಅಜ್ಜನಕಟ್ಟಿ (ಬಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT