ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಲೋಕಸಭಾ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ಧತೆ

Last Updated 21 ಮೇ 2019, 14:00 IST
ಅಕ್ಷರ ಗಾತ್ರ

ಬೆಳಗಾವಿ: ಕಳೆದ ತಿಂಗಳು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಎಣಿಕೆಯು ಇದೇ 23ರಂದು ಬೆಳಿಗ್ಗೆ 8 ಗಂಟೆಯಿಂದ ಇಲ್ಲಿನ ಟಿಳಕವಾಡಿಯ ಆರ್.ಪಿ.ಡಿ ಕಾಲೇಜಿನಲ್ಲಿ ನಡೆಯಲಿದೆ. ಮತ ಎಣಿಕೆಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮತಪೆಟ್ಟಿಗೆಗಳನ್ನು ಇಟ್ಟಿರುವ ಸ್ಟ್ರಾಂಗ್‌ ರೂಂಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ನೀಡಲಾಗಿದೆ.

ಏಪ್ರಿಲ್‌ 23ರಂದು ಎರಡನೇ ಹಂತದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಒಟ್ಟು 17,71,829 ಮತದಾರರ ಪೈಕಿ 11,94,909 ಮಂದಿ ಮತ ಚಲಾಯಿಸಿದ್ದರು. ಶೇ 67.44ರಷ್ಟು ಮತದಾನವಾಗಿದೆ. 6,23,003 ಪುರುಷರು ಹಾಗೂ 5,71,898 ಮಹಿಳೆಯರು ಹಾಗೂ 8 ಮಂದಿ ಇತರರು ಮತ ಚಲಾಯಿಸಿದ್ದರು.

ಹಾಲಿ ಸಂಸದ, ಬಿಜೆಪಿಯ ಸುರೇಶ ಅಂಗಡಿ ಹಾಗೂ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟದ ಡಾ.ವಿ.ಎಸ್‌. ಸಾಧುನವರ ಸೇರಿದಂತೆ ಒಟ್ಟು 57 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಇವರಲ್ಲಿ ಯಾರನ್ನು ಮತದಾರರು ಆಯ್ಕೆ ಮಾಡಿದ್ದಾರೆ ಎನ್ನುವುದು ಮಧ್ಯಾಹ್ನದ ವೇಳೆಗೆ ತಿಳಿಯಲಿದೆ.

ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಪ್ರತಿಯೊಂದು ಮತ ಎಣಿಕೆ ಹಾಲ್‌ಗಳಿಗೆ 14 ಟೇಬಲ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿಯೊಂದು ಟೇಬಲ್‌ಗಳಿಗೆ ಒಬ್ಬರಂತೆ 14 ಏಜೆಂಟರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿಶಾಲ್‌ ಆರ್‌. ಹೇಳಿದರು. ಮತ ಎಣಿಕೆ ಪ್ರಕ್ರಿಯೆಯು ರಾತ್ರಿಯವರೆಗೂ ನಡೆಯುವ ಸಾಧ್ಯತೆ ಇದೆ. ಮಧ್ಯಾಹ್ನದ ಹೊತ್ತಿಗೆ ಯಾವ ಅಭ್ಯರ್ಥಿ ಗೆಲ್ಲಬಹುದು ಎನ್ನುವ ಅಂದಾಜು ಚಿತ್ರಣ ದೊರೆಯಲಿದೆ.

144 ಕಲಂ ಜಾರಿ:

ಮತ ಎಣಿಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮೇ 22ರ ಮಧ್ಯರಾತ್ರಿ 12 ಗಂಟೆಯಿಂದ 24ರ ಮಧ್ಯಾಹ್ನ 12 ಗಂಟೆಯವರೆಗೆ ಕಲಂ 144 ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ವಿಶಾಲ್. ಆರ್ ಅವರು ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರು ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ರಸ್ತೆ, ಬೀದಿ, ಸಾರ್ವಜನಿಕ ಕಟ್ಟಡ ಮತ್ತು ಸರ್ಕಾರಿ ಕಚೇರಿಯ ಸುತ್ತಮುತ್ತ ಗುಂಪು ಸೇರುವುದು ಅಥವಾ ಗುಂಪು ಕೂಡುವುದರ ಮೇಲೆ ನಿಷೇಧ ಹೇರಿದ್ದಾರೆ.

‘ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ವಿಜಯೋತ್ಸವ, ಪ್ರತಿಭಟನಾ ಮೆರವಣಿಗೆ ಹಾಗೂ ಸಾರ್ವಜನಿಕ ಸಭಾ ಸಮಾರಂಭ ಮಾಡುವುದರ ಮೇಲೆ ನಿಷೇಧ ಹೇರಲಾಗಿದೆ. ಶವ ಸಂಸ್ಕಾರಕ್ಕೆ, ಹೋಟೆಲ್‌ಗಳಿಗೆ, ಚಲನಚಿತ್ರ ಮಂದಿರಗಳಿಗೆ, ಧಾರ್ಮಿಕ ಮತ್ತು ಮದುವೆ ಮೆರವಣಿಗೆಗಳಿಗೆ ಈ ಆಜ್ಞೆಯು ಅನ್ವಯಿಸುವುದಿಲ್ಲ. ಸರ್ಕಾರ ನಡೆಸುವ ಕಾರ್ಯಕ್ರಮ ಸಭೆ ಸಮಾರಂಭಗಳಿಗೂ ಅನ್ವಯವಾಗುವುದಿಲ್ಲ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊಬೈಲ್‌ಗೆ ನಿಷೇಧ:

ಮತ ಎಣಿಕೆ ಸಮಯದಲ್ಲಿ ಮೊಬೈಲ್, ಗುಟಖಾ ಪಾಕೆಟ್‌, ಇಂಕಪೆನ್, ಕ್ಯಾಮೆರಾ, ಬೆಂಕಿಪೊಟ್ಟಣ, ಸಿಗರೇಟ್, ಲೈಟರ್ ಹಾಗೂ ಇನ್ನಿತರೆ ನಿಷೇಧಿತ ವಸ್ತುಗಳನ್ನು ಚುನಾವಣಾ ಅಧಿಕಾರಿ, ಸಿಬ್ಬಂದಿ, ಅಭ್ಯರ್ಥಿಗಳು ಹಾಗೂ ಏಜೆಂಟರು ಬಳಸಬಾರದೆಂದು ಸೂಚಿಸಲಾಗಿದೆ.

ಪೊಲೀಸ್‌ ಬಂದೋಬಸ್ತ್‌:

ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಡಿಸಿಪಿ– 2, ಸಹಾಯಕ ಪೊಲೀಸ್ ಆಯುಕ್ತರು- 3, ಪೊಲೀಸ್ ನಿರೀಕ್ಷಕರು- 14, ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌- 21, ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್‌- 62, ಪೊಲೀಸ್ ಸಿಬ್ಬಂದಿಗಳು-330 ಹಾಗೂ ಗೃಹ ರಕ್ಷಕ ದಳ-50 ಜನರು ಸೇರಿದಂತೆ ಒಟ್ಟು 482 ಸಿಬ್ಬಂದಿಗಳನ್ನು ಆಯೋಜಿಸಲಾಗಿದೆ.

ಇದರ ಜೊತೆಗೆ ಕೆಎಸ್‌ಆರ್‌ಪಿಯ 3, ಸಿಎಆರ್ ದಳದ 2 ಹಾಗೂ ಸಿಎಪಿಎಫ್‌ನ 2 ತುಕ್ಕಡಿಗಳನ್ನು ನಿಯೋಜಿಸಲಾಗಿದೆ.
ಸಹಾಯಕ ಪೊಲೀಸ್ ಆಯುಕ್ತರು-1, ಪೊಲೀಸ್ ಇನ್‌ಸ್ಪೆಕ್ಟರ್‌- 2 , ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌-2 , ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್‌-13 ಹಾಗೂ ಪೊಲೀಸ್ ಸಿಬ್ಬಂದಿಗಳು- 100 ಜನರನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT