ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಹಿರಣ್ಯಕೇಶಿಗೆ ‘ಖಾತ್ರಿ’ಯಡಿ ಪುನಶ್ಚೇತನ

3 ಲಕ್ಷ ಮಾನವ ದಿನ ಸೃಜನೆ, ₹ 7 ಕೋಟಿ ಕೂಲಿ ನೀಡುವ ಗುರಿ
Last Updated 11 ಮೇ 2020, 1:36 IST
ಅಕ್ಷರ ಗಾತ್ರ

ಬೆಳಗಾವಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿರಣ್ಯಕೇಶಿ ನದಿಯ ಒಡಲಲ್ಲಿರುವ ಹೂಳೆತ್ತಿ ಪುನಶ್ಚೇತನ ನೀಡಲು ಜಿಲ್ಲಾ ಪಂಚಾಯಿತಿ ಯೋಜಿಸಿದೆ.

ಖಾತ್ರಿ ಯೋಜನೆಯಲ್ಲಿ ಕೆರೆ–ಕಟ್ಟೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳುವುದು ಸಾಮಾನ್ಯ. ಆದರೆ, ಇಲ್ಲಿ ನದಿಯಲ್ಲೆ ಈ ಕಾರ್ಯ ಆರಂಭಿಸಲಾಗುತ್ತಿದೆ. ಐದು ವರ್ಷಗಳ ಹಿಂದೆ ತಾಲ್ಲೂಕಿನ ಮಾರ್ಕಂಡೇಯ ನದಿಪಾತ್ರದಲ್ಲಿ ಪುನಶ್ಚೇತನ (14.5 ಕಿ.ಮೀ) ಕಾಮಗಾರಿ ಕೈಗೊಳ್ಳಲಾಗಿತ್ತು.

ಜಿಲ್ಲಾ ವ್ಯಾಪ್ತಿಯಲ್ಲಿ ಹರಿಯುವ ಹಿರಣ್ಯಕೇಶಿಯ 30.43 ಕಿ.ಮೀ.ನಲ್ಲಿ ಪ್ರಸ್ತುತ 3 ಕಿ.ಮೀ.ವರೆಗೆ ಅಲ್ಲಲ್ಲಿ ನೀರಿದೆ. ಉಳಿದ ಕಡೆಗಳಲ್ಲಿರುವ ಹೂಳನ್ನು ತೆರವುಗೊಳಿಸಲಾಗುವುದು. ನೆರೆಯ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಹಿರಣ್ಯಕೇಶಿ ನದಿಯು ಕೊಲ್ಹಾಪುರದ ಮೂಲಕ ಕರ್ನಾಟಕ ಪ್ರವೇಶಿಸುತ್ತದೆ. ಜಿಲ್ಲೆಯಲ್ಲಿ ಹುಕ್ಕೇರಿ ತಾಲ್ಲೂಕಿನಲ್ಲಿ ಹರಿಯುತ್ತದೆ. ಮುಂದೆ ಘಟಪ್ರಭಾ ನದಿ ಸೇರುತ್ತದೆ. ಬಹಳ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ತೆರವುಗೊಳಿಸಲು ಹೋದ ವರ್ಷ ಯೋಜಿಸಲಾಗಿತ್ತಾದರೂ ಕಾಮಗಾರಿ ಆರಂಭವಾಗಿರಲಿಲ್ಲ.

ಗೋಟೂರ, ಹೆಬ್ಬಾಳ, ಹಂಚಿನಾಳ, ಕೋಚರಿ, ಕುರಣಿ, ಬಡಕುಂದ್ರಿ, ಬಸ್ತವಾಡ, ಬೆಣಿವಾಡ, ಹೊಸೂರ, ಸುಲ್ತಾನಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹೂಳೆತ್ತುವ ಕಾರ್ಯ ನಡೆಯಲಿದೆ.

‘ಮೇ 11ರಿಂದ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಗುವುದು. 19 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಕೂಲಿ ಕಾರ್ಮಿಕರನ್ನು ಇದಕ್ಕೆ ಬಳಸಲಾಗುವುದು. 3 ಲಕ್ಷ ಮಾನವ ದಿನಗಳ ಸೃಜನೆ ಆಗಲಿದೆ ಹಾಗೂ ₹ 7 ಕೋಟಿ ಮೊತ್ತ ಪಾವತಿ ಆಗಬಹುದೆಂದು ಯೋಜಿಸಲಾಗಿದೆ. ಲಾಕ್‌ಡೌನ್‌ ಇರುವುದರಿಂದಾಗಿ, ದಿನಕ್ಕೆ 6ರಿಂದ 7ಸಾವಿರ ಕಾರ್ಮಿಕರನ್ನು ಅಂತರ ಕಾಯ್ದುಕೊಂಡು ಕೆಲಸಕ್ಕೆ ನಿಯೋಜಿಸಲಾಗುವುದು. ಮುಂಗಾರು ಆರಂಭ ಆಗುವುದರೊಳಗೆ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಹೆಚ್ಚಿನ ಮಂದಿಗೆ ಯೋಜನೆಯಿಂದ ಕೆಲಸ ದೊರೆಯುವಂತೆ ಮಾಡಬಹುದಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಸ್ತುತ ದಿನಗಳಲ್ಲಿ ನದಿಗಳಿಗೆ ಪುನಶ್ಚೇತನ ನೀಡುವುದು ಅತ್ಯಂತ ಮಹತ್ವದ್ದಾಗಿದೆ. ಜೊತೆಗೆ ದುಡಿಯುವ ಕೈಗಳಿಗೆ ಕೆಲಸ ಕೊಡುವುದಲ್ಲದೇ, ಸಮುದಾಯಕ್ಕೆ ಆಸ್ತಿ ನಿರ್ಮಾಣ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಸುತ್ತಮುತ್ತಲಿನ ಹಳ್ಳಿಗಳಿಗೆ ಅನುಕೂಲವಾಗಿದೆ. ನದಿಯಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚುವುದರೊಂದಿಗೆ, ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಸಹಕಾರಿಯಾಗಲಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT