ಗುರುವಾರ , ಜೂನ್ 24, 2021
29 °C
ಬಿಮ್ಸ್‌ನಿಂದ ಪ್ರಸ್ತಾವ, ಹೆಚ್ಚಿನ ಹಾಸಿಗೆ ಹೊಂದುವ ಉದ್ದೇಶ

ಕೋವಿಡ್ ಚಿಕಿತ್ಸೆಗೆ ಹೆರಿಗೆ ವಿಭಾಗ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕೋವಿಡ್–19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಉಂಟಾಗಿರುವ ಆಮ್ಲಜನಕ ವ್ಯವಸ್ಥೆಯ ಹಾಸಿಗೆಗಳ ಕೊರತೆ ನೀಗಿಸುವುದಕ್ಕಾಗಿ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿನ ಪ್ರಸೂತಿ ಮತ್ತು ಹೆರಿಗೆ ವಿಭಾಗವನ್ನು ಸ್ಥಳಾಂತರಿಸಲು ಯೋಜಿಸಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 1,040 ಹಾಸಿಗೆಗಳಿವೆ. ಪ್ರಸ್ತುತ ಕೋವಿಡ್ ಚಿಕತ್ಸೆ ಜೊತೆಗೆ ಇತರ ಹಲವು ವಿಭಾಗಗಳನ್ನೂ ನಡೆಸಲಾಗುತ್ತಿದೆ. ಕೋವಿಡ್ ಸೋಂಕಿತರಿಗೆಂದು ಸದ್ಯ 300 ಹಾಸಿಗೆ ಮೀಸಲಿಡಲಾಗಿದೆ. ಅವು ಬಹುತೇಕ ಭರ್ತಿಯಾಗಿವೆ. 200 ಹಾಸಿಗೆಗಳನ್ನು ಐಸೊಲೇಷನ್‌ಗೆ ಅಂದರೆ ಕೋವಿಡ್ ಪಾಸಿಟಿವ್ ಬಂದು ವೈದ್ಯಕೀಯ ಆಮ್ಲಜನಕ ಪೂರೈಸುವ ಅಗತ್ಯ ಇಲ್ಲದವರಿಗೆ ಬಳಸಲಾಗುತ್ತಿದೆ. 30 ಐಸಿಯು ಹಾಸಿಗೆಗಳಿವೆ. ಅವೂ ತುಂಬಿವೆ. ಉಳಿದವನ್ನು ಇತರ ರೋಗಿಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಆಮ್ಲಜನಕ ವ್ಯವಸ್ಥೆ ಹೊಂದಿರುವ ಹಾಸಿಗೆಗಳಿಗಾಗಿ ಉಂಟಾಗಿರುವ ಕೊರತೆ ಪರಿಹಾರಕ್ಕಾಗಿ ಹೆರಿಗೆ ವಿಭಾಗವನ್ನು ಕೋವಿಡ್ ವಿಭಾಗವನ್ನಾಗಿ ಪರಿವರ್ತಿಸಲು ಪ್ರಸ್ತಾವವಿದೆ.

ಅನುಮತಿ ಸಿಕ್ಕರೆ

ಆ ವಿಭಾಗದಲ್ಲಿ 150 ಹಾಸಿಗೆಗಳಿವೆ. ಅವುಗಳನ್ನು ಕೋವಿಡ್ ಸೋಂಕಿತರಿಗೆ ಬಳಸಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಇಡೀ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಾಗಿತ್ತು. ಆಗ, ಇತರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಜನಸಾಮಾನ್ಯರು ತೀವ್ರವಾಗಿ ಪರದಾಡಿದ್ದರು. ಗರ್ಭಿಣಿಯರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಬೇಕಾದ ಸ್ಥಿತಿ ಇತ್ತು.

‘ಆ ವಿಭಾಗವನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಸ್ತಾವ ಇದೆ. ಎಲ್ಲಿಗೆ ಎನ್ನುವುದು ಡಿಎಚ್‌ಒ ಹಾಗೂ ಜಿಲ್ಲಾಡಳಿತದ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಕೋವಿಡ್ ರೋಗಿಗಳಿಗೆ ಹೆಚ್ಚಿನ ಹಾಸಿಗೆಗಳು ಬೇಕಾಗಿರುವುದರಿಂದ ಈ ಕ್ರಮಕ್ಕೆ ಉದ್ದೇಶಿಸಲಾಗಿದೆ. ಅನುಮತಿ ಸಿಕ್ಕ ನಂತರ ಮುಂದಿನ ಕ್ರಮ ವಹಿಸಲಾಗುವುದು’ ಎಂದು ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ವಿನಯ್‌ ದಾಸ್ತಿಕೊಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಆಸ್ಪತ್ರೆಯನ್ನು ಬಡ ಮತ್ತು ಮಧ್ಯಮ ವರ್ಗದವರು ಹೆಚ್ಚಾಗಿ ಅವಲಂಬಿಸಿದ್ದಾರೆ.

288 ಸೋಂಕಿತೆರಿಗೆ ಹೆರಿಗೆ

ಕೊರೊನಾ ಕಾಣಿಸಿಕೊಂಡ ಬಳಿಕ ಅಂದರೆ ಹೋದ ವರ್ಷದಿಂದ, ಕೋವಿಡ್ ದೃಢಪಟ್ಟಿದ್ದ 288 ಮಹಿಳೆಯರಿಗೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಲಾಗಿದೆ. ನವಜಾತ ಶಿಶುಗಳನ್ನು ಐದು ದಿನಗಳ ನಂತರ ಸೋಂಕಿನ ತಪಾಸಣೆಗೆ ಒಳಪಡಿಸಲಾಗಿದ್ದು, ವರದಿ ‘ನೆಗೆಟಿವ್’ ಬಂದಿದೆ.

139 ಸಹಜ ಹೆರಿಗೆಗಳಾಗಿವೆ. 149ನ್ನು ಶಸ್ತ್ರಚಿಕಿತ್ಸೆ ಮೂಲಕ ಮಾಡಲಾಗಿದೆ. ಇವರಲ್ಲಿ ಬಹುತೇಕರನ್ನು ಬಿಡುಗಡೆ ಮಾಡಲಾಗಿದೆ. ಗರ್ಭಿಣಿಯರಲ್ಲಿ ಒಬ್ಬ ಸೋಂಕಿತೆ ಸಾವಿಗೀಡಾಗಿದ್ದಾರೆ. ಮೂವರಿಗೆ ಗರ್ಭಪಾತವಾಗಿದೆ. ಬಿಡುಗಡೆ ಆದವರು,  ಸೋಂಕಿನಿಂದ ರಕ್ಷಣೆಗೆ ಮನೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ವೈದ್ಯರು ಸಲಹೆ ನೀಡಿದ್ದಾರೆ. ಆರೋಗ್ಯ ಇಲಾಖೆಯಿಂದಲೂ ನಿಗಾ ವಹಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಗರ್ಭಿಣಿಯರ ಆರೈಕೆಗೆಂದೇ ಬಿಮ್ಸ್‌ನಲ್ಲಿ ಪ್ರತ್ಯೇಕ ವೈದ್ಯಕೀಯ ತಂಡ ನಿಯೋಜಿಸಲಾಗಿದೆ. 8 ಮಂದಿ ಆ ಕೆಲಸದಲ್ಲಿ ನಿರತವಾಗಿದ್ದಾರೆ. ಗರ್ಭಿಣಿಯರು, ಬಾಣಂತಿಯರು ಹಾಗೂ ನವಜಾತ ಶಿಶುಗಳ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅದಕ್ಕೆ ಬೇಕಾದ ವ್ಯವಸ್ಥೆ ಒದಗಿಸಲಾಗುತ್ತಿದೆ ಎನ್ನುತ್ತಾರೆ ದಾಸ್ತಿಕೊಪ್ಪ.

ಆರೋಗ್ಯ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯಿಂದ ಸಮೀಕ್ಷೆ ನಡೆಸಿ, ಗರ್ಭಿಣಿಯರನ್ನು ಕೋವಿಡ್ ತಪಾಸಣೆಗೆ ಒಳಪಡಿಸುವ ಕಾರ್ಯವೂ ನಡೆಯುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು