ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಲಗಿ: ಪಶು ಆಸ್ಪತ್ರೆ ಕ‌ಟ್ಟಡ ಕಳಪೆ ಕಾಮಗಾರಿ, ಮರು ನಿರ್ಮಾಣಕ್ಕೆ ಕಡಾಡಿ ಒತ್ತಾಯ

Published 1 ಜೂನ್ 2024, 15:54 IST
Last Updated 1 ಜೂನ್ 2024, 15:54 IST
ಅಕ್ಷರ ಗಾತ್ರ

ಮೂಡಲಗಿ: ಬೆಳಗಾವಿ ಜಿಲ್ಲೆಯಲ್ಲಿ ಮಂಜೂರಾದ 4 ಪಶು ಆಸ್ಪತ್ರೆ ಕಟ್ಟಡಗಳ ಕಾಮಗಾರಿ ಗುಣಮಟ್ಟ ಕಳಪೆಯಾಗಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಪಶು ಆಯುಕ್ತರನ್ನು ಒತ್ತಾಯಿಸಿದ್ದಾರೆ.

ಪಟ್ಟಣದ ಪಶು ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಪಶು ಚಿಕಿತ್ಸಾಲಯ ಮತ್ತು ಪಶು ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಕಳಪೆ ಮಟ್ಟದಲ್ಲಿ ಕೈಗೊಂಡಿರುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸಮರ್ಪಕ ರೀತಿಯಲ್ಲಿ ಸಾಮಗ್ರಿಗಳನ್ನು ಬಳಸದೆ ಕಾಟಾಚಾರಕ್ಕಾಗಿ ಕಾಮಗಾರಿ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಯ ಬಗ್ಗೆ ಗಮನ ನೀಡಿಲ್ಲ ಎಂದು ದೂರಿದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಮೂಡಲಗಿ, ಖನಗಾಂವ, ಯರಗಟ್ಟಿ ಹಾಗೂ ಕಿತ್ತೂರನಲ್ಲಿ ಆಯ್‌ಆರ್‌ಡಿಎಫ್‌ ಟ್ರಾಂಚ್–17ನೇ ಯೋಜನೆಯಡಿಯಲ್ಲಿ ಪಶು ಚಿಕಿತ್ಸಾಲಯ ಮತ್ತು ಪಶು ಆಸ್ಪತ್ರೆಗಳ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ₹199.13 ಲಕ್ಷ ಅನುದಾನದಲ್ಲಿ, ರಾಜ್ಯ ಸರ್ಕಾರಿ ಸ್ವಾಮ್ಯದ ನಿರ್ಮಾಣ ಸಂಸ್ಥೆಯಾದ ಕರ್ನಾಟಕ ಸ್ಟೇಟ್ ಹ್ಯಾಬಿಟೇಟ್ ಸೆಂಟರ್ ಬೆಂಗಳೂರು ಸಂಸ್ಥೆಗೆ ಮಂಜೂರಾತಿ ನೀಡಲಾಗಿದೆ ಎಂದರು.

ಗುತ್ತಿಗೆದಾರರು ಆಗಸ್ಟ್ 2023ರಲ್ಲಿ ಕಾಮಗಾರಿ ಪ್ರಾರಂಭಿಸಿ ಜುಲೈ 2024 ರಲ್ಲಿ ಮುಕ್ತಾಯಗೊಳಿಸುವ ನಿಬಂಧನೆಗೆ ಒಳಪಟ್ಟು ಟೆಂಡರ್‌ ಪಡೆದುಕೊಂಡಿದ್ದಾರೆ. ಆದರೆ ಗುತ್ತಿಗೆದಾರರು ಕಳೆದ ಆರು ತಿಂಗಳಿಂದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ. ಕಟ್ಟಡದ ಹಲವು ಭಾಗಗಳಲ್ಲಿ ಬಿರುಕು ಬಿಟ್ಟು, ಸಂಪೂರ್ಣ ಕುಸಿದು ಬೀಳುವ ಹಂತದಲ್ಲಿದೆ ಎಂದರು.

ಕಟ್ಟಡವನ್ನು ಸಂಪೂರ್ಣ ನೆಲಸಮಗೊಳಿಸಿ ಹೊಸ ಕಟ್ಟಡವನ್ನು ಇದೇ ಗುತ್ತಿಗೆ ಸಂಸ್ಥೆಯವರಿಂದಲೇ ನಿರ್ಮಿಸುವಂತೆ ಆದೇಶಿಸಲು ಹಾಗೂ ಗುತ್ತಿಗೆದಾರ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಹಾಗೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರಿಗೆ ಮತ್ತು ಹೆಚ್ಚುವರಿ ನಿರ್ದೇಶಕರಿಗೆ  ಪತ್ರ ಬರೆಯಲಾಗಿದೆ ಎಂದರು.

 ಮೂಡಲಗಿ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಎಮ್. ಬಿ. ವಿಭೂತಿ, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಮೋಹನ ಕಮತ, ಮುಖಂಡರಾದ ಪ್ರಕಾಶ ಮಾದರ, ಬಸವರಾಜ ಪಾಟೀಲ, ಬಸವರಾಜ ಪಾಲಬಾಂವಿ, ಈರಪ್ಪ ಢವಳೇಶ್ವರ, ಮಲ್ಲಪ್ಪ ನೇಮಗೌಡರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT