ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಸೂಚನೆ

ಶುಕ್ರವಾರ, ಮೇ 24, 2019
28 °C
ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ ವಿಶಾಲ್

ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಸೂಚನೆ

Published:
Updated:
Prajavani

ಬೆಳಗಾವಿ: ‘ಮುಂಗಾರು ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜಗಳು ಹಾಗೂ ಅಗತ್ಯ ರಸಗೊಬ್ಬರವನ್ನು ಸಮರ್ಪಕವಾಗಿ ಹಂಚಿಕೆ ಮಾಡಬೇಕು. ಒಂದು ವೇಳೆ ದೂರುಗಳು ಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಆರ್‌. ವಿಶಾಲ್ ಸೂಚಿಸಿದರು.

ಬಿತ್ತನೆ ಬೀಜ-ರಸಗೊಬ್ಬರ ಲಭ್ಯತೆ, ಕೃಷಿ ವಿಮಾ ಯೋಜನೆ ಅನುಷ್ಠಾನ ಹಾಗೂ ಕೃಷಿ ಅಭಿಯಾನ ಕುರಿತಂತೆ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಳೆಯಾದ ನಂತರ ಬಿತ್ತನೆ ಬೀಜಗಳು ಮತ್ತು ಗೊಬ್ಬರಕ್ಕಾಗಿ ರೈತರಿಂದ ದಿಢೀರ್ ಬೇಡಿಕೆ ಬರುತ್ತದೆ. ಅಂತಹ ಸಂದರ್ಭದಲ್ಲಿ ಯಾವುದೇ ಅನಾನುಕೂಲ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮುಂಚಿತವಾಗಿಯೇ ಸಮರ್ಪಕ ದಾಸ್ತಾನು ಮಾಡಿಕೊಳ್ಳಬೇಕು. ರೈತರಿಗೆ ಮಾಹಿತಿ ಒದಗಿಸಲು ಅಥವಾ ದೂರುಗಳನ್ನು ಸ್ವೀಕರಿಸಲು ಸಹಾಯವಾಣಿ ಕೇಂದ್ರ ಸ್ಥಾಪಿಸಬೇಕು’ ಎಂದು ತಿಳಿಸಿದರು.

‘ನೀರಿನ ಕೊರತೆಯಿಂದಾಗಿ ರೈತರು ಕಬ್ಬಿನ ಬದಲಾಗಿ ಪರ್ಯಾಯ ಬೆಳೆಯನ್ನು ಬೆಳೆಯಲು ಮುಂದಾದರೆ ಅಗತ್ಯವಾಗಿರುವ ಪರ್ಯಾಯ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಭೂಮಿ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಮಳೆ ಕೊರತೆ

ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ಮಾತನಾಡಿ, ‘ಜಿಲ್ಲೆಯಲ್ಲಿ ಈ ಬಾರಿ ಶೇ. 67ರರಷ್ಟು ಮಳೆಯ ಕೊರತೆ ಉಂಟಾಗಿದೆ. ಪ್ರಸಕ್ತ ಸಾಲಿನ ಜನವರಿ ತಿಂಗಳಿನಿಂದ ಇಲ್ಲಿಯವರೆಗೆ 48 ಮಿ.ಮೀ. ಮಳೆಯಾಗಬೇಕಿತ್ತು. ಇದುವರೆಗೆ ಕೇವಲ 16 ಮಿ.ಮೀ. ಮಾತ್ರ ಮಳೆಯಾಗಿದೆ’ ಎಂದು ಮಾಹಿತಿ ನೀಡಿದರು.

‘ಮುಂಗಾರು ಹಂಗಾಮಿಗಾಗಿ ಜಿಲ್ಲೆಗೆ ಅಗತ್ಯವಿರುವ ಬೀಜ-ಗೊಬ್ಬರಗಳ ಸಮರ್ಪಕ ದಾಸ್ತಾನು ಇದೆ. ರೈತರ ಬೇಡಿಕೆಗೆ ಅನುಗುಣವಾಗಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ರೈತರಿಗೆ ಅಗತ್ಯ ಬಿತ್ತನೆಬೀಜ-ರಸಗೊಬ್ಬರ ಸಮರ್ಪಕವಾಗಿ ಹಂಚಿಕೆ ಮಾಡಲು ಸಹಕಾರ ನೀಡಬೇಕು’ ಎಂದು ಮಾರಾಟಗಾರರಿಗೂ ಜಿಲ್ಲಾಧಿಕಾರಿ ಸೂಚಿಸಿದರು.

ಕೃಷಿ ಅಭಿಯಾನ

ಕೃಷಿ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಕೃಷಿ ಇಲಾಖೆ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇಲಾಖೆಗಳ ನಡಿಗೆ ರೈತರ ಮನೆಬಾಗಿಲಿಗೆ ಎಂಬ ಘೋಷಣೆಯೊಂದಿಗೆ ಮೇ ತಿಂಗಳಿನಲ್ಲಿ ಜಿಲ್ಲೆಯಾದ್ಯಂತ ಕೃಷಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಈ ಅಭಿಯಾನದ ಆಶಯದ ಪ್ರಕಾರ ಪ್ರತಿ ರೈತರಿಗೂ ಮಾಹಿತಿ ಒದಗಿಸುವ ಕೆಲಸವಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮೂರು ದಿನಗಳ ಕೃಷಿ ಅಭಿಯಾನದಲ್ಲಿ ಮೊದಲ 2 ದಿನಗಳಲ್ಲಿ ಪಂಚಾಯ್ತಿ ಮಟ್ಟದಲ್ಲಿ ಅರಿವು ಮೂಡಿಸಲಾಗುವುದು. 3ನೇ ದಿನ ಹೋಬಳಿ ಮಟ್ಟದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.

ಕೃಷಿ ಇಲಾಖೆಯ ಉಪನಿರ್ದೇಶಕ ಎಚ್.ಡಿ. ಕೋಳೇಕರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟಿ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !