ಸೋಮವಾರ, ಮೇ 23, 2022
28 °C
ಕ್ಷೇತ್ರ ಪುನರ್‌ವಿಂಗಡಣೆಗೆ ಕ್ರಮ; ಸಾರ್ವತ್ರಿಕ ಚುನಾವಣೆಗೆ ತಯಾರಿ ಆರಂಭ

ಬೆಳಗಾವಿ: ಶತಕ ದಾಟಿದ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಸಂಖ್ಯೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಗಳಿಗೆ ಶೀಘ್ರವೇ ಸಾರ್ವತ್ರಿಕ ಚುನಾವಣೆ ಎದುರಾಗಲಿರುವ ಹಿನ್ನೆಲೆಯಲ್ಲಿ, ಕ್ಷೇತ್ರ ಪುನರ್‌ವಿಂಗಡಣೆಗೆ ಚುನಾವಣಾ ಆಯೋಗ ಸೂಚಿಸಿದ್ದು, ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದರಂತೆ, ಇಲ್ಲಿನ ಜಿಲ್ಲಾ ಪಂಚಾಯ್ತಿಗಳ ಸದಸ್ಯ ಸ್ಥಾನ 90ರಿಂದ 101ಕ್ಕೆ ಏರಿಸಲಾಗಿದೆ. ತಾಲ್ಲೂಕು ಪಂಚಾಯ್ತಿಗಳ ಸದಸ್ಯ ಸ್ಥಾನಗಳನ್ನು 345ರಿಂದ 278ಕ್ಕೆ ಇಳಿಸಲಾಗಿದೆ.

ಜನಸಂಖ್ಯೆ ಆಧಾರದ ಮೇಲೆ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯ್ತಿಗಳ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಅವುಗಳಿಗೆ ಅನುಗುಣವಾಗಿ ಕ್ಷೇತ್ರಗಳ ನಕಾಶೆಯನ್ನು ಸಿದ್ಧಪಡಿಸಿ, ಫೆ.19ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗೆ ಕಳುಹಿಸಿರುವ ಪತ್ರದಲ್ಲಿ ಆಯೋಗ ಸೂಚಿಸಿದೆ.

ತಾಲ್ಲೂಕುವಾರು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಗಡಿಯನ್ನು ಕೆಂಪು ಬಣ್ಣದಲ್ಲಿ ಗುರುತಿಸಿ ಕಳುಹಿಸಬೇಕು. ತಾಲ್ಲೂಕುವಾರು ತಾಲ್ಲೂಕು ಪಂಚಾಯ್ತಿಗಳನ್ನು ಆಯಾ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿಯೇ ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳಿರಬೇಕು. ಅವುಗಳನ್ನು ನೀಲಿ ಬಣ್ಣದಲ್ಲಿ ಗುರುತಿಸಿ ಕಳುಹಿಸಬೇಕು ಎಂದು ಸೂಚಿಸಲಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್‌ರಾಜ್‌ ಅಧಿನಿಯಮ 1993ರ ಪ್ರಕರಣ 120 ಮತ್ತು 160ಕ್ಕೆ ಮಾಡಲಾಗಿರುವ ತಿದ್ದುಪಡಿಗಳ ಅನ್ವಯ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಇದಕ್ಕಾಗಿ ಕ್ಷೇತ್ರ ಪುನರ್‌ವಿಂಗಡಣೆ ಆಗಬೇಕಿದೆ.

ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳನ್ನು ನಿಗದಿಪಡಿಸುವಾಗ ನಗರ ಸ್ಥಳೀಯ ಸಂಸ್ಥೆಗೆ ಸೇರ್ಪಡೆಯಾಗಿರುವ ಅಥವಾ ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿರುವ ಗ್ರಾಮಾಂತರ ಪ್ರದೇಶಗಳನ್ನು ಹೊರತುಪಡಿಸಿ, ಗ್ರಾಮೀಣ ಪ್ರದೇಶಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು. ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳನ್ನು ಒಡೆಯದೆ ಪೂರ್ಣ ಗ್ರಾಮ ಪಂಚಾಯ್ತಿಗಳನ್ನು ಒಟ್ಟುಗೂಡಿಸಿ ಜಿ.ಪಂ. ಚುನಾವಣಾ ಕ್ಷೇತ್ರ ರಚನೆಯಾಗುವಂತೆ ನೋಡಿಕೊಳ್ಳಬೇಕು. ಗ್ರಾ.ಪಂ.ಗಳನ್ನು ಸೇರಿಸುವ ಸಂದರ್ಭದಲ್ಲಿ ಭೌಗೋಳಿಕವಾಗಿ ಹೊಂದಿಕೊಂಡಂತೆ ಇರುವುದನ್ನು ಗಮನಿಸಬೇಕು. ಸಂಚಾರ ಹಾಗೂ ಸಂಪರ್ಕ ವ್ಯವವ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಹೊಸದಾಗಿ ಕ್ಷೇತ್ರ ರಚನೆಯಾದಲ್ಲಿ, ಹೆಚ್ಚು ಜನಸಂಖ್ಯೆ ಇರುವ ಗ್ರಾಮದ ಹೆಸರನ್ನು ಆ ಕ್ಷೇತ್ರಕ್ಕೆ ಇಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಜಿಲ್ಲಾ ಹಾಗೂ ತಾ.ಪಂ. ವ್ಯಾಪ್ತಿಯ ಜನಸಂಖ್ಯೆ, ಗ್ರಾಮಗಳು, ಗ್ರಾಮ ಪಂಚಾಯ್ತಿಗಳು ಹಾಗೂ ನಕ್ಷೆ ಸಹಿತ ಫೆ.22ರ ಒಳಗೆ ಮಾಹಿತಿ ಒದಗಿಸುವಂತೆ ಚುನಾವಣಾ ಆಯೋಗವು ಜಿಲ್ಲಾಧಿಕಾರಿಗೆ ಸೂಚಿಸಿದೆ. ಇದರೊಂದಿಗೆ, ಸಾರ್ವತ್ರಿಕ ಚುನಾವಣೆಗೆ ಅಧಿಕೃತವಾಗಿ ತಯಾರಿ ಆರಂಭ ಆದಂತಾಗಿದೆ. ಈಗಿರುವ ಸದಸ್ಯರ ಅಧಿಕಾರದ ಅವಧಿ ಮೇನಲ್ಲಿ ಮುಕ್ತಾಯವಾಗಲಿದೆ. ಹೀಗಾಗಿ, ಶೀಘ್ರವೇ ಚುನಾವಣೆ ಎದುರಾಗುವ ಸಾಧ್ಯತೆ ಇದೆ.

ಹೊಸದಾಗಿ ರಚನೆಯಾಗಿರುವ ತಾಲ್ಲೂಕುಗಳಾದ ನಿಪ್ಪಾಣಿಗೆ 6, ಕಾಗವಾಡಕ್ಕೆ 3, ಮೂಡಲಗಿಗೆ 4 ಹಾಗೂ ಕಿತ್ತೂರಿಗೆ 3 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳನ್ನು ನಿಗದಿಪಡಿಸಲಾಗಿದೆ.

***

ಜಿಲ್ಲೆಯ ಸ್ಥಾನಗಳ ಮಾಹಿತಿ

ತಾಲ್ಲೂಕು;‌ಜಿ.ಪಂ.;ತಾ.ಪಂ.

ಬೆಳಗಾವಿ;12;34

ಹುಕ್ಕೇರಿ;10;28

ಖಾನಾಪುರ;7;20

ಚಿಕ್ಕೋಡಿ;8;21

ಅಥಣಿ;10;26

ರಾಯಬಾಗ;8;22

ನಿಪ್ಪಾಣಿ;6;16

ಕಾಗವಾಡ;3;11

ಬೈಲಹೊಂಗಲ;7;17

ಗೋಕಾಕ;8;20

ಸವದತ್ತಿ;8;23

ರಾಮದುರ್ಗ;7;18

ಮೂಡಲಗಿ;4;11

ಕಿತ್ತೂರು;3;11

ಒಟ್ಟು;101;278

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು