ನಿಪ್ಪಾಣಿ: ‘ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ’ ಎಂಬ ಅಡಿ ಬರಹಕ್ಕೆ ತಕ್ಕಂತೆಯೇ ‘ಪ್ರಜಾವಾಣಿ‘ ಬೆಳೆದುಬಂದಿದೆ. ಜ್ಞಾನದ ಖಜಾನೆಯನ್ನು ಹೊತ್ತು ತರುವ ‘ಪ್ರಜಾವಾಣಿ’ಯನ್ನು ಪ್ರತಿಯೊಬ್ಬರೂ ತಪ್ಪದೇ ಓದಿದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು. ಜೀವನದಲ್ಲಿ ಮೌಲ್ಯವನ್ನು ಅಳವಡಿಸಿಕೊಳ್ಳಲೂ ಇದು ನೆರವಾಗುತ್ತದೆ’ ಎಂದು ಕೆಎಲ್‍ಇ ಸಂಸ್ಥೆಯ ಇಲ್ಲಿನ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಬಸನಗೌಡ ಪಾಟೀಲ ಹೇಳಿದರು.
ನಗರದ ಕೆಎಲ್‍ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡ ‘ಪ್ರಜಾವಾಣಿ ದಿನಪತ್ರಿಕೆ– ವಾರದ ಓದುಗ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿಯೊಂದು ವಿಷಯವನ್ನೂ ಹಾಸು ಹೊಕ್ಕಾಗಿ ಪ್ರಸ್ತುತಪಡಿಸುವ ಪ್ರಜಾವಾಣಿ ದಿನಪತ್ರಿಕೆಯನ್ನು ಓದುವ ಅಭಿರುಚಿಯನ್ನು ಪ್ರಶಿಕ್ಷಣಾರ್ಥಿಗಳು ಬೆಳೆಸಿಕೊಳ್ಳಬೇಕು. ಜ್ಞಾನವೊಂದಿದ್ದರೆ ಅಂದುಕೊಂಡಿದ್ದನ್ನು ಸಾಧಿಸಲು ಅನುಕೂಲವಾಗುತ್ತದೆ’ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಜಾವಾಣಿ ಚಿಕ್ಕೋಡಿ ಅರೆಕಾಲಿಕ ವರದಿಗಾರ ಚಂದ್ರಶೇಖರ ಎಸ್. ಚಿನಕೇಕರ ಮಾತನಾಡಿ, ‘ಒಂದು ವಾರದ ಮಟ್ಟಿಗೆ ಪತ್ರಿಕೆ ಓದಿದರೆ ಪರಿಪೂರ್ಣ ಜ್ಞಾನ ಹೊಂದುವುದು ಸಾಧ್ಯವಿಲ್ಲ. ಪ್ರತಿ ದಿನವೂ ಪ್ರಜಾವಾಣಿ ಓದುವುದು ಅತ್ಯವಶ್ಯಕ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಪದವಿ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಪ್ರಜಾವಾಣಿ ದಿನಪತ್ರಿಕೆಯನ್ನು ಓದಿಸಿ ಪರೀಕ್ಷೆ ಬರೆಸುವ ರೂಢಿ ಇದೆ. ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೂ ಕೂಡ ಪ್ರಜಾವಾಣಿ ಓದಿಸಿ ಪರೀಕ್ಷೆ ನಡೆಸಿ ಬಹುಮಾನ ವಿತರಣೆ ಮಾಡಿದ ಕೆಎಲ್‍ಇ ಸಂಸ್ಥೆಯ ನಿಪ್ಪಾಣಿ ಬಿ.ಇಡಿ ಕಾಲೇಜಿನ ಕಾರ್ಯ ಶ್ಲಾಘನೀಯ’ ಎಂದರು.
ಇದಕ್ಕೂ ಮೊದಲು ಪ್ರಾಧ್ಯಾಪಕ ಸುರೇಶ ವಾರೆಪ್ಪನವರ ಪ್ರಾಸ್ತವಾಕ ಮಾತನಾಡಿ, ‘ಒಂದು ವಾರ ‘ಪ್ರಜಾವಾಣಿ’ ಅಚ್ಚುಕಟ್ಟಾಗಿ ಓದಿದ್ದೀರಿ. ಮುಂದಿನ ದಿನಗಳಲ್ಲೂ ನಿರಂತರವಾಗಿ ಅಧ್ಯಯನ ಮಾಡಿ’ ಎಂದರು.
ಪ್ರಾಧ್ಯಾಪಕರಾದ ಎಂ.ಕೆ. ಹಂಚಿನಾಳೆ, ಎಸ್.ಎನ್. ನಾರಾಯಣಕರ, ವಿ.ಕೆ. ನಡಗೇರಿ, ಪಿ.ಎಸ್. ಉಪಾಧ್ಯೆ, ಎನ್.ಎಂ.ಸರಗಣಾಚಾರಿ, ವಿ.ಎ. ಕುಂಬಾರ, ಆರ್.ಕೆ. ಪಾಟೀಲ, ಎಂ.ಎ. ಮಹಾಜನ, ಗ್ರಂಥಪಾಲಕ ವಿ.ಎ. ಕೌಜಲಗಿ ಮುಂತಾದವರು ಉಪಸ್ಥಿತರಿದ್ದರು. ಅರುಣಾ ಅರಳಿಕಟ್ಟಿ ಸ್ವಾಗತಿಸಿ, ನಿರೂಪಿಸಿದರು. ಸೀಮಾ ಸಲಗರೆ ವಂದಿಸಿದರು.
ಫಲಿತಾಂಶಗಳು...
‘ಪ್ರಜಾವಾಣಿ ವಾರದ ಉತ್ತಮ ಓದುಗ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ರಾಜವರ್ಧನ ಪಾಟೀಲ, ದ್ವಿತೀಯ ಸ್ಥಾನ ಕೆ.ಪ್ರದೀಪ ಹಾಗೂ ತೃತೀಯ ಸ್ಥಾನವನ್ನು ಅಮರೇಶ ಜವಾರಿ ಪಡೆದುಕೊಂಡರು.
ಅವರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾಗುವ ಪುಸ್ತಕಗಳನ್ನು ಬಹುಮಾಣವಾಗಿ ಗಣ್ಯರು ನೀಡಿದರು. ಸೀಮಾ ಸಲಗರೆ, ಅಮರೇಶ ಜವಾರಿ, ದೀಪಾ ನಾಯಕ ತಮ್ಮ ಅನಿಕೆಗಳನ್ನು ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.