ಶುಕ್ರವಾರ, ಜುಲೈ 30, 2021
23 °C
ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಆಗ್ರಹ

ಕೇಂದ್ರದ ಮಾಜಿ ಸಚಿವ ಬಾಬಾಗೌಡಗೆ ಶ್ರದ್ಧಾಂಜಲಿ ಜುಲೈ 5ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ರೈತ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಅವರಿಗೆ ರಾಜ್ಯ ರೈತ ಸಂಘದಿಂದ ಜುಲೈ 5ರಂದು ನಗರದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುವುದು’ ಎಂದು ಗೌರವಾದ್ಯಕ್ಷ ಚಾಮರಸ ಮಾಲಿ ಪಾಟೀಲ ತಿಳಿಸಿದರು.

‘ಬಾಬಾಗೌಡರು ಮೇ 21ರಂದು ನಿಧನರಾದರು. ಕೋವಿಡ್‌ ಲಾಕ್‌ಡೌನ್‌ ಕಾರಣದಿಂದಾಗಿ, ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಹಳಷ್ಟು ಜನರಿಗೆ ಸಾಧ್ಯವಾಗಿಲ್ಲ. ಹೀಗಾಗಿ, ದೊಡ್ಡ ಮಟ್ಟದಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.

‘ಅವರು ರಾಜ್ಯದಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಲಾಕ್‌ಡೌನ್ ಇರದಿದ್ದರೆ, ಅಂತ್ಯಕ್ರಿಯೆಯಲ್ಲಿ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಬರುತ್ತಿದ್ದರು. ಈಗಾಗಲೇ ಆನ್‌ಲೈನ್‌ನಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ್ದೇವೆ. ಜುಲೈ 5ರಂದು ಅವರ ಒಡನಾಡಿಗಳು, ಹಿತೈಷಿಗಳು, ರೈತ ನಾಯಕರು, ರೈತರು ಹಾಗೂ ಅಭಿಮಾನಗಳು ರಾಜ್ಯದ ಮೂಲೆ ಮೂಲೆಯಿಂದ ಬರಲಿದ್ದಾರೆ. ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸುವುದು, ವಿಚಾರಸಂಕಿರಣ ಮೊದಲಾದ ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಅಂದು ತೀರ್ಮಾನಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಜುಲೈ 21ರಂದು ನರಗುಂದ ಹಾಗೂ ನವಲಗುಂದದಲ್ಲಿ ರೈತ ಪಂಚಾಯತ್‌ ನಡೆಸಲಾಗುವುದು. ಅಂದು ದೆಹಲಿ, ಪಂಜಾಜ್‌ನಿಂದ ರೈತ ನಾಯಕರು ಬರಲಿದ್ದಾರೆ’ ಎಂದು ತಿಳಿಸಿದರು.

‘ಲಾಕ್‌ಡೌನ್‌ನಿಂದಾಗಿ ದುಡಿಯವ ವರ್ಗ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದೆ. ಬೆಲೆ ಏರಿಕೆಯಿಂದ ರೈತರು ಕೃಷಿ ತ್ಯಜಿಸುವ ಸಂದರ್ಭ ಎದುರಾಗಿದೆ. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು. ರೈತರಿಗೆ ಮಾರಕವಾಗಿರುವ ನೀತಿಗಳನ್ನು ಕೈಬಿಡಬೇಕು. ರೈತರಿಗೆ ರಿಯಾಯಿತಿ ದರದಲ್ಲಿ ಡೀಸೆಲ್‌ ನೀಡಬೇಕು’ ಎಂದು ಆಗ್ರಹಿಸಿದರು.

‘ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯನ್ನು ವೈಜ್ಞಾನಿಕವಾಗಿ ನಿಗದಿಪಡಿಸಬೇಕು. ಫಸಲ್ ಭೀಮಾ ಯೋಜನೆಯ ನ್ಯೂನತೆಗಳನ್ನು ಸರಿಪಡಿಸಿ, ಕೃಷಿಕರಿಗೆ ಅದರ ಲಾಭ ದೊರೆಯುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ರೈತ ನಾಯಕರಾದ ಕಲ್ಯಾಣರಾವ ಮುಚಳಂಬಿ, ಶಶಿಕಾಂತ ನಾಯಿಕ, ಉತ್ತಪ್ಪ ಕೋಮಾರ, ಮಲ್ಲಿಕಾರ್ಜುನ ವಾಲಿ, ಸಿದ್ದಗೌಡ ಮೂದಗಿ, ಈರಣ್ಣಗೌಣ ಪಾಟೀಲ, ಶಿವನಗೌಡ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು