ಮಂಗಳವಾರ, ಮೇ 11, 2021
25 °C
ಮುಂದುವರಿದ ಸಾರಿಗೆ ಸಂಸ್ಥೆ ನೌಕರರ ಮುಷ್ಕರ

ತಟ್ಟೆ–ಲೋಟ ಬಡಿದು ಸಾರಿಗೆ ಸಂಸ್ಥೆ ನೌಕರರ ಕುಟುಂಬದವರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸಾರಿಗೆ ಸಂಸ್ಥೆಯ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವಂತೆ ಆಗ್ರಹಿಸಿ ಎನ್‌ಡಬ್ಲ್ಯುಕೆಆರ್‌ಟಿಸಿಯ ಕೆಲವು ನೌಕರರ ಕುಟುಂಬದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತಟ್ಟೆ–ಲೋಟ ಬಡಿದು ಸೋಮವಾರ ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿರುದ್ಧ ಘೋಷಣೆ ಕೂಗಿದರು. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

‘ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಆದರೆ, ಸರ್ಕಾರ ನಮ್ಮ ಸಂಕಷ್ಟವನ್ನೇ ಆಲಿಸುತ್ತಿಲ್ಲ. ನೌಕರರಿಗೆ ಮಾರ್ಚ್ ತಿಂಗಳ ವೇತನವನ್ನು ಪಾವತಿಸದೆ ಇರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಮಕ್ಕಳ ಶೈಕ್ಷಣಿಕ ವೆಚ್ಚ ಭರಿಸಲು, ಹಿರಿಯರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಹಣಕ್ಕಾಗಿ ಪರದಾಡುವಂತಾಗಿದೆ. ಯುಗಾದಿ ಹಬ್ಬಕ್ಕೆ ಮಕ್ಕಳಿಗೆ ಹೊಸ ಬಟ್ಟೆಯನ್ನೂ ಖರೀದಿಸಿಲ್ಲ’ ಎಂದು ನೌಕರರ ಪತ್ನಿಯರು ಅಳಲು ತೋಡಿಕೊಂಡರು.

‘ಸಾರಿಗೆ ಸಂಸ್ಥೆಯು ಪತಿಗೆ ನೀಡುತ್ತಿರುವ ಸಂಬಳ ಸಾಕಾಗುತ್ತಿಲ್ಲ. ನನ್ನ ಮಗನ ಹೃದಯ ಚಿಕಿತ್ಸೆಗಾಗಿ ಹಣ ಹೊಂದಿಸಲು ಪರದಾಡಿದ್ದೇವೆ. ಆದರೆ, ಸರ್ಕಾರ ವೇತನ ಪರಿಷ್ಕರಿಸುವ ಬದಲಿಗೆ, ವರ್ಗಾವಣೆ ಶಿಕ್ಷೆ ನೀಡುತ್ತಿದೆ’ ಎಂದು ಸರಿತಾ ಎನ್ನುವವರು ಕಣ್ಣೀರಿಟ್ಟರು.

ಈ ನಡುವೆ, ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಸೋಮವಾರ 6ನೇ ದಿನಕ್ಕೆ ಕಾಲಿಟ್ಟಿದೆ. ‘ದಿನೇ ದಿನೇ ಕೆಲಸಕ್ಕೆ ಹಾಜರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಮವಾರ 92 ಮಂದಿ ಕರ್ತವ್ಯ ನಿರ್ವಹಿಸಿದರು. 61 ಬಸ್‌ಗಳು ಕಾರ್ಯಾಚರಣೆ ನಡೆಸಿವೆ. ಇವುಗಳಲ್ಲಿ 32 ಬಸ್‌ಗಳನ್ನು ಚುನಾವಣಾ ತರಬೇತಿಗೆ ನಿಯೋಜನೆಗೊಂಡವರನ್ನು ಕರೆತರುವುದಕ್ಕಾಗಿ ನೀಡಲಾಗಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್. ಮುಂಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬಹುತೇಕ ನೌಕರರು ಕರ್ತವ್ಯದಿಂದ ದೂರ ಉಳಿದಿರುವುದರಿಂದ ಬಸ್‌ಗಳ ಕಾರ್ಯಾಚರಣೆ ವ್ಯವಸ್ಥೆ ಹಳಿಗೆ ಬಂದಿಲ್ಲ. ಇದರಿಂದಾಗಿ ಪ್ರಯಾಣಿಕರ ಪರದಾಟವೂ ಮುಂದುವರಿದಿದೆ. ಕೇಂದ್ರ ಬಸ್ ನಿಲ್ದಾಣದಿಂದ ಕೆಲವು ಖಾಸಗಿ ವಾಹನಗಳು ಕಾರ್ಯಾಚರಿಸಿದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು