ಸೇವಾ ಭದ್ರತೆಗೆ ಆಗ್ರಹಿಸಿ ಪ್ರತಿಭಟನೆ

7

ಸೇವಾ ಭದ್ರತೆಗೆ ಆಗ್ರಹಿಸಿ ಪ್ರತಿಭಟನೆ

Published:
Updated:
Prajavani

ಬೆಳಗಾವಿ: ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬ್ಯಾಂಕ್‌ಗಳ ಕ್ಷೇಮಾಭಿವೃದ್ಧಿ ಮಹಾಮಂಡಳ ತಾಲ್ಲೂಕು ಘಟಕದ ನೇತೃತ್ವದಲ್ಲಿ ನೌಕರರು ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಬಹುತೇಕವು 115 ವರ್ಷಗಳ ಹಿಂದೆ ಪ್ರಾರಂಭವಾಗಿವೆ. ಆದರೆ, ಅವುಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಈವರೆಗೂ ಸೇವಾ ಭದ್ರತೆ ದೊರೆತಿಲ್ಲ. ಉತ್ತಮ ವೇತನ ಶ್ರೇಣಿ ನಿಗದಿಯಾಗಿಲ್ಲ. ಪಿಂಚಣಿ ಹಾಗೂ ಇತರ ಸೌಲಭ್ಯಗಳು ಸಿಗುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ರೈತರ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿರುವ ನಾವು, ಅಭದ್ರತೆಯಲ್ಲಿ ಜೀವನ ನಡೆಸುವಂತಾಗಿದೆ. ಸಂಘಟನೆ ಮೂಲಕ 25 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೂ ಸರ್ಕಾರವು ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳದಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘2017ರಲ್ಲಿ ಸಹಕಾರ ಇಲಾಖೆ ಕಾರ್ಯದರ್ಶಿ ಸೂಚನೆ ಮೇರೆಗೆ ಸಹಕಾರ ಸಂಘಗಳ ನಿಬಂಧಕರು ರಚಿಸಿದ ನೌಕರರ ಬೇಡಿಕೆಯ ಅಧ್ಯಯನ ಸಮಿತಿಯು ವರದಿ ಸಲ್ಲಿಸಿದೆ. ಆದರೆ,‍ ಶಿಫಾರಸುಗಳು ಅನುಷ್ಠಾನಕ್ಕೆ ಬಂದಿಲ್ಲ. ಸಂಬಂಧಿಸಿದ ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

‘ಇನ್ನಾದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಕೆಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ತಾಲ್ಲೂಕು, ಜಿಲ್ಲಾಮಟ್ಟದಲ್ಲಿ ಜಾಥಾ ನಡೆಸಬೇಕಾಗುತ್ತದೆ. ಮಾಸಾಂತ್ಯದಲ್ಲಿ ಸಂಘಗಳ ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನಲ್ಲಿ ಮುಷ್ಕರ ಆರಂಭಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪದಾಧಿಕಾರಿಗಳಾದ ಶಿಂಗಯ್ಯ ಹಿರೇಮಠ, ಉತ್ತಮ್ ಶಿಂಧೆ, ಶಿವಾನಂದ ಹುಕ್ಕೇರಿ, ಬಸವರಾಜ, ಮಹೇಶ ಅಂಗಡಿ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !