ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಸ್ಮಾರ್ಟ್‌ಸಿಟಿ ಕಾಮಗಾರಿಯಲ್ಲಿ ಅವ್ಯವಹಾರ: ಆರೋಪ

ಶಾಸಕ ಅಭಯ ಪಾಟೀಲ, ಅಧಿಕಾರಿಗಳ ವಿರುದ್ಧ ಹರಿಹಾಯ್ದ ಪ್ರತಿಭಟನಾಕಾರರು
Published 10 ಅಕ್ಟೋಬರ್ 2023, 16:21 IST
Last Updated 10 ಅಕ್ಟೋಬರ್ 2023, 16:21 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿಯಲ್ಲಿ ನಡೆದ ಸ್ಮಾರ್ಟ್‌ಸಿಟಿ ಕಾಮಗಾರಿ ಕಳಪೆಯಾಗಿವೆ. ₹1,000 ಕೋಟಿ ವೆಚ್ಚದ ಈ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಬೆಳಗಾವಿ ನಾಗರಿಕರ ಹಿತರಕ್ಷಣಾ ಒಕ್ಕೂಟದಿಂದ ಇಲ್ಲಿನ ಛತ್ರಪತಿ ಶಿವಾಜಿ ಉದ್ಯಾನ ಬಳಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಮಹಿಳೆಯರು ಬುಟ್ಟಿಯಲ್ಲಿ ಮಣ್ಣು ಹಾಗೂ ಜಲ್ಲಿಕಲ್ಲು ತುಂಬಿಕೊಂಡು ಬಂದು ರಸ್ತೆಯಲ್ಲಿಟ್ಟು ಧರಣಿ ನಡೆಸಿದರು. ಶಾಸಕ ಅಭಯ ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮದಲ್ಲಿ ಶಾಸಕರ ಕೈವಾಡವಿದೆ ಎಂದೂ ದೂರಿದರು.

‘ಶಹಾಪುರ ‍ಪ್ರದೇಶದಲ್ಲಿರುವ ಬ್ಯಾಂಕ್‌ ಆಫ್ ಇಂಡಿಯಾದಿಂದ ಹಳೆ ಪಿ.ಬಿ ರಸ್ತೆಯವರೆಗೆ ರಸ್ತೆ ವಿಸ್ತರಣೆ ಮಾಡಿ, ಅಮಾಕರ ಮನೆಗಳನ್ನು ನೆಲಸಮ ಮಾಡಲಾಗಿದೆ. ಈ ರಸ್ತೆ ಅವೈಜ್ಞಾನಿಕವಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಉನ್ನತಮಟ್ಟದ ತನಿಖೆ ನಡೆಸಬೇಕು. ಅಧಿಕಾರಿಗಳು ಶಾಸಕ ಅಭಯ ಪಾಟೀಲ ಮಾತುಕೇಳಿ ತಮಗೆ ಅನುಕೂಲವಾಗುವ ರೀತಿಯಲ್ಲಿ ರಸ್ತೆ ಮಾಡಿಸಿದ್ದಾರೆ’ ಎಂದು ಮುಖಂಡ ಸುಜೀತ್‌ ಮುಳಗುಂದ ಆಕ್ರೋಶ ಹೊರಹಾಕಿದರು.

‘ಕಾಮಗಾರಿಯಿಂದ ಮನೆ ಕಳೆದುಕೊಂಡ ಜನರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಸಂತ್ರಸ್ತರಿಗೆ ಪರಿಹಾರ ಕೊಡುವಂತೆ ನ್ಯಾಯಾಲಯ ಸೂಚನೆ ನೀಡಿದೆ. ತೀರ್ಪು ಬಂದಮೇಲೂ ಬುಡಾ ಆಯುಕ್ತರು ರಸ್ತೆ ಕಾಮಗಾರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ನಿವಾಸಿಗಳಿಗೂ ಅನ್ಯಾಯವಾಗಿದೆ, ಜನರ ತೆರಿಗೆ ಹಣವೂ ವ್ಯರ್ಥವಾಗಿದೆ’ ಎಂದು ದೂರಿದರು.

‘ಸ್ಮಾರ್ಟ್‌ಸಿಟಿ ಯೋಜನೆ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿಡಬೇಕು. ಆದರೆ, ರತ್ನಾಕರ್ ಬ್ಯಾಂಕ್ ಲಿಮಿಟೆಡ್‌ನಲ್ಲಿ ಇಡಲಾಗಿದೆ. ಇದಕ್ಕೆ ಕಾರಣ ಏನೆಂದು ಬಹಿರಂಗ ಮಾಡಬೇಕು. ಅಲ್ಲದೇ ಅದರ ಬಡ್ಡಿ ಎಲ್ಲಿ ಹೋಯಿತು ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಹಾಳು ಮಾಡಿದ ಅಧಿಕಾರಿಗಳ ಮೇಲೆ ಕ್ರಮ ವಹಿಸಬೇಕು’ ಎಂದೂ ಒತ್ತಾಯಿಸಿದರು.

ಆಮ್‌ ಆದ್ಮಿ ಪಕ್ಷದ ಮುಖಂಡ ರಾಜೀವ ಟೋಪಣ್ಣವರ ಮಾತನಾಡಿ, ‘ಸ್ಮಾರ್ಟ್‌ಸಿಟಿ ಕ್ರಿಯಾ ಯೋಜನೆ ಸಿದ್ಧಪಡಿಸುವ ಮೊದಲು ರಾಜಕಾಲುವೆ ಮತ್ತು ಪ್ರಾಥಮಿಕ ಕಾಲುವೆಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗಿತ್ತು. ಆದರೆ ಕಾಲುವೆಗಳ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ಮಳೆಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿದೆ’ ಎಂದು ಆರೋಪಿಸಿದರು.

‘ಮೂಲ ಗುತ್ತಿಗೆದಾರ ಇಲ್ಲದೇ ಬಹುತೇಕ ಕಾಮಗಾರಿಗಳನ್ನು ಉಪ ಗುತ್ತಿಗೆದಾರರೇ ಮಾಡುತ್ತಿದ್ದಾರೆ. ಇದರಿಂದ ಕೆಲವು ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಸಾಧ್ಯವಾಗುತ್ತಿಲ್ಲ. ಕೆಲವು ರಸ್ತೆಗಳು ಕಳಪೆಯಾಗಿವೆ. ಕಾಂಗ್ರೆಸ್‌ ರಸ್ತೆ, ಕೆಪಿಟಿಸಿಎಲ್‌ ರಸ್ತೆ, ಕೊಲ್ಲಾಪುರ ರಸ್ತೆಗಳಲ್ಲಿ ತಗ್ಗು ಬಿದ್ದಿವೆ’ ಎಂದೂ ಆರೋಪಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಸುನೀಲ್‌ ಹಣಮಣ್ಣವರ, ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಪ್ರಧಾನ ಕಾರ್ಯ ಎಂ.ಜೆ.ಪ್ರದೀಪ್‌, ಅಜೀಂ ಪಟೇಗಾರ್‌,  ಶ್ರೀರಾಮ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಮಾಕಾಂತ ಕುಂಡೂಸ್ಕರ್‌, ಪ್ರತಿಭಾ ಪಾಟೀಲ್, ಆಯಿಶಾ ಸನದಿ, ಪರಶುರಾಮ ಡಗೆ ಸೇರಿದಂತೆ ಹಲವರು ಇದ್ದರು.

ಸ್ಮಾರ್ಟ್‌ಸಿಟಿ ಕಾಮಗಾರಿ ಕಳಪೆಯಾಗಿದ್ದು ಅವ್ಯವಹಾರ ನಡೆದಿದ್ದು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಬೆಳಗಾವಿ ನಾಗರಿಕರ ಹಿತರಕ್ಷಣಾ ಒಕ್ಕೂಟದಿಂದ ಮಂಗಳವಾರ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಲಾಯಿತು / ಪ್ರಜಾವಾಣಿ ಚಿತ್ರ
ಸ್ಮಾರ್ಟ್‌ಸಿಟಿ ಕಾಮಗಾರಿ ಕಳಪೆಯಾಗಿದ್ದು ಅವ್ಯವಹಾರ ನಡೆದಿದ್ದು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಬೆಳಗಾವಿ ನಾಗರಿಕರ ಹಿತರಕ್ಷಣಾ ಒಕ್ಕೂಟದಿಂದ ಮಂಗಳವಾರ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಲಾಯಿತು / ಪ್ರಜಾವಾಣಿ ಚಿತ್ರ

ತಪ್ಪಿತಸ್ಥರ ವಿರುದ್ಧ ಕ್ರಮ

ಸಚಿವ ‘ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದ ಬಗ್ಗೆ ಹಾಗೂ ಬುಡಾದಲ್ಲಿ ನಡೆದ ಅವ್ಯವಹಾರದ ಬಗ್ಗೆ ಜನರು ನನ್ನ ಗಮನಕ್ಕೆ ತಂದಿದ್ದಾರೆ. ಈ ಕುರಿತು ಶೀಘ್ರವೇ ತನಿಖೆ ನಡೆಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಪ್ರತಿಭಟನಾಕಾರರ ಮನವಿ ಪಡದು ಮಾತನಾಡಿದ ಅವರು ‘ಶಾಸಕ ಅಭಯ ಪಾಟೀಲ ವಿರುದ್ಧ ಸಾರ್ವಜನಿಕರು ದೂರು ನೀಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT