ಬುಧವಾರ, ನವೆಂಬರ್ 20, 2019
21 °C
ರೈತರ ಅಹೋರಾತ್ರಿ ಹೋರಾಟ

ಸಂತ್ರಸ್ತರಿಗೆ ಪರಿಹಾರಕ್ಕೆ ಆಗ್ರಹ: ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

Published:
Updated:
Prajavani

ಬೆಳಗಾವಿ: ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ನೂರಾರು ರೈತರು ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು. ಅಹೋರಾತ್ರಿ ಧರಣಿ ಮಾಡಿದರು. 

ಇಲ್ಲಿನ ಕೋಟೆ ಕೆರೆ ಆವರಣದಿಂದ ಪ್ರತಿಭಟನಾ ರ್ಯಾಲಿ ನಡೆಸಿದ ರೈತರು, ಬಾರುಕೋಲು ಚಳವಳಿ ನಡೆಸಿದರು. ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು. ಅಲ್ಲಿಯೇ ಸಾಂಕೇತಿಕವಾಗಿ ಅಡುಗೆ ತಯಾರಿಸಿದರು. ಮನೆಗಳಿಂದ ತಂದಿದ್ದ ಬುತ್ತಿಯನ್ನು ರಸ್ತೆಯಲ್ಲಿಯೇ ಕುಳಿತು ಸೇವಿಸಿದರು. 

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ: ಚನ್ನಮ್ಮ ವೃತ್ತದಲ್ಲಿ ಮಳೆಯ ಮಧ್ಯೆಯೂ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿಯೇ ಬಂದು ಮನವಿ ಪಡೆಯಬೇಕು ಎಂದು ಪಟ್ಟು ಹಿಡಿದರು. ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ತಾಳ್ಮೆ ಕಳೆದುಕೊಂಡ ರೈತರು ಜಿಲ್ಲಾಧಿಕಾರಿ ಕಚೇರಿಯ ಕಾಂಪೌಂಡ್‌ ಹಾರಿ ಕಚೇರಿಯೊಳಗೆ ನುಗ್ಗಿದರು. ಜಿಲ್ಲಾಧಿಕಾರಿ ಕೊಠಡಿಯ ಎದುರು ಕೆಲ ಪ್ರತಿಭಟನಾಕಾರರು ಧರಣಿ ನಡೆಸಿದರೇ, ಕೆಲವರು ಕಚೇರಿಯ ಆವರಣದಲ್ಲಿಯೇ ಕುಳಿತು ಪ್ರತಿಭಟನೆ ಮಾಡಿದರು. ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದ ರೈತರನ್ನು ಪೊಲೀಸರು ತಡೆದರು. ಪೊಲೀಸರೊಂದಿಗೂ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು. 

ಜಿಲ್ಲಾಧಿಕಾರಿ ಡಾ.ಡಿ.ಸಿ. ಬೊಮ್ಮನಹಳ್ಳಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ದಿಕ್ಕಾರ ಕೂಗಿದರು.

ಸಂಸದರ ವಿರುದ್ಧ ಆಕ್ರೋಶ: ‘ನೆರೆ ಬಂದು ಸಾವಿರಾರು ಜನರು ಸಂಕಷ್ಟದಲ್ಲಿದ್ದರೂ ಸರ್ಕಾರ ಸಂತ್ರಸ್ತರಿಗೆ ಪರಿಹಾರ ತಲುಪಿಸಲು ಮೀನಮೇಷ ಎನಿಸುತ್ತಿದೆ. ಅಧಿಕಾರಿಗಳು ಕೂಡ ಎಲ್ಲ ಮುಗಿದಿದೆ ಎಂಬಂತೆ ತಮ್ಮ ಪಾಡಿಗೆ ಅರಾಮವಾಗಿದ್ದಾರೆ. ಸಂತ್ರಸ್ತರ ಕೂಗು ಇವರಿಗೆ ಕೇಳುತ್ತಲೆ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯವನ್ನು ಪ್ರತಿನಿಧಿಸುವ ಸಂಸದರು ರಾಜ್ಯದ ನೆರೆ ಪ್ರವಾಹದ ಬಗ್ಗೆ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿಲ್ಲ. ಹೆಚ್ಚಿನ ಪರಿಹಾರ ಕೊಡಿಸಲು ಕೂಡ ವಿಫಲವಾಗಿದ್ದಾರೆ’ ಎಂದು ಸಂಸದರ ವಿರುದ್ಧ ಹರಿಹಾಯ್ದರು. 

ಅಧಿಕಾರಿಗಳು ಮನವೊಲಿಸಲು ಯತ್ನಿಸಿದರೂ ರೈತರು ಜಗ್ಗಲಿಲ್ಲ. ಅಹೋರಾತ್ರಿ ಧರಣಿ ನಡೆಸಿದರು. ಪ್ರತಿಭಟನೆಯಿಂದ ಚನ್ನಮ್ಮ ವೃತ್ತದ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಪರದಾಡಬೇಕಾಯಿತು. ನಾಲ್ಕೈದು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ಥವಾಯಿತು.

ರೈತ ಮುಖಂಡರಾದ ಚೂನಪ್ಪ ಪೂಜಾರಿ, ಜಯಶ್ರೀ ಗುರಣ್ಣವರ, ರಾಘವೇಂದ್ರ ನಾಯಿಕ್, ಮಂಜು ಗದಾಡಿ, ಅಶೋಕ ಯಮಕನಮರಡಿ, ಪ್ರಕಾಶ ನಾಯಕ, ಜಾವೀದ ಮುಲ್ಲಾ ಇದ್ದರು.   

ಪ್ರತಿಕ್ರಿಯಿಸಿ (+)