ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಷ್ಪ ಸಿನಿಮಾ ರೀತಿ ಲಾರಿಯಲ್ಲಿ ಅಪಾರ ಪ್ರಮಾಣದ ಗೋವಾ ಮದ್ಯ ಸಾಗಣೆ: ಅಬಕಾರಿ ಬಲೆಗೆ

ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ಬೆಳಗಾವಿ ಸುವರ್ಣಸೌಧದ ಬಳಿ ವಶಕ್ಕೆ
Published 2 ಸೆಪ್ಟೆಂಬರ್ 2023, 9:37 IST
Last Updated 2 ಸೆಪ್ಟೆಂಬರ್ 2023, 9:37 IST
ಅಕ್ಷರ ಗಾತ್ರ

ಬೆಳಗಾವಿ: ಲಾರಿಯಲ್ಲಿ, ಸಿನಿಮೀಯ ರೀತಿಯಲ್ಲಿ ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಮದ್ಯವನ್ನು ಸುವರ್ಣ ವಿಧಾನಸೌಧದ ಬಳಿ ಅಬಕಾರಿ ಅಧಿಕಾರಿಗಳು ಶನಿವಾರ ವಶಕ್ಕೆ ಪಡೆದಿದ್ದಾರೆ.

ಲಾರಿಯಲ್ಲಿ ಫ್ಲೈವುಡ್ ಹಲಗೆಗಳನ್ನು ಜೋಡಿಸಿಟ್ಟು, ಅದರಡಿ ಕಾಣದಂತೆ ಮದ್ಯದ ಬಾಟಲಿ ಬಾಕ್ಸ್‌ಗಳನ್ನಿಟ್ಟು ಸಾಗಣೆ ಮಾಡಲಾಗುತ್ತಿತ್ತು. ದಾಳಿ ವೇಳೆ ವಿವಿಧ ಬ್ರ್ಯಾಂಡೆಡ್ ಕಂಪನಿಗಳ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಅವುಗಳ ಒಟ್ಟು ಮೌಲ್ಯ ಲೆಕ್ಕಹಾಕಲಾಗುತ್ತಿದೆ.

‘ಗೋವಾದಿಂದ ರಾಜ್ಯಕ್ಕೆ ಅಕ್ರಮವಾಗಿ ಭಾರಿ ಪ್ರಮಾಣದಲ್ಲಿ ಮದ್ಯ ಸಾಗಾಟವಾಗುತ್ತಿದೆ ಎಂಬ ಸುಳಿವು ಸಿಕ್ಕಿತ್ತು. ಹಾಗಾಗಿ ಕರಾವಳಿ ಭಾಗದಿಂದ ಬರುವ ಎಲ್ಲ ವಾಹನಗಳ ಮೇಲೆ ನಿಗಾ ಇರಿಸಿದ್ದೆವು. ಶಂಕಿತ ವಾಹನಗಳನ್ನು ಪರಿಶೀಲಿಸಿದಾಗ, ಇದರಲ್ಲಿ ಮದ್ಯ ಸಿಕ್ಕಿದೆ. ಉತ್ತರ ಪ್ರದೇಶದ ವಾರಾಣಸಿಯ ಚಾಲಕ ವೀರೇಂದರ್ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆದರೆ, ಅದನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದ ಎಂದು ತಿಳಿಸಿಲ್ಲ. ನಸುಕಿನ ಜಾವ 3.30ಕ್ಕೆ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆದಿದೆ’ ಎಂದು ಹೆಚ್ಚುವರಿ ಅಬಕಾರಿ ಆಯುಕ್ತ ವೈ. ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಲಾರಿ ಪರಿಶೀಲಿಸಿದಾಗ, ಮೊದಲ ಎರಡು ಸಾಲುಗಳಲ್ಲಿ ಪ್ಲೈವುಡ್‌ ಹಲಗೆಗಳನ್ನು ಇರಿಸಲಾಗಿತ್ತು. 180 ಮಿ.ಲೀ ಮದ್ಯದ ಬಾಟಲಿ ಪತ್ತೆಯಾಗಿತ್ತು. ಹಾಗಾಗಿ ನಮಗೆ ದೊರೆತ ಮಾಹಿತಿ ತಪ್ಪಾಗಿದೆ ಎಂದು ಭಾವಿಸಿದ್ದೆವು. ಆದರೆ, ಲಾರಿ ಕ್ಯಾಬಿನ್‌ನ ಹಿಂದಿನ ಸಾಲುಗಳಲ್ಲಿ ಕೆಲವು ಪ್ಲೈವುಡ್ ಹಲಗೆಗಳನ್ನು ತೆಗೆದಾಗ, ಭಾರಿ ಪ್ರಮಾಣದಲ್ಲಿ ಮದ್ಯದ ಬಾಟಲಿ ಸಿಕ್ಕಿವೆ. ಪ್ಲೈವುಡ್‌ ಹಲಗೆಗಳನ್ನು ಚೌಕಾಕಾರವಾಗಿ ಕತ್ತರಿಸಿ, ಅದರೊಳಗೆ ಮದ್ಯದ ಬಾಕ್ಸ್‌ಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ’ ಎಂದು ಹೇಳಿದರು.

‘ವಿವಿಧ ಬ್ರ್ಯಾಂಡ್‌ಗಳ ಮದ್ಯದ ಮೌಲ್ಯವನ್ನು ಲೆಕ್ಕ ಹಾಕುತ್ತಿದ್ದೇವೆ. ₹25 ಲಕ್ಷ ಮೌಲ್ಯದ ವಾಹನ ವಶಪಡಿಸಿಕೊಂಡಿದ್ದೇವೆ. ಅಬಕಾರಿ ಅಧೀಕ್ಷಕ ವಿಜಯಕುಮಾರ ಹಿರೇಮಠ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿದೆ’ ಎಂದು ಹೇಳಿದರು.

ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ಅಕ್ರಮವಾಗಿ ರಕ್ತಚಂದನವನ್ನು ಸಾಗಣೆ ಮಾಡಲು ಹಾಲಿನ ಟ್ಯಾಂಕರ್‌ಗೆ ಒಳಗೆ ಕಬ್ಬಿಣದ ಹಲಗೆಗಳನ್ನು ಜೋಡಿಸಿ, ರಕ್ತಚಂದನ ಸಾಗಾಟ ಮಾಡಲಾಗುತ್ತಿದ್ದದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT