ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಬೆಳಗಾವಿಯಲ್ಲಿ ನಿಲ್ಲಲಿವೆ ನೌಕೆ, ಟ್ಯಾಂಕರ್, ಯುದ್ಧ ವಿಮಾನ

Last Updated 24 ಡಿಸೆಂಬರ್ 2020, 6:08 IST
ಅಕ್ಷರ ಗಾತ್ರ

ಬೆಳಗಾವಿ: ಭಾರತೀಯ ಸೇನೆಯ ಶೌರ್ಯ, ಮಹತ್ವ ಹಾಗೂ ಸಾಧನೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ನಗರದ ಕೇಂದ್ರ ಭಾಗವಾದ ರೈಲು ನಿಲ್ದಾಣ ಸಮೀಪದಲ್ಲಿ ಸೈನಿಕ ಸ್ಮಾರಕ ಸ್ಥಾಪಿಸಲಾಗುತ್ತಿದೆ. ₹ 1.50 ಕೋಟಿ ವೆಚ್ಚದಲ್ಲಿ ಸ್ಮಾರಕ ಮೈದಳೆಯಲಿದ್ದು, ಈ ಸಂಬಂಧ ಕೆಲಸ ಆರಂಭವಾಗಿದೆ.

ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಉದ್ಯಾನದಲ್ಲಿ ಬೆಳೆದಿದ್ದ ಕಳೆ ಗಿಡಗಳನ್ನು ತೆರೆವುಗೊಳಿಸಲಾಗಿದ್ದು, ಅಲ್ಲಿ ಆಕರ್ಷಕ ಸೈನಿಕ ಸ್ಮಾರಕ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ದಂಡು ಮಂಡಳಿಯ ಸಾಮಾನ್ಯ ಸಭೆಯಲ್ಲಿ ಅನುಮತಿ ಪಡೆಯಲಾಗಿದ್ದು, ನಗರದ ಹೊಸ ಪ್ರವಾಸಿ ತಾಣವನ್ನಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ.

ಭಾರತೀಯ ಸೇನೆಗೆ ಬೆಳಗಾವಿಯ ಕೊಡುಗೆ ಅಪಾರವಾಗಿದೆ. ಇಲ್ಲಿನ ಮರಾಠಾ ಲಘು ಪದಾತಿ ದಳ (ಎಂಎಲ್‌ಐಆರ್‌ಸಿ), ಏರ್‌ಮನ್‌ ತರಬೇತಿ ಶಾಲೆ, ಕಮಾಂಡೋ ತರಬೇತಿ ಕೇಂದ್ರಗಳಲ್ಲಿ ಯುವ ಜನರಿಗೆ ಕಠಿಣ ತರಬೇತಿ ನೀಡಿ ಸೈನಿಕರನ್ನು ಸಜ್ಜುಗೊಳಿಸಲಾಗುತ್ತಿದೆ ಮತ್ತು ಸೇನೆಗೆ ಬಲ ತುಂಬಲಾಗುತ್ತಿದೆ. ಹಿಂದಿನಿಂದಲೂ ಇಲ್ಲಿ ತರಬೇತಿ ಪಡೆದ ಸಾವಿರಾರು ಮಂದಿ ಸೇನೆಯ ವಿವಿಧ ವಿಭಾಗಗಳಲ್ಲಿ ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ, ಸೈನಿಕ ಸ್ಮಾರಕ ತಲೆಎತ್ತುತ್ತಿರುವುದು ಹೊಸ ಆಕರ್ಷಣೆಯಾಗಲಿದೆ ಎಂದು ಆಶಿಸಲಾಗಿದೆ.

‘ನಗರದಲ್ಲಿ ಸೈನಿಕ ಸ್ಮಾರಕ ನಿರ್ಮಾಣ ಮಾಡುವ ಕನಸು ನನಸಾಗಿಸಲು ಒಂದೂವರೆ ವರ್ಷಗಳ ಸತತ ಪ್ರಯತ್ನ ನಡೆಸಿದ್ದೇನೆ. ಸ್ಮಾರಕದ ಮೂಲಕ, ಭಾರತೀಯ ಸೇನೆಗಳಾದ ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಪಡೆಗಳಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗೆ ಗೌರವ ಸೂಚಿಸುವ ಉದ್ದೇಶ ನಮ್ಮದಾಗಿದೆ. ಇಂದಿನ ಯುವಪೀಳಿಗೆಯಲ್ಲಿ ದೇಶಭಕ್ತಿ ಉದ್ದೀಪಿಸುವ ಆಶಯವೂ ಇದೆ. ಇದಕ್ಕಾಗಿ ಮಹಾನಗರ ಪಾಲಿಕೆ, ಸ್ಮಾರ್ಟ್‌ ಸಿಟಿ ಹಾಗೂ ದಂಡು ಮಂಡಳಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆ ಸಿದ್ಧಪಡಿಸಲಾಗಿದೆ’ ಎಂದು ಶಾಸಕ ಅನಿಲ ಬೆನಕೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಸೇನೆಯ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸೈನಿಕ ಸ್ಮಾರಕ ಉದ್ಯಾನದಲ್ಲಿ ವಾಯು ಸೇನೆಯ ಯುದ್ಧ ವಿಮಾನ, ಭೂ ಸೇನೆಯ 2 ಟ್ಯಾಂಕರ್‌ಗಳು ಹಾಗೂ ನೌಕಾಪಡೆಯ ಯುದ್ಧ ನೌಕೆಗಳನ್ನು ತರಿಸಲಾಗುವುದು. ಅವುಗಳನ್ನು ಇಲ್ಲಿ ಶಾಶ್ವತವಾಗಿ ಪ್ರದರ್ಶಿಸಲಾಗುವುದು. ಅವುಗಳು ಯಾವ್ಯಾವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು ಎನ್ನುವ ಮಾಹಿತಿಯನ್ನೂ ಅಲ್ಲಿ ಹಾಕಲಾಗುವುದು. ಈ ಮೂಲಕ ಸೇನೆಯ ಶೌರ್ಯವನ್ನು ಜನರಿಗೆ ತಿಳಿಸುವುದು ಮತ್ತು ವಿಶೇಷವಾಗಿ ಯುವಜನರನ್ನು ಸೇನೆಗೆ ಸೇರುವಂತೆ ಪ್ರೇರಣೆ ನೀಡುವುದು ನಮ್ಮ ಆಶಯವಾಗಿದೆ. ಕರ್ನಾಟಕದೊಂದಿಗೆ ನರೆಯ ಗೋವಾ ಹಾಗೂ ಮಹಾರಾಷ್ಟ್ರದ ಪ್ರವಾಸಿಗರನ್ನು ಆಕರ್ಷಿಸಲಾಗುವುದು. ಮಿಲಿಟರಿ ಕ್ಯಾಂಪ್‌ಗೆ ಬಂದಂತೆ ಭಾಸುವಾಗುವಂತೆ ಈ ಸ್ಮಾರಕದ ವಾತಾವರಣ ಇರಲಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT