ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಅಬ್ಬರ: ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ

Last Updated 24 ಜುಲೈ 2021, 4:37 IST
ಅಕ್ಷರ ಗಾತ್ರ

ನಿಪ್ಪಾಣಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವೇದಗಂಗಾ ನದಿಯಲ್ಲಿ ಪ್ರವಾಹ ಬಂದು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಶುಕ್ರವಾರ ನಸುಕಿನ ಜಾವ ಸುಮಾರು 3 ಗಂಟೆಯಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ. ತಾಲ್ಲೂಕಿನ ಯಮಗರ್ಣಿ, ಸೌಂದಲಗಾ, ಮಾಂಗೂರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನದಿ ನೀರು ಸುಮಾರು 5 ರಿಂದ 6 ಅಡಿಗಳಷ್ಟು ನೀರು ಬಂದಿದೆ.

ತಾಲ್ಲೂಕಿನ ಹುನ್ನರಗಿ ಗ್ರಾಮದ ಕಲಗೌಡ ಪಾಟೀಲ ಮತ್ತು ಕುಟುಂಬವು ಗ್ರಾಮದಲ್ಲಿ ಉಂಟಾದ ಪ್ರವಾಹದಿಂದ ಬಚಾವ ಆಗಲು ಚಿಕ್ಕೋಡಿ ತಾಲ್ಲೂಕಿನ ಚಿಂಚಣಿ ಗ್ರಾಮದ ಸಂಬಂಧಿಕರ ಮನೆಗೆ ಶುಕ್ರವಾರ ಬೆಳಗಿನ ಜಾವ ಸುಮಾರು 3 ಗಂಟೆಗೆ ಯಮಗರ್ಣಿ, ನಿಪ್ಪಾಣಿ ಮೂಲಕ ಕಾರಿನಲ್ಲಿ ಹೋಗುತ್ತಿದ್ದರು. ಯಮಗರ್ಣಿ ಬಳಿ ರಸ್ತೆಯಲ್ಲಿದ್ದ ನೀರಿನ ಮಟ್ಟದ ಅಂದಾಜು ಬರದೆ ಕಾರು ರಸ್ತೆ ಮಧ್ಯೆ ಬಂದು ಬಿದ್ದಿತು. ಅಷ್ಟರಲ್ಲೆ ಲಾರಿಯೂ ಅಲ್ಲಿಂದ ಹೋಗುವ ಸಂದರ್ಭದಲ್ಲಿ ಅದು ಅಲ್ಲಿ ಸಿಲುಕಿಂಡಿತು. ಎರಡೂ ವಾಹನಗಳಲ್ಲಿಯ ಸುಮಾರು 8 ಜನರನ್ನು ರಕ್ಷಿಸಲಾಗಿದೆ. ನದಿ ನೀರಿನಲ್ಲಿ ಕಾರು ಕೊಚ್ಚಿ ಹೋಗಬಾರದೆಂದು ಕಾರನ್ನು ಲಾರಿಗೆ ಕಟ್ಟಲಾಗಿತ್ತು. ಆದರೂ ನೀರಿನ ರಭಸದಲ್ಲಿ ಕಾರು ಕೊಚ್ಚಿ ಹೋಗಿದೆ ಎಂದು ಹೇಳಲಾಗುತ್ತಿದೆ.

ವೇದಗಂಗಾ ಹಾಗೂ ದೂಧಗಂಗಾ ನದಿಗಳ ಹರಿವು ಹೆಚ್ಚಳವಾಗಿದ್ದರಿಂದ ನದಿಗಳ ದಡದಲ್ಲಿರುವ ತಾಲ್ಲೂಕಿನ ಕೋಡಣಿ, ಯಮಗರ್ಣಿ, ಭಿವಶಿ, ಸಿದ್ನಾಳ, ಹುನ್ನರಗಿ, ಕಾರದಗಾ, ಮಾಂಗೂರ, ಬಾರವಾಡ, ಮಮದಾಪೂರ ಗ್ರಾಮಗಳಲ್ಲಿಯ ಹಲವಾರು ಕುಟುಂಬಗಳನ್ನು ಸಂಬಂಧಿಕರ ಮನೆಗಳಿಗೆ ತಲುಪಿಸಲಾಗಿದೆ. ಕೆಲವರನ್ನು ಗ್ರಾಮಗಳಲ್ಲೆ ಸ್ಥಾಪಿಸಿದ ಗಂಜಿಕೇಂದ್ರಗಳಲ್ಲಿ ಸ್ಥಳಾಂತರಿಸಲಾಗಿದೆ.

ಕೋಡಣಿ ಗ್ರಾಮದ ಪಕ್ಕದಲ್ಲಿ ಹರಿಯುತ್ತಿದ್ದ ಮಹಾರಾಷ್ಟ್ರದ ಚಿಕೋತ್ರಾ ನದಿಯಲ್ಲೂ ನೀರಿನ ಪ್ರವಾಹ ಹೆಚ್ಚಾಗಿ ಸಂಪೂರ್ಣ ಗ್ರಾಮದಲ್ಲಿ ನೀರು ವ್ಯಾಪಿಸಿದೆ. ಸುಮಾರು 50 ಜನರನ್ನು ಎನ್‍ಡಿಆರ್‍ಎಫ್ ತಂಡವು ರಕ್ಷಿಸಿದೆ. ಕುರ್ಲಿ ಹಾಗೂ ಬೂಧಿಹಾಳ ಗ್ರಾಮಗಳಲ್ಲೂ ನದಿ ನೀರು ವ್ಯಾಪಿಸಿಕೊಂಡಿದ್ದು ನೂರಾರು ಜನರನ್ನು ಸ್ಥಳಾಂತರಿಸಲಾಗಿದೆ. ನೂರಾರು ಜಾನುವಾರುಗಳನ್ನು ರಕ್ಷಿಸಲಾಗಿದೆ.

ಹುನ್ನರಗಿ ಗ್ರಾಮವು ಅರ್ಧದಷ್ಟು ಮುಳಗುಗಡೆಯಾಗಿದೆ. ಕೆಲ ಮನೆಗಳಲ್ಲಿ ಸುಮಾರು 6 ಅಡಿಯಷ್ಟು ನೀರು ನುಗ್ಗಿದೆ. ಲಕ್ಷ್ಮೀ-ನಾರಾಯಣ ಮಂದಿರದಲ್ಲಿಯೂ ನೀರು ನುಗ್ಗಿದೆ. ಗ್ರಾಮದಲ್ಲಿ ಸ್ಥಾಪಿಸಿದ ಗಂಜಿ ಕೇಂದ್ರದಲ್ಲಿ ಸುಮಾರು 60 ಜನರು ಆಸರೆ ಪಡೆದಿದ್ದಾರೆ.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೆಟಿ ನೀಡಿ ಪರಿಶೀಲನೆ ನಡೆಸಿದರು.

ಹೆದ್ದಾರಿಯ ಎರಡೂ ಬದಿ ವಾಹನಗಳು ಸುಮಾರು 10 ಕಿ.ಮೀ.ನಷ್ಟು ಸಾಲುಸಾಲಾಗಿ ನಿಂತಿವೆ. ಸಿಲುಕಿಕೊಂಡ ವಾಹನ ಚಾಲಕರನ್ನು ಹಾಗೂ ವಾಹನದಲ್ಲಿಯ ಜನರನ್ನು ಸ್ಥಳೀಯ ವಿರುಪಾಕ್ಷಲಿಂಗ ದೇವಸ್ಥಾನದ ಪ್ರಾಣಲಿಂಗ ಸ್ವಾಮೀಜಿ, ರಾಷ್ಟ್ರಕರ್ಮ ಸಂಘದ ಅಧ್ಯಕ್ಷ ವಜ್ರಕಾಂತ ಸದಲಗೆ ಹಾಗೂ ಸ್ಥಳೀಯ ಭಾಯಿ ಗ್ರುಪ್‍ನ ಮುಖಂಡ ಜುಬೇರ ಬಾಗವಾನ ಮತ್ತು ಅವರ ತಂಡದ ಸದಸ್ಯರು ಉಚಿತವಾಗಿ ಊಟ, ಉಪಹಾರ, ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT