ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶೋಕ ಪಟ್ಟಣ ಮುಂದಿವೆ ಸಾಲು ಸಾಲು ಸವಾಲು...

ರಾಮದುರ್ಗ ಪಟ್ಟಣಕ್ಕೆ ಒದಗಿಸಬೇಕಿದೆ ಸಮರ್ಪಕ ಬೆಳಕಿನ ಸೌಲಭ್ಯ, ತೆರವಾಗಬೇಕಿದೆ ಮಲಪ್ರಭಾ ನದಿ ಒತ್ತುವರಿ
Published 24 ಮೇ 2023, 18:30 IST
Last Updated 24 ಮೇ 2023, 18:30 IST
ಅಕ್ಷರ ಗಾತ್ರ

ರಾಮದುರ್ಗ: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ರಾಮದುರ್ಗ ಕ್ಷೇತ್ರದಿಂದ ಅಶೋಕ ಪಟ್ಟಣ ಆಯ್ಕೆಯಾಗಿದ್ದಾರೆ. ಅಭಿವೃದ್ಧಿ ವಿಚಾರವಾಗಿ ಅವರ ಮುಂದೆ ಸಾಲು ಸಾಲು ಸವಾಲುಗಳಿವೆ. ಕ್ಷೇತ್ರದ ಪ್ರತಿ ಹಳ್ಳಿಗೆ ಮೂಲಸೌಕರ್ಯ ಒದಗಿಸುವ ಜವಾಬ್ದಾರಿ ಅವರ ಮೇಲಿದೆ.

ರಾಮದುರ್ಗ ಪಟ್ಟಣದಲ್ಲಿ ಹಾಯ್ದುಹೋಗಿರುವ ಹೆದ್ದಾರಿಯಲ್ಲಿ ಅಳವಡಿಸಿದ್ದ ಬಣ್ಣದ ಬೀದಿದೀಪಗಳು ಹಾಳಾಗಿವೆ. ಕೆಲವೊಂದು ಮುರಿದು ಬಿದ್ದಿವೆ. ಆದರೆ, ಐದು ವರ್ಷಗಳಿಂದ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಹಾಗಾಗಿ ರಾತ್ರಿ ಜನರು ಕತ್ತಲಲ್ಲೇ ಸಂಚರಿಸುವಂತಾಗಿದೆ.

‘ಅಶೋಕ ಪಟ್ಟಣ ಈ ಹಿಂದೆ ಶಾಸಕರಾಗಿದ್ದಾಗ, ಹೆದ್ದಾರಿಯಲ್ಲಿ ಬೀದಿದೀಪಗಳನ್ನು ಅಳವಡಿಸಿದ್ದರು. ನಂತರ ಅಧಿಕಾರಕ್ಕೆ ಬಂದ ಶಾಸಕ ಮಹಾದೇವಪ್ಪ ಯಾದವಾಡ ಅವುಗಳ ದುರಸ್ತಿಗೆ ಮುಂದಾಗಲಿಲ್ಲ. ಈಗ ಮತ್ತೆ ಪಟ್ಟಣ ಶಾಸಕರಾಗಿದ್ದು, ಹಾಳಾಗಿರುವ ಬೀದಿದೀಪಗಳನ್ನು ದುರಸ್ತಿಗೊಳಿಸಬೇಕು. ಪಟ್ಟಣಕ್ಕೆ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು’ ಎಂಬುದು ಜನರ ಆಗ್ರಹ.

ಪ್ರವಾಸಿಗರನ್ನು ಸೆಳೆಯುವ ಕೆಲಸವಾಗಲಿ: ರಾಮದುರ್ಗ ಪಟ್ಟಣದ ಹೊರವಲಯದಲ್ಲಿ ಬೃಹತ್ ಶಿವನ ಮೂರ್ತಿ ನಿರ್ಮಿಸಿದ ಆವರಣದಲ್ಲಿ ಈಜುಕೊಳ, ವಾಕಿಂಗ್‌ ಪಾರ್ಕ್‌, ಹೂತೋಟ ನಿರ್ಮಿಸಿ, ಈ ಪರಿಸರವನ್ನು ಆಕರ್ಷಣೀಯವಾಗಿಸಬೇಕಿದೆ. ರಾಜ್ಯ ಹಾಗೂ ಹೊರರಾಜ್ಯಗಳ ಪ್ರವಾಸಿಗರನ್ನು ಸೆಳೆಯುವ ಕೆಲಸವಾಗಬೇಕಿದೆ.

‘2018ರಲ್ಲಿ ಅಶೋಕ ಪಟ್ಟಣ ಮಲಪ್ರಭಾ ನದಿಗೆ ತಡೆಗೋಡೆ ನಿರ್ಮಿಸಿದ್ದರು. ಹಾಗಾಗಿ ಪ್ರವಾಹ ಬಂದರೂ, ಪಟ್ಟಣಕ್ಕೆ ನದಿಯ ನೀರು ನುಗ್ಗಲಿಲ್ಲ. ಈಗ ಕೆಲವರು ನದಿಯ ವ್ಯಾಪ್ತಿಗೆ ಸೇರಿದ ಜಾಗವನ್ನು ಒತ್ತುವರಿ ಮಾಡುತ್ತಿದ್ದಾರೆ. ಅದನ್ನು ತೆರವುಗೊಳಿಸಬೇಕು. ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಜನರು ಒತ್ತಾಯಿಸುತ್ತಾರೆ.

ಕಾಮಗಾರಿ ಬೇಗ ಪೂರ್ಣಗೊಳಿಸಿ: ವೀರಭದ್ರೇಶ್ವರ ಮತ್ತು ಬಸವೇಶ್ವರ ಏತ ನೀರಾವರಿ ಯೋಜನೆಗಳ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಈ ಯೋಜನೆಗಳ ಮೂಲಕ ಕಾಲುವೆಯಲ್ಲಿ ಯಾವಾಗ ನೀರು ಹರಿಯುತ್ತದೆ ಎಂದು ರೈತರು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಇವೆರಡೂ ಯೋಜನೆಗಳನ್ನು ಬೇಗ ಪೂರ್ಣಗೊಳಿಸಬೇಕಿದೆ.

ರಸ್ತೆಗಳು ಅಭಿವೃದ್ಧಿಯಾಗಲಿ: ರಾಮದುರ್ಗದಿಂದ ಲೋಕಾಪುರ, ಬೆಳಗಾವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿರುವುದರಿಂದ ಸಂಚಾರಕ್ಕೆ ಜನರು ತೊಂದರೆ ಅನುಭವಿಸುವಂತಾಗಿದೆ. ತುರ್ತಾಗಿ ಈ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ರಾಮದುರ್ಗ–ಕಟಕೋಳ-ಕೆ.ಚಂದರಗಿ ಮಾರ್ಗದ ರಸ್ತೆ ಅಗಲೀಕರಣವಾಗಬೇಕಿದೆ. ರಾಮದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಿ, ರೋಗಿಗಳು ಚಿಕಿತ್ಸೆಗಾಗಿ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಬೇಕು ಎಂಬುದು ಜನರ ಒತ್ತಾಯ.

‘ಅಶೋಕ ಪಟ್ಟಣ ಶಾಸಕರಾಗಿದ್ದ ವೇಳೆ ರಾಮದುರ್ಗ ಪಟ್ಟಣಕ್ಕೆ ನವಿಲುತೀರ್ಥ ಜಲಾಶಯದಿಂದ ನೇರವಾಗಿ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಕೈಗೊಂಡಿದ್ದರು. ಆದರೆ, ಕೆಲವು ಬಡಾವಣೆಗಳಿಗೆ ಈಗಲೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಹಳ್ಳಿಗಳಲ್ಲಿ ಜಲಜೀವನ ಮಿಷನ್‌ ಯೋಜನೆಯಡಿ ನಲ್ಲಿಗಳನ್ನು ಅಳವಡಿಸಿದ್ದರೂ, ನೀರು ಪೂರೈಕೆಯಾಗುತ್ತಿಲ್ಲ. ಹಾಗಾಗಿ ಪಟ್ಟಣ, ಗ್ರಾಮೀಣ ಭಾಗಕ್ಕೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸುತ್ತಾರೆ.

ಅಶೋಕ ಪಟ್ಟಣ
ಅಶೋಕ ಪಟ್ಟಣ
ರಾಮದುರ್ಗ ಪಟ್ಟಣದಲ್ಲಿ ಹಾಯ್ದುಹೋಗಿರುವ ಹೆದ್ದಾರಿಯಲ್ಲಿ ಹಾಳಾಗಿರುವ ಬೀದಿದೀಪಗಳ ದುರಸ್ತಿಗೆ ಕ್ರಮ ಕೈಗೊಳ್ಳುತ್ತೇನೆ. ಅಪೂರ್ಣಗೊಂಡಿರುವ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ರಾಮದುರ್ಗ ಕ್ಷೇತ್ರವನ್ನು ನಂದನವನವಾಗಿಸುತ್ತೇನೆ.
ಅಶೋಕ ಪಟ್ಟಣ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT