ಶುಕ್ರವಾರ, ಏಪ್ರಿಲ್ 23, 2021
32 °C
ರಮೇಶ ಬೆಂಬಲಿಗರಿಂದ ಮೆರವಣಿಗೆ

ಸಿಒಡಿ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ: ‘ಶಾಸಕ ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ. ಪ್ರಕರಣದ ತನಿಖೆಯನ್ನು ಸಿಒಡಿಗೆ ವಹಿಸಬೇಕು’ ಎಂದು ಆಗ್ರಹಿಸಿ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಕೊಣ್ಣೂರ ಗ್ರಾಮ ಹಾಗೂ ಉಪ್ಪಾರಹಟ್ಟಿ-ಮಾಲದಿನ್ನಿ ಭಾಗದ ಸಾವಿರಾರು ಅಭಿಮಾನಿಗಳು, ಪಟ್ಟಣ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ತಾ.ಪಂ. ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಪ್ರತ್ಯೇಕವಾಗಿ ಮೆರವಣಿಗೆಯಲ್ಲಿ ಬಂದು ಇಲ್ಲಿ ಜಮಾಯಿಸಿದರು. 15 ಕಿ.ಮೀ. ಮೆರವಣಿಗೆ ನಡೆಸಿ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಮತ್ತು ಎಎಸ್ಪಿ ಅಮರನಾಥ ರೆಡ್ಡ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಗಳ ಕಾವು ಜೋರಾಗಿದ್ದರಿಂದ, ಮುಂಜಾಗ್ರತಾ ಕ್ರಮವಾಗಿ ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾತು. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಯಿತು. ವರ್ತಕರು ಅಂಗಡಿಗಳನ್ನು ಸ್ವಯಂಪ್ರೇರಣೆಯಿಂದ ಬಂದ್ ಮಾಡಿದರು. ಪರಿಣಾಮ, ಪ್ರಮುಖ ವೃತ್ತಗಳು ಬಿಕೋ ಎನ್ನುತ್ತಿದ್ದವು. ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಜೋರಾಗಿತ್ತು.

ಮಾಲದಿನ್ನಿ ಭಾಗದಿಂದ ಬಂದ ಬೆಂಬಲಿಗರು ನಾಕಾದಲ್ಲಿ ರಸ್ತೆ ತಡೆದು ಶಾಸಕರ ಪರ ಘೋಷಣೆಗಳನ್ನು ಕೂಗಿದರು. ‘ಅವರ ತೇಜೋವಧೆಗೆ ವ್ಯವಸ್ಥಿತ ಸಂಚು ರೂಪಿಸಲಾಗಿದೆ. ಆದಷ್ಟು ಬೇಗ ಈ ಪ್ರಕರಣದ ಹಿಂದಿನ ಷಡ್ಯಂತ್ರವನ್ನು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.

ಕೊಣ್ಣೂರ, ಮರಡಿಮಠ, ಫಾಲ್ಸ್, ಮೇಲ್ಮಟ್ಟಿ, ಗೊಡಚಿನಮಲ್ಕಿ, ಮಾಣಿಕವಾಡಿ ಗ್ರಾಮಗಳಿಂದಲೂ ಅಭಿಮಾನಿಗಳು ಬಂದು ಬಸವೇಶ್ವರ ವೃತ್ತದಲ್ಲಿ ಹಳೆಯ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚುವರಿ ಎಸ್ಪಿ ಅಮರನಾಥ ರೆಡ್ಡಿ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು