ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ರಣಕುಂಡೆ ಗ್ರಾಮದಲ್ಲಿ ಮಂದಿರ ನಿರ್ಮಾಣ ಘರ್ಷಣೆ ಪ್ರಕರಣ ಸುಖಾಂತ್ಯ

ಮಂದಿರದ ವಿಚಾರದಲ್ಲಿ 2 ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು
Last Updated 21 ಅಕ್ಟೋಬರ್ 2021, 14:24 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ರಣಕುಂಡೆ ಗ್ರಾಮದಲ್ಲಿ ಉಂಟಾಗಿದ್ದ ಮಂದಿರ ನಿರ್ಮಾಣ ಗಲಾಟೆ ಸುಖಾಂತ್ಯ ಕಂಡಿದೆ.

ಆ ಗ್ರಾಮದ ಜಾಗವೊಂದರಲ್ಲಿ ಮಂದಿರ ನಿರ್ಮಿಸುವ ವಿಚಾರದಲ್ಲಿ 2 ಗುಂಪುಗಳ ನಡುವೆ ಬುಧವಾರ ರಾತ್ರಿ ಘರ್ಷಣೆ ನಡೆದಿತ್ತು. ನಾಲ್ವರು ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪೊಲೀಸರು, ಮುಖಂಡರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಗುರುವಾರ ಜರುಗಿದ ಶಾಂತಿ ಸಭೆಯಲ್ಲಿ ವಿವಾದ ಬಗೆಹರಿಸುವ ಪ್ರಯತ್ನ ಮಾಡಲಾಗಿದೆ. ಲಕ್ಷ್ಮಿ ಹಾಗೂ ಹುಡೆ ದೇವರ ದೇವಸ್ಥಾನದ ಹೆಸರಿನಲ್ಲಿ ಪಹಣಿ ಪತ್ರಿಕೆ ಇರುವುದರಿಂದ ಅದೇ ಜಾಗದಲ್ಲಿ ಹುಡೆ ದೇವರ ಗುಡಿ (ಚಿಕ್ಕದು) ಕಟ್ಟಲು ಅನುಮತಿ ಸಿಕ್ಕಿಂದರಿಂದಾಗಿ ಪ್ರಕರಣ ಸುಖಾಂತ್ಯ ಕಂಡಿದೆ.

ಗ್ರಾಮದ ಹುಡೆ ದೇವರ ಮಂದಿರ ನಿರ್ಮಾಣ ಕಾರ್ಯ ಗುರುವಾರ ನಡೆದಿದ್ದು, ಗ್ರಾಮಸ್ಥರೆ ಸೇರಿ ನಿರ್ಮಿಸುತ್ತಿದ್ದಾರೆ. ಬುಧವಾರ ರಾತ್ರಿ ಎರಡು ಗುಂಪುಗಳ ನಡುವೆ ಸಂಭವಿಸಿದ ಗಲಭೆಯಲ್ಲಿ ಮಹ್ಮದಷರೀಫ ಇನಾಮದಾರ, ಅಂಜುಮನ್‌‌ಪಾಷಾ ಇನಾಮದಾರ ಹಾಗೂ ಇನ್ನೊಂದು ಗುಂಪಿನ ಭುಜಂಗ ಪಾಟೀಲ, ಮಾರುತಿ ಪಾಟೀಲ ಎನ್ನುವವರು ಗಾಯಗೊಂಡಿದ್ದಾರೆ. ಗ್ರಾಮೀಣ ‍‍ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿವೆ.

ಶಾಂತಿ ಸಭೆ:ಗ್ರಾಮದ ಜಾಗವೊಂದರಲ್ಲಿ ಬುಧವಾರ ಮಂದಿರ ನಿರ್ಮಾಣ ಕಾರ್ಯಕ್ಕೆ ಕೆಲವು ಯುವಕರು ಮುಂದಾಗಿದ್ದರು. ಈ ವೇಳೆ ಬೆಳಗಾವಿಯಲ್ಲಿರುವ ಇನಾಮದಾರ ಕುಟುಂಬದ ಕೆಲವರು ಬಂದು ಈ ಮಂದಿರ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ತೆರವುಗೊಳಿಸಿದ್ದರು. ಆಗ ಎರಡು ಗುಂಪಿನ ಮಧ್ಯೆ ಮಾರಕಾಸ್ತ್ರಗಳಿಂದ ಹೊಡೆದಾಟವಾಗಿತ್ತು. ಸ್ಥಳಕ್ಕೆ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ತಹಶೀಲ್ದಾರ್ ಆರ್‌.ಕೆ. ಕುಲಕರ್ಣಿ, ಡಿಸಿಪಿ ವಿಕ್ರಂ ಅಮಟೆ, ಎಸಿಪಿ, ಇನ್‌ಸ್ಪೆಕ್ಟರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಎರಡೂ ಸಮುದಾಯದ ಜನರ ಸಭೆ ಕರೆದು ಮಾತುಕತೆ ನಡೆಸಿದರು. ಮಧ್ಯರಾತ್ರಿಯೇ ಶಾಂತಿ ಸಭೆ ನಡೆದಿತ್ತು.

ದಾಖಲೆಗಳು ಮತ್ತು ಪಹಣಿ ಪತ್ರಿಕೆ ಪರಿಶೀಲಿಸಿದಾಗ ಅದು ಲಕ್ಷ್ಮಿ ಹಾಗೂ ಹುಡೆ ದೇವರ ದೇವಸ್ಥಾನದ ಹೆಸರಿನಲ್ಲಿ ಇರುವುದು ಗೊತ್ತಾಗಿದೆ. ಹೀಗಾಗಿ, ಅಲ್ಲಿ ಗುಡಿ ನಿರ್ಮಾಣಕ್ಕೆ ಅಧಿಕಾರಿಗಳು ಹಸಿರು ನಿಶಾನೆ ತೋರಿದರು. ಗ್ರಾಮ ಪಂಚಾಯ್ತಿಯವರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎನ್ನಲಾಗಿದೆ. ಆದರೆ, ಬಿಜೆಪಿ ಮುಖಂಡರು ಗ್ರಾಮದವರ ಮೇಲೆ ದಾಖಲಾಗಿರುವ ಪ್ರಕರಣ ವಾಪಸ್ ಪಡೆಯುವಂತೆ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಸಹಕಾರ ಸಿಕ್ಕಿದೆ:‘ಉದ್ದೇಶಿತ ಗುಡಿ ನಿರ್ಮಾಣದ ಜಾಗದಲ್ಲಿ ಹುಡೆ ದೇವರ ಸಣ್ಣ ಮೂರ್ತಿಗಳಿದ್ದವು. ರಸ್ತೆ ಎತ್ತರವಾಗಿದ್ದರಿಂದ ದೇವರ ಮೂರ್ತಿಗಳು ಕೆಳಗಿದ್ದವು. ಹೀಗಾಗಿ ಬುಧವಾರ ಬೆಳಿಗ್ಗೆ ಚಿಕ್ಕದಾಗಿ ಗುಡಿ ನಿರ್ಮಾಣಕ್ಕೆ ಸ್ಥಳೀಯರು ಮುಂದಾಗಿದ್ದರು. ಆದರೆ, ಕೆಲವರು ಬಂದು ಮಂದಿರಕ್ಕೆ ಹಾನಿ ಮಾಡಿದ್ದಾರೆ. ಈಗ ಮರು ನಿರ್ಮಾಣ ನಡೆದಿದೆ. ಜಿಲ್ಲಾಡಳಿತದಿಂದ ಉತ್ತಮ ಸಹಕಾರ ಸಿಕ್ಕಿದೆ’ ಎಂದು ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಧನಂಜಯ ಜಾಧವ ಹೇಳಿದರು.

‘ನಮ್ಮ ಗ್ರಾಮದಲ್ಲಿ ಹಿಂದೂ–ಮುಸ್ಲಿಮರು ಹಿಂದಿನಿಂದಲೂ ಸೌಹಾರ್ದದಿಂದ ಇದ್ದೇವೆ. ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಆದರೆ, ಹೊರಗಿನಿಂದ ಬಂದವರು ಗಲಾಟೆ ನಡೆಸಿದ್ದಾರೆ’ ಎಂದು ಗ್ರಾಮದ ಹಿಂದೂ ಹಾಗೂ ಮುಸ್ಲಿಂ ಮುಖಂಡರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT