ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ಸವಾಲುಗಳನ್ನು ಎದುರಿಸಲು ಸಜ್ಜಾಗಿ: ಏರ್‌ ಮಾರ್ಷಲ್‌ ರಾಧಾಕೃಷ್ಣನ್‌

Published 2 ಡಿಸೆಂಬರ್ 2023, 11:15 IST
Last Updated 2 ಡಿಸೆಂಬರ್ 2023, 11:15 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಸಾಂಬ್ರಾದ ಏರ್‌ಮೆನ್‌ ತರಬೇತಿ ಶಾಲೆ(ಎಟಿಎಸ್‌)ಯಲ್ಲಿ ಪುರುಷ ಅಗ್ನಿವೀರವಾಯುಗಳ ಎರಡನೇ ತಂಡದ ಮತ್ತು ಮಹಿಳಾ ಅಗ್ನಿವೀರವಾಯುಗಳ ಮೊದಲ ತಂಡದ ನಿರ್ಗಮನ ಪಥಸಂಚಲನ ಶನಿವಾರ ನಡೆಯಿತು.

ಇಲ್ಲಿ 22 ವಾರ ತರಬೇತಿ ಪಡೆದ 2,127 ಪುರುಷರು, 153 ಮಹಿಳೆಯರು ಸೇರಿದಂತೆ 2,280 ಅಗ್ನಿವೀರವಾಯುಗಳು ಆಕರ್ಷಕ ಪಥಸಂಚಲನ ನಡೆಸಿದರು.

ಈ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದ ಏರ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್‌ ಏರ್‌ ಮಾರ್ಷಲ್‌ ರಾಧಾಕೃಷ್ಣನ್‌ ರಾಧಿಶ್‌, ‘ಪ್ರಸ್ತುತ ಜಾಗತಿಕ ರಕ್ಷಣಾ ವ್ಯವಸ್ಥೆಗೆ ಸವಾಲು ಹೆಚ್ಚುತ್ತಿವೆ. ಇವುಗಳನ್ನು ಸಮರ್ಥವಾಗಿ ಎದುರಿಸಲು ಇಲ್ಲಿ ಪಡೆದ ತರಬೇತಿ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕರೆ ನೀಡಿದರು.

‘ಪ್ರಸ್ತುತ ಕಾಲಘಟ್ಟಕ್ಕೆ ಅನುಗುಣವಾಗಿ ಜ್ಞಾನ, ವೃತ್ತಿಕೌಶಲ ಅಭಿವೃದ್ಧಿಪಡಿಸಿಕೊಳ್ಳಬೇಕು. ನಾವೂ ಬದಲಾವಣೆಗೆ ಕಾರಣವಾಗಬೇಕು’ ಎಂದ ಅವರು, ಜಗತ್ತಿನ ನಾಲ್ಕನೇ ದೊಡ್ಡ ವಾಯುಪಡೆಯಾದ ಭಾರತೀಯ ವಾಯುಪಡೆಗೆ ತಮ್ಮ ಮಕ್ಕಳನ್ನು ಸೇರಿಸಲು ಮುಕ್ತ ಮನಸ್ಸಿನಿಂದ ಸಹಕರಿಸಿದ ಪಾಲಕರನ್ನು ಪ್ರಶಂಸಿಸಿದರು.

‘ಅಗ್ನಿಪಥ ಯೋಜನೆಯಡಿ ನಮ್ಮಲ್ಲಿ ಬೇಸಿಕ್‌ ತರಬೇತಿ ಕೊಡಲಾಗುತ್ತಿದೆ. ಬೌದ್ಧಿಕ ಮತ್ತು ನೈತಿಕ ಮೌಲ್ಯಗಳನ್ನು ಶಿಬಿರಾರ್ಥಿಗಳಿಗೆ ಕಲಿಸಲಾಗುತ್ತಿದೆ. ಇಲ್ಲಿಂದ ವಿವಿಧ ಟ್ರೇಡ್‌ಗಳಿಗೆ ಅನುಸಾರವಾಗಿ ಮತ್ತೊಂದು ಹಂತದ ತರಬೇತಿಯನ್ನು ಅಗ್ನಿವೀರವಾಯುಗಳು ಪಡೆದು, ದೇಶಸೇವೆಗೆ ಅಣಿಯಾಗಲಿದ್ದಾರೆ’ ಎಂದು ಹೇಳಿದರು.

‘ಏಕರೂಪದ ತರಬೇತಿ ಕೊಡುತ್ತಿದ್ದೇವೆ’

‘ನಮ್ಮಲ್ಲಿ ಪುರುಷ ಮತ್ತು ಮಹಿಳಾ ಅಗ್ನಿವೀರವಾಯುಗಳಿಗೆ ನೀಡುತ್ತಿರುವ ತರಬೇತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲರಿಗೂ ಏಕರೂಪದ ತರಬೇತಿ ಕೊಡುತ್ತಿದ್ದೇವೆ’ ಎಂದು ಏರ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್‌ ಏರ್‌ ಮಾರ್ಷಲ್‌ ರಾಧಾಕೃಷ್ಣನ್‌ ರಾಧಿಶ್‌ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುರುಷರಷ್ಟೇ ಶಕ್ತಿ, ಸಾಮರ್ಥ್ಯ ಮಹಿಳೆಯರಲ್ಲೂ ಇದೆ. ಯಾವುದೇ ಕಠಿಣ ಪರಿಸ್ಥಿತಿ ಎದುರಿಸಲು ಮಹಿಳೆಯರು ಸಬಲರಾಗಿದ್ದಾರೆ. ಈ ತರಬೇತಿಯಲ್ಲಿ ಇದನ್ನು ಸಾಬೀತುಪಡಿಸಿದ್ದಾರೆ’ ಎಂದರು.

‘ಅಗ್ನಿಪಥ ಯೋಜನೆ ಹೊಸದು. ಆದರೆ, ತರಬೇತಿ ವಿಧಾನ ಹಳೆಯದಾಗಿದೆ. ತರಬೇತಿ ಅವಧಿಯನ್ನೂ ಇಳಿಸಲಾಗಿದೆ. ಹಿಂದಿನ ತರಬೇತುದಾರರೇ ಅಗ್ನಿಪಥ ಯೋಜನೆಯಡಿ ತರಬೇತಿ ಕೊಡುತ್ತಿದ್ದಾರೆ. ಭಾರತವು ಆಂತರಿಕ ಮತ್ತು ಬಹಿರಂಗವಾಗಿ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅವುಗಳನ್ನು ಎದುರಿಸಲು ಶಿಬಿರಾರ್ಥಿಗಳನ್ನು ಮಾನಸಿಕವಾಗಿ ಸಿದ್ಧಗೊಳಿಸಲಾಗುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಇಲ್ಲಿ ತರಬೇತಿ ಪಡೆದವರು 4 ವರ್ಷ ವಿವಿಧ ಘಟಕಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ. ಆ ಪೈಕಿ ಉತ್ತಮ ಪ್ರದರ್ಶನ ತೋರಿದ ಶೇ 25 ಮಂದಿ ವಾಯುಪಡೆಯಲ್ಲೇ ಸೇವೆ ಮುಂದುವರಿಸಲಿದ್ದಾರೆ. ಈ ಸೇವೆಯನ್ನೇ ಬುನಾದಿಯಾಗಿಟ್ಟುಕೊಂಡು ಉಳಿದವರು ಬೇರೆ ರಂಗಗಳಲ್ಲಿ ಬದುಕು ಕಟ್ಟಿಕೊಳ್ಳಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT