ಮಂಗಳವಾರ, ಜನವರಿ 26, 2021
28 °C
ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

ವಿಶ್ವ ಗುರು: ಸಂತರ ಮಾರ್ಗದರ್ಶನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಬ್ರಿಟಿಷರು ಸೇರಿದಂತೆ ಅನೇಕ ಪರಕೀಯರ ದಾಳಿಯಿಂದ ಆಘಾತಕ್ಕೊಳಗಾದ ಭಾರತವನ್ನು ಮತ್ತೊಮ್ಮೆ ಜಗತ್ತಿನ ಸರ್ವಶಕ್ತ ದೇಶವಾಗಿ ಹೊರ ಹೊಮ್ಮುವಂತೆ ಮಾಡಲು ಮತ್ತು ವಿಶ್ವ ಗುರುವಾಗಿ ನೇತೃತ್ವ ವಹಿಸಲು ಸಂತರ ಮಾರ್ಗದರ್ಶನ ಅವಶ್ಯವಾಗಿದೆ’ ಎಂದು ಮಹಾರಾಷ್ಟ್ರದ ಕೊಲ್ಹಾಪುರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದ ಕೆಎಲ್‍ಇ ಜೀರತೆ ಸಭಾಂಗಣದಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಶನಿವಾರ ಶ್ರೀರಾಮ ಜನ್ಮಭೂಮಿ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ‘ಸಂತ ಸಮಾವೇಶ’ದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸ್ವಾತಂತ್ರ್ಯಾ ನಂತರ ಆಡಳಿತಕ್ಕೆ ಬಂದ ಸರ್ಕಾರಗಳು ದೇಶದ ಭವ್ಯತೆಯನ್ನು ಸಾರುವ ಸಂಗತಿಗಳನ್ನು ಮತ್ತೆ ಬಿತ್ತಿ ಭಾರತವನ್ನು ಉನ್ನತಿ ಸ್ಥಿತಿಗೆ ಒಯ್ಯುವ ಬದಲು, ಜಾತ್ಯತೀತ ಎಂಬ ಹುಸಿ ಸಿದ್ಧಾಂತಕ್ಕೆ ಜೋತು ಬಿದ್ದವು. ದೇಶವನ್ನು ಲೂಟಿ ಹೊಡೆದ ಖಿಲ್ಜಿ, ಮೊಘಲರ ಸಾಕಷ್ಟು ಮಾಹಿತಿಗಳನ್ನು ಪಠ್ಯದ ಮೂಲಕ ನೀಡಿರುವುದು ಭಾರತೀಯರಲ್ಲಿ ಗುಲಾಮ ಮನಸ್ಥಿತಿ ಬೇರೂರುವಂತೆ ಮಾಡಿದೆ’ ಎಂದರು.

‘300 ವರ್ಷ ಆಳಿದ ವಿಜಯನಗರ ಸಾಮ್ರಾಜ್ಯದ ಬಗ್ಗೆ ಪಠ್ಯದಲ್ಲಿ ನಮಗೆ ಕೇವಲ ಬೆರಳೆಣಿಕೆಯ ಸಾಲುಗಳಲ್ಲಿ ಮಾತ್ರ ಮಾಹಿತಿ ದೊರೆಯುತ್ತದೆ. ಮೌರ್ಯರು, ಚಾಲುಕ್ಯರು ಭಾರತವನ್ನು ಆರ್ಥಿಕ, ಶೈಕ್ಷಣಿಕ, ಕಲೆ ಸೇರಿದಂತೆ ಎಲ್ಲ ಕ್ಷೇತ್ರಗಳಿಂದಲೂ ಶ್ರೀಮಂತ ರಾಷ್ಟ್ರ ಎಂದು ಜಗತ್ತಿಗೆ ಸಾರಿದರು. ಆದರೂ ಅದರ ಬಗ್ಗೆ ನಮ್ಮ ಶಿಕ್ಷಣ ವ್ಯವಸ್ಥೆಯ ಮೂಲಕ ಮಕ್ಕಳು ಕಲಿಯಲು ಅವಕಾಶ ನೀಡದಂತೆ ಎಡಪಂಥೀಯರು ತಂತ್ರ ರೂಪಿಸಿ ಭಾರತೀಯರಲ್ಲಿ ಭಾರತದ ಬಗ್ಗೆಯೇ ಅಸಹ್ಯ ಹುಟ್ಟುವಂತೆ ತಂತ್ರ ರೂಪಿಸಿದ್ದಾರೆ’ ಎಂದು ವಿಷಾದಿಸಿದರು.

‘ಶ್ರೀರಾಮ ಮಂದಿರ ನಿರ್ಮಾಣ ಕೇವಲ ರಾಮನ ಆರಾಧನೆಗೆ ಮೀಸಲಾಗಿಲ್ಲ. ಅದು ಮತಾಂತರ, ಅಸ್ಪೃಶ್ಯತೆ, ಜಾತೀಯತೆ ಸೇರಿದಂತೆ ಸಮಾಜಕ್ಕೆ ಅಂಟಿದ ಅನೇಕ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕುವ ರಾಷ್ಟ್ರ ಮಂದಿರವಾಗಲಿದೆ. ಹೀಗಾಗಿ, ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನಕ್ಕೆ ಎಲ್ಲ ಸಾಧು–ಸಂತರು ಮತ್ತು ಸ್ವಾಮೀಜಿಗಳು ಜೊತೆಗೂಡಬೇಕು’ ಎಂದು ತಿಳಿಸಿದರು.

ಹುಕ್ಕೇರಿ ತಾಲ್ಲೂಕು ನಿಡಸೋಸಿಯ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿ  ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಗದಗಿನ ಸದಾಶಿವಾನಂದ ಸ್ವಾಮೀಜಿ. ರಾಯಬಾಗದ ಅಮರೇಶ್ವರ ಮಹಾರಾಜರು, ನಿಲಜಿಯ  ಅಲೌಕಿಕ ಜ್ಞಾನ ಮಂದಿರ ಶಿವಾನಂದ ಗುರೂಜಿ, ವಿಎಚ್‍ಪಿಯ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ, ಆರ್‌ಎಸ್‍ಎಸ್ ಕರ್ನಾಟಕ  ಉತ್ತರ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ, ಶ್ರೀರಾಮ ಜನ್ಮಭೂಮಿ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕರ್ನಾಟಕ ಉತ್ತರ ಪ್ರಾಂತ ಸಹ ಪ್ರಮುಖ ಮನೋಹರ ಮಠದ, ಕೃಷ್ಣ ಭಟ್ ಪಾಲ್ಗೊಂಡಿದ್ದರು.

ಅಚ್ಯುತ್ ಕುಲಕರ್ಣಿ ಮತ್ತು ರೋಹಿಣಿ ದೇಶಪಾಂಡೆ ಪ್ರಾರ್ಥಿಸಿದರು. ವಿಎಚ್‌ಪಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಬಾಗಿ ಸ್ವಾಗತಿಸಿದರು. ಧರ್ಮ ಜಾಗರಣಾ ಉತ್ತರ ಪ್ರಾಂತ ಸಂಯೋಜಕ ದಿಲೀಪ್ ವೇರ್ಣೇಕರ ಪ್ರಾಸ್ತಾವಿಕ ಮಾತನಾಡಿದರು. ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ ಕದಂ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.