ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಯಲ್ಲಮ್ಮ ದೇವಸ್ಥಾನ ಬಂದ್; ಹಲವು ದಾಖಲೆ!

ಕೊರೊನಾ ಸೃಷ್ಟಿಸಿದ ತಲ್ಲಣ, ವಿಶೇಷಗಳ ಚಿತ್ರಣ
Last Updated 8 ಅಕ್ಟೋಬರ್ 2020, 8:12 IST
ಅಕ್ಷರ ಗಾತ್ರ
ADVERTISEMENT
""
""

ಬೆಳಗಾವಿ: ಶಕ್ತಿ ಪೀಠವಾದ ತಾಲ್ಲೂಕಿನ ಸವದತ್ತಿ ಯಲ್ಲಮ್ಮ ರೇಣುಕಾ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ದರ್ಶನ ಅವಕಾಶವನ್ನು ದೀರ್ಘ ಅವಧಿಗೆ ನಿರ್ಬಂಧಿಸಿರುವುದು ಇತಿಹಾಸದಲ್ಲಿಯೇ ಇದೇ ಮೊದಲು.

ಕೊರೊನಾವೈರಸ್‌ ಕಾರಣದಿಂದಾಗಿ ಭಕ್ತರಿಗೆ ಪ್ರವೇಶ ನೀಡಲಾಗುತ್ತಿಲ್ಲ. ಈ ಪರಿಸ್ಥಿತಿಯು ಹಲವು ದಾಖಲೆಗಳ ನಿರ್ಮಾಣಕ್ಕೆ ಕಾರಣವಾಗಿದೆ.

ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನವನ್ನು ಮಾರ್ಚ್‌ 18ರಿಂದ ನಿಷೇಧಿಸಲಾಗಿದೆ. ಈ ತಿಂಗಳ 31ರವರೆಗೂ ನಿರ್ಬಂಧವನ್ನು ಮುಂದುವರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕೊರೊನಾವೈರಾಣು ಕಾಣಿಸಿಕೊಂಡ ಆರಂಭದಲ್ಲಿ ಲಾಕ್‌ಡೌನ್‌ ಕಾರಣದಿಂದ ದೇವಸ್ಥಾನ ಬಂದ್ ಆಗಿತ್ತು. ಈಗ, ಸೋಂಕಿನ ಹರಡುವಿಕೆ ನಿಯಂತ್ರಿಸುವುದಕ್ಕಾಗಿ ಜನರಿಗೆ ಅವಕಾಶ ಕೊಡಲಾಗುತ್ತಿಲ್ಲ. ದೇಗುಲದಲ್ಲಿ ನಿತ್ಯ ಧಾರ್ಮಿಕ ವಿಧಿವಿಧಾನಗಳಷ್ಟೇ ನಡೆಯುತ್ತಿದೆ.

ಆ ಭಾಗದಲ್ಲಿ ಬಹಳ ಮಳೆಯಾದಾಗಲೂ ದೇವಸ್ಥಾನ ಬಂದ್‌ ಮಾಡಿರಲಿಲ್ಲ. ಗ್ರಹಣದ ಸಂದರ್ಭದಲ್ಲಷ್ಟೇ ದರ್ಶನ ಇರುತ್ತಿರಲಿಲ್ಲ. ಉಳಿದಂತೆ ಎಲ್ಲ ದಿನಗಳಲ್ಲೂ ದೇವಸ್ಥಾನದ ಆವರಣ ಭಕ್ತ ಗಣದಿಂದ ತುಂಬಿ ಹೋಗುತ್ತಿತ್ತು. ಆವರಣವೆಲ್ಲವೂ ಭಂಡಾರದಿಂದ ಹೊನ್ನಿನ ಬಣ್ಣದಿಂದ ಕಂಗೊಳಿಸುತ್ತಿತ್ತು. ಆರೂವರೆ ತಿಂಗಳಿಂದ ದೇವಸ್ಥಾನದಲ್ಲಿ ಭಕ್ತರ ಕಲರವದ ಚಟುವಟಿಕೆಗಳು ಕಂಡುಬರುತ್ತಿಲ್ಲ. ಕೊರೊನಾ ಸೃಷ್ಟಿಸಿದ ಬಿಕ್ಕಟ್ಟು ಶಕ್ತಿದೇವತೆಯ ಸುಕ್ಷೇತ್ರದ ಮೇಲೂ ತಟ್ಟಿದೆ! ಭಕ್ತರು ದೇವಿಯ ‘ದರ್ಶನ’ ಭಾಗ್ಯಕ್ಕಾಗಿ ಕಾಯುತ್ತಿದ್ದಾರೆ.

ಪೂಜೆ–ಪುನಸ್ಕಾರ:

‘ಇಷ್ಟು ತಿಂಗಳುಗಳ ಕಾಲ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿರುವುದು ದಾಖಲೆಯೇ ಸರಿ. ಹಿಂದೆ ಯಾವುದೇ ಸಂದರ್ಭದಲ್ಲೂ ಈ ರೀತಿ ಆಗಿರಲಿಲ್ಲ. ಕೊರೊನಾ ಹಾವಳಿಯಿಂದಾಗಿ ಈ ಪರಿಸ್ಥಿತಿ ಎದುರಾಗಿದೆ. ಜೋರು ಮಳೆಯಾದ ಸಂದರ್ಭದಲ್ಲೂ ದೇಗುಲದಲ್ಲಿ ಪ್ರವೇಶಕ್ಕೆ ಅವಕಾಶ ಇರುತ್ತಿತ್ತು. ಅಧಿಕೃತ ದಾಖಲೆಗಳ ಪ್ರಕಾರ 9ನೇ ಶತಮಾನದಿಂದಲೂ ದೇಗುಲವಿದೆ. ಅಂದಿನಿಂದಲೂ ಈಗಿನ ರೀತಿಯ ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ ಎನ್ನುವುದು ಇತಿಹಾಸದಿಂದ ತಿಳಿದುಬರುತ್ತದೆ’ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಿತ್ಯದ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಷರತ್ತಿಗೆ ಒಳಪಟ್ಟು ಜಿಲ್ಲಾಡಳಿತ ವಿನಾಯಿತಿ ನೀಡಿದೆ. ಅದರಂತೆ, ಪೂಜೆ, ಪಲ್ಲಕ್ಕಿ ಉತ್ಸವ ನೆರವೇರಿಸುತ್ತಿದ್ದೇವೆ. ಇದರಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ’ ಎನ್ನುತ್ತಾರೆ ಅವರು.

ರವಿ ಕೋಟಾರಗಸ್ತಿ

ಸದುಪಯೋಗವೂ ಆಗಿದೆ:

‘ಕೊರೊನಾ ಸೃಷ್ಟಿಸಿದ ಈ ಪರಿಸ್ಥಿತಿಯನ್ನು ಸದ್ಬಳಕೆಯನ್ನೂ ಮಾಡಿಕೊಂಡಿದ್ದೇವೆ. ಹಲವು ವರ್ಷಗಳಿಂದ ಸಾಧ್ಯವಾಗದಿರುವ ಕೆಲವು ಕೆಲಸಗಳನ್ನು ಮಾಡಿದ್ದೇವೆ. ಎಣ್ಣೆ ಹೊಂಡ ಹಾಗೂ ಪರಶುರಾಮನ ಗುಡಿ ಎದುರು ಅಡೆತಡೆಯಾಗಿದ್ದ ಅಂಗಡಿಗಳನ್ನು ತೆರವುಗೊಳಿಸಿದ್ದೇವೆ. ಶಾಸಕರು, ಸ್ಥಳೀಯ ಸಂಸ್ಥೆಯವರ ಸಹಕಾರದಿಂದ ಈ ಕೆಲಸ ನಡೆದಿದೆ. ದೇಣಿಗೆಯಾಗಿ ಬಂದ ₹ 2 ಕೋಟಿಯಲ್ಲಿ ಉತ್ತರ ಭಾಗದಲ್ಲಿ ಭಕ್ತರಿಗೆ ನೆರಳು, ಫ್ಲೋರಿಂಗ್ ವ್ಯವಸ್ಥೆ ಮೊದಲಾದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇವೆ. ಇನ್ನೂ ಕೆಲವು ಪ್ರಗತಿಯಲ್ಲಿವೆ’ ಎಂದು ತಿಳಿಸಿದರು.

‘ದೇಗುಲದಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಿ ಪೂಜೆ ಸಲ್ಲಿಸುತ್ತಿದ್ದೇವೆ. ಕೊರೊನಾ ತೊಲಗಲಿ; ಎಲ್ಲರಿಗೂ ಒಳಿತಾಗಲಿ ಎಂದು ನಿತ್ಯವೂ ಪ್ರಾರ್ಥಿಸುತ್ತಿದ್ದೇವೆ’ ಎಂದು ಅರ್ಚಕ ಪಂಡಿತ್ ಯಡಿಯೂರಯ್ಯ ಹೇಳುತ್ತಾರೆ.

ಹಲವು ವರ್ಗದವರಿಗೆ ತೊಂದರೆ:

‘ಶಕ್ತಿಪೀಠ ಯಲ್ಲಮ್ಮನ ದೇವಸ್ಥಾನಕ್ಕೆ ಸರ್ವಧರ್ಮೀಯರೂ ನಡೆದುಕೊಳ್ಳುತ್ತಾರೆ. ಎಲ್ಲ ಜಾತಿಯವರ ಮನೆದೇವರೂ ಆಗಿದ್ದಾಳೆ ಈ ದೇವಿ. ‘ಎಲ್ಲರ ಅಮ್ಮ– ಯಲ್ಲಮ್ಮ’ನಾಗಿದ್ದಾಳೆ. ಈ ದೇಗುಲದಲ್ಲಿ ಜನರಿಗೆ ದರ್ಶನಕ್ಕೆ ಅನುವಾಗದೆ ಇರುವುದನ್ನು ನನ್ನ ಜೀವನದಲ್ಲೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಕೊರೊನಾ ವೈರಾಣು ಇಂಥದೊಂದು ಪರಿಸ್ಥಿತಿ ಸೃಷ್ಟಿಸಿದೆ. ಇದರಿಂದ ಅರ್ಚಕರಾದ ನಾವು ಸೇರಿದಂತೆ ದೇವಸ್ಥಾನವನ್ನೇ ನಂಬಿದ್ದ ಹಲವು ವರ್ಗದ ಸಾವಿರಾರು ಮಂದಿಗೆ ತೊಂದರೆ ಹಾಗೂ ನಷ್ಟ ಉಂಟು ಮಾಡಿದೆ’ ಎನ್ನುತ್ತಾರೆ ಅರ್ಚಕ ರಾಜನಗೌಡ ಪಾಟೀಲ.

‘ಕೊರೊನಾ ಒಂದರ್ಥದಲ್ಲಿ ಇತಿಹಾಸವನ್ನೇ ಸೃಷ್ಟಿಸಿದೆ. ದೇವಸ್ಥಾನವನ್ನೇ ನಂಬಿದ್ದ ವ್ಯಾಪಾರಿಗಳಿಗೆ ಬಹಳ ತೊಂದರೆಯಾಗಿದೆ. ಅವರಲ್ಲಿ ಹಲವರು ಕೂಲಿಗೆ ಹೋಗುತ್ತಿದ್ದಾರೆ. ಬೀದಿ ಪಾಲಾಗಿದ್ದಾರೆ ಎಂದೇ ಹೇಳಬಹುದು. ಜೊತೆಗೆ, ಇತ್ತೀಚೆಗೆ ಸುರಿದ ಮಳೆಯೂ ಅವರಿಗೆ ಗಾಯದ ಮೇಲೆ ಬರೆ ಎಳೆದಿದೆ. ಈ ಕೊರೊನಾ ಬೇಗ ನಿವಾರಣೆಯಾಗಲಿ. ಮುಂದೆ ಎಲ್ಲರನ್ನೂ ನೀನೇ ಕಾಪಾಡು ತಾಯಿ ಎಂದು ನಿತ್ಯವೂ ಪೂಜಿಸಿ ಪ್ರಾರ್ಥಿಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ನೂರಾರು ಭಕ್ತರಿಂದ ತುಂಬಿರುತ್ತಿದ್ದ ಸವದತ್ತಿ ರೇಣುಕಾಯಲ್ಲಮ್ಮದೇವಸ್ಥಾನದ ಆವರಣ ಈಗ ಬಿಕೋ ಎನ್ನುತ್ತಿದೆ

ಪರಿಹಾರ ಏಕಿಲ್ಲ?:

‘ಲಾಕ್‌ಡೌನ್‌ ಹಾಗೂ ಕೋವಿಡ್–19ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸರ್ಕಾರ ಆರ್ಥಿಕ ನೆರವು ನೀಡಿದೆ. ಆದರೆ, ಹಲವು ತಿಂಗಳುಗಳಿಂದಲೂ ವ್ಯಾಪಾರಕ್ಕೆ ಅವಕಾಶವಿಲ್ಲದೆ ತೊಂದರೆ ಅನುಭವಿಸಿರುವ ನಮಗೂ ಪರಿಹಾರ ಕಲ್ಪಿಸಬೇಕು’ ಎನ್ನುವುದು ಗುಡ್ಡದಲ್ಲಿನ ಅಂಗಡಿಕಾರರ ಆಗ್ರಹವಾಗಿದೆ.

ಅಲ್ಲಿ ತೆಂಗಿನಕಾಯಿ, ಸೀರೆ, ಕುಂಕುಮ, ಭಂಡಾರ, ಪೂಜಾ ಸಾಮಗ್ರಿಗಳು, ಹಸಿರು ಬಳೆಗಳನ್ನು ಮಾರಿಕೊಂಡು ಹಲವರು ಬದುಕು ಕಟ್ಟಿಕೊಂಡಿದ್ದರು.

‘ಗುಡ್ಡದಲ್ಲಿ ಭಕ್ತರಿಗೆ ತೆಂಗಿನ ಕಾಯಿ ವ್ಯಾಪಾರ ಮಾಡಿಕೊಂಡು ನಾನು ಬದುಕು ಕಟ್ಟಿಕೊಂಡಿದ್ದೆ. ಕೊರೊನಾದಿಂದಾಗಿ ದೇವಸ್ಥಾನ ಬಂದ್ ಮಾಡಿದ್ದರಿಂದ ದಿಕ್ಕೇ ತೋಚದಂತಾಯಿತು. ಅನಿವಾರ್ಯವಾಗಿ ಇತ್ತೀಚೆಗೆ ದ್ವಿಚಕ್ರವಾಹನದಲ್ಲಿ ಊರೂರಿಗೆ ಹೋಗಿ ಬಾಳೆಹಣ್ಣು ಮಾರಾಟ ಮಾಡುತ್ತಿದ್ದೇನೆ. ಇದರಿಂದ ಜೀವನ ನಡೆಸುವುದು ಕಷ್ಟವಾಗಿದೆ’ ಎಂದು ಅಳಲು ತೋಡಿಕೊಂಡ ಮಂಜುನಾಥ ಸುಂಕದ, ‘ಸರ್ಕಾರ ನಮಗೂ ಲಾಕ್‌ಡೌನ್‌ ಪರಿಹಾರ ಕೊಡಬೇಕು’ ಎಂದು ಕೋರಿದರು.

ಈ ಬಗ್ಗೆ ವ್ಯಾಪಾರಿಗಳು ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ವಿಶೇಷಗಳು

* ಏಪ್ರಿಲ್‌ನಲ್ಲಿ ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ದೇವಿಗೆ ಮಂಗಳಸೂತ್ರ ಧಾರಣೆ ಕಾರ್ಯಕ್ರಮ ಸರಳವಾಗಿ ನಡೆದಿದೆ. ಹಿಂದಿನ ವರ್ಷಗಳಲ್ಲಿ ಲಕ್ಷಾಂತರ ಭಕ್ತರು ಸೇರುತ್ತಿದ್ದ ಸಂಭ್ರಮದ ಧಾರ್ಮಿಕ ಕಾರ್ಯಕ್ರಮವಿದು.

* ನವರಾತ್ರಿ ಉತ್ಸವದ ಅಂಗವಾಗಿ ಅ.17ರಿಂದ ‘ಘಟ್ಟ’ ಕಾರ್ಯಕ್ರಮ ನಡೆಯುತ್ತಿತ್ತು. ಹಣತೆಗಳನ್ನು ಬೆಳೆಗಿಸಲು ಹಾಗೂ ಅವುಗಳಿಗೆ ‘ಎಣ್ಣೆ’ ಹಾಕಲು ಲಕ್ಷಾಂತರ ಮಂದಿ ಬರುತ್ತಿದ್ದರು. ಈ ಬಾರಿ ಇದಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಸಂದರ್ಭದಲ್ಲಿ ಭಕ್ತರು ಹಾಕುವುದರಿಂದ, ಬರೋಬ್ಬರಿ ಸರಾಸರಿ 60ರಿಂದ 70 ಬ್ಯಾರಲ್‌ಗಳಷ್ಟು ಎಣ್ಣೆ ಸಂಗ್ರವಾಗುತ್ತಿತ್ತು!

* ಇಲ್ಲಿ ಜೋಳದ ರೊಟ್ಟಿ, ಮೊಸರು, ಪಲ್ಯ ಮಾರಿ ಬದುಕು ನಡೆಸುತ್ತಿದ್ದ ಹಾಗೂ ‘ಗುಡ್ಡದ ಅನ್ನಪೂರ್ಣೆಯರು’ ಎನಿಸಿಕೊಂಡಿದ್ದ 50ಕ್ಕೂ ಹೆಚ್ಚಿನ ಮಹಿಳೆಯರು, ಕೂಲಿ ಮಾಡಲು ಹೋಗುತ್ತಿದ್ದಾರೆ.

* ಗುಡ್ಡದ ವಾತಾವರಣದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸ್ವಚ್ಛತೆ ಕಂಡುಬರುತ್ತಿದೆ.

* ದೇಣಿಗೆ, ಹುಂಡಿ ಹಾಗೂ ವಿಶೇಷ ದರ್ಶನದ ಶುಲ್ಕ ದೇಗುಲದ ಆದಾಯದ ಮೂಲಗಳು. ಹೋದ ವರ್ಷ ದೇಗುಲಕ್ಕೆ ₹18 ಕೋಟಿ ಆದಾಯ ಬಂದಿತ್ತು. ಈ ಬಾರಿ ಇದರಲ್ಲಿ ಶೇ 50ರಷ್ಟು ಆಗುವುದು ಕೂಡ ಅನುಮಾನ. ಏಕೆಂದರೆ, ಈಗಾಗಲೇ ₹ 7 ಕೋಟಿ ನಷ್ಟವಾಗಿದೆ. ನವರಾತ್ರಿ ಉತ್ಸವದ ಸಂದರ್ಭದಲ್ಲಿ ಹೆಚ್ಚಿನ ಆದಾಯ ಬರುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT