ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಚಿನ್ನಾಭರಣ ದರೋಡೆ- 10 ಮಂದಿ ಬಂಧನ

Last Updated 27 ಸೆಪ್ಟೆಂಬರ್ 2022, 15:46 IST
ಅಕ್ಷರ ಗಾತ್ರ

ಬೆಳಗಾವಿ: ಗೋಕಾಕ ತಾಲ್ಲೂಕಿನ ಶಿಂಧಿಕುರಬೇಟ ಗ್ರಾಮದ ಬಳಿ, ಚಿನ್ನಾಭರಣ ವ್ಯಾಪಾರಿಗಳನ್ನು ಅಡ್ಡಗಟ್ಟಿ ದರೋಡೆ ಮಾಡಿದ 10 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ತಾಲ್ಲೂಕಿನ ಕಣಬರಗಿಯ ಸಿದ್ಧಾರ್ಥ ಚಾಂಗದೇವ ಕಡೋಲ್ಕರ, ಪ್ರದೀಪ ಬಸವರಾಜ ಬೂಶಿ, ಮಾರುತಿ ರಾಜು ಸಾಳವಂಕೆ, ಸೌರಭ ಲಕ್ಷ್ಮಣ ಮಾಲಾಯಿ, ಸೋನೋಲಿ ಗ್ರಾಮದ ನಿವೃತ್ತಿ ಅಪ್ಪಾರಾವ್‌ ಮುತಗೇಕರ, ಮೆಳವಂಕಿ ಗ್ರಾಮದ ಅನಿಲ ರಾಮಚಂದ್ರ ಪತ್ತಾರ, ಶಿನ್ನೋಳಿ ಗ್ರಾಮದ ಪಂಕಜ ಖಾಂಡೇಕರ, ಕುದರೆಮನಿಯ ವಿಜಯ ನಾಗೋಬಾ ಕದಂ, ಕುದರೇಮನಿಯ ಸಾಗರ ಪಾಟೀಲ, ತುರ್ಕೇವಾಡಿಯ ಮನೋಹರ ಸೋನಾರ ಬಂಧಿತರು. ಇವರೆಲ್ಲರೂ 19ರಿಂದ 24 ವರ್ಷ ವಯಸ್ಸಿನೊಳಗೆ ಇದ್ದಾರೆ.

ಬಂಧಿತರಿಂದ 311 ಗ್ರಾಂ ಚಿನ್ನಾಭರಣಗಳು, ₹ 44 ಸಾವಿರ ನಗದು ಸೇರಿ ಒಟ್ಟು ₹ 35.5 ಲಕ್ಷ ಮೌಲ್ಯದ ವಸ್ತುಗಳನ್ನು ಹಾಗೂ ₹ 6ಲಕ್ಷ ಮೌಲ್ಯದ ನಾಲ್ಕು ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದರು.

ಘಟನೆ ವಿವರ: ಶಿಂಧಿಕುರಬೇಟ ಗ್ರಾಮದ ಸಂಜೀವ ಸದಾನಂದ ಪೋತದಾರ ಹಾಗೂ ಅವರ ಸಹೋದರ ರವೀಂದ್ರ ಚಿನ್ನಾಭರಣ ವ್ಯಾಪಾರ ಮಾಡುತ್ತಿದ್ದರು. ಗೋಕಾಕ ನಗರದಲ್ಲಿ ಅಂಗಡಿಗಳಿಗೆ ಚಿನ್ನಾಭರಣ ಮಾರಿದ ಮೇಲೆ ರಾತ್ರಿ ಶಿಂಧಿಕುರಬೇಟ ಗ್ರಾಮಕ್ಕೆ ಮರಳುತ್ತಿದ್ದರು. ಇದನ್ನು ಗಮನಿಸಿದ ದುಷ್ಕರ್ಮಿಗಳು ದರೋಡೆ ಮಾಡಲು ಹೊಂಚು ಹಾಕಿದ್ದರು.

ಸೆ. 16ರಂದು ರಾತ್ರಿ 8.30ರ ಸುಮಾರಿಗೆ ಲೋಳಸೂರ ಗ್ರಾಮದ ಕರೆಮ್ಮ ದೇವಸ್ಥಾನದ ಬಳಿ ವ್ಯಾಪಾರಿಗಳನ್ನು ಅಡ್ಡಗಟ್ಟಿದ ಆರೋಪಿಗಳು, ಕಬ್ಬಿಣದ ರಾಡ್‌ನಿಂದ ಹೊಡೆದು ಅವರ ಬಳಿ ಇದ್ದ ಬ್ಯಾಗ್‌ ಎತ್ತಿಕೊಂಡು ‍ಪರಾರಿಯಾಗಿದ್ದರು. ಈ ಬಗ್ಗೆ ವ್ಯಾಪಾರಿಗಳು ಘಟಪ್ರಭಾ ಠಾಣೆಗೆ ದೂರು ಸಲ್ಲಿಸಿದ್ದರು.

ಮಾಹಿತಿ ಆಧರಿಸಿ ಆರೋಪಿಗಳ ಸ್ಕೆಚ್‌ ಸಿದ್ಧಪಡಿಸಿದ ಪೊಲೀಸರು, ಸೆ. 24ರಂದು ಆರು ಮಂದಿಯನ್ನು ಬಂಧಿಸಿದರು. ಅವರಿಂದ ಮಾಹಿತಿ ಕೆದಕಿದಾಗ ಸೆ. 27ರಂದು ಮತ್ತೆ ನಾಲ್ವರು ಸಿಕ್ಕಿಬಿದ್ದರು.

ಎಲ್ಲಿಯೂ ಸಣ್ಣ ಕುರುಹು ಕೂಡ ಬಿಡದಂತೆ ಹೋಗಿದ್ದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ನೈಪುಣ್ಯತೆ ಮೆರೆದಿದ್ದಾರೆ. ಗೋಕಾಕ ಡಿಎಸ್ಪಿ ಮನೋಜಕುಮಾರ ನಾಯ್ಕ, ಘಟಪ್ರಭಾ ಇನ್‌ಸ್ಪೆಕ್ಟರ್‌ ಶ್ರೀಶೈಲ ಬ್ಯಾಕೂಡ ನೇತೃತ್ವದ ತನಿಖಾ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT