ಶುಕ್ರವಾರ, ಮೇ 20, 2022
25 °C
ರೈತರ ಸಂಚಾರಕ್ಕೆ, ಉತ್ಪನ್ನಗಳ ಸಾಗಾಟಕ್ಕೆ ತೊಂದರೆ ತಪ್ಪಿಲ್ಲ

ಬೆಳಗಾವಿ: ಸುಧಾರಿಸದ ಹೊಲ – ಗದ್ದೆಗಳ ರಸ್ತೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಹೊಲ–ಗದ್ದೆಗಳ ರಸ್ತೆಗಳನ್ನು ಸುಧಾರಿಸುವ ಕಾರ್ಯ ನಿರೀಕ್ಷಿತವಾಗಿ ನಡೆದಿಲ್ಲ.

ಹಲವು ತಾಲ್ಲೂಕುಗಳಲ್ಲಿ ಜನರು ತೋಟಪಟ್ಟಿ(ತೋಟದ ವಸತಿ)ಗಳಲ್ಲಿ ವಾಸಿಸುತ್ತಾರೆ. ಇಂತಹ ಹಲವು ಕಡೆಗಳಲ್ಲಿ ಸಮರ್ಪಕ ರಸ್ತೆಗಳಿಲ್ಲ. ಪರಿಣಾಮ, ಅವರು ಸಂಚರಿಸಲು ಮತ್ತು ಕೃಷಿ ಉತ್ಪನ್ನಗಳನ್ನು ಮುಖ್ಯ ರಸ್ತೆಗೆ ಸಾಗಿಸುವುದಕ್ಕೆ ತೀವ್ರ ತೊಂದರೆ ಅನುಭವಿಸಬೇಕಾದ ಸ್ಥಿತಿ ಇದೆ.

ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ನಮ್ಮ ಹೊಲ–ನಮ್ಮ ದಾರಿ’ ಎನ್ನುವ ಯೋಜನೆ ರೂಪಿಸಿತ್ತು. ಆದರೆ, ಅದು ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಕೆಲವೆಡೆ ಸೌಲಭ್ಯ ದೊರೆತಿದೆ. ಹಲವೆಡೆ ಕಾರ್ಯಗತವಾಗಿಲ್ಲ. ಅಕ್ಕ‍ಪಕ್ಕದ ಜಮೀನುಗಳ ಮಾಲೀಕರ ತಕರಾರು ತೆಗೆಯುವುದು ಕೂಡ ಯೋಜನೆ ನನೆಗುದಿಗೆ ಬೀಳಲು ಕಾರಣವಾಗಿದೆ. ಅಲ್ಲಲ್ಲಿ ನಡೆದಿರುವ ಕಳಪೆ ಕಾಮಗಾರಿಗಳಿಂದಾಗಿ ರಸ್ತೆಗಳು ಮತ್ತೆ ದುಃಸ್ಥಿತಿಗೆ ತಲುಪಿದ ಉದಾಹರಣೆಗಳಿವೆ.

‘ನಿಪ್ಪಾಣಿ, ಗೋಕಾಕ, ಖಾನಾಪುರ, ಅಥಣಿ, ಕಾಗವಾಡ, ಸವದತ್ತಿ, ರಾಮದುರ್ಗ, ರಾಯಬಾಗ, ಬೆಳಗಾವಿ, ಮೂಡಲಗಿ, ಮೊದಲಾದ ತಾಲ್ಲೂಕುಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿ ಅಥವಾ ಪ್ರವಾಹದಿಂದಲೂ ರಸ್ತೆಗಳು ಹಾಳಾಗುತ್ತಿವೆ. ಹೆಚ್ಚಿನ ಪರಿಣಾಮ ತೋಟಪಟ್ಟಿ ಅಥವಾ ಹೊಲಗಳಿಗೆ ಸಂಪರ್ಕಿಸುವ ರಸ್ತೆಗಳ ಮೇಲಾಗುತ್ತಿದೆ. ಹೀಗಾಗಿ, ಆಗಾಗ ರಸ್ತೆಗಳನ್ನು ಸುಧಾರಿಸಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ. ಆದರೆ, ಅನುದಾನದ ಕೊರತೆಯೂ ಕಾಡುತ್ತಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು.

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ 2021–22ನೇ ಸಾಲಿನಲ್ಲಿ ತೋಟಪಟ್ಟಿಗಳ ರಸ್ತೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಒಟ್ಟು 1,450 ಕಾಮಗಾರಿಗಳನ್ನು ಉದ್ದೇಶಿಸಲಾಗಿದೆ. ಅದರಲ್ಲಿ 170 ಪೂರ್ಣಗೊಂಡಿವೆ. ಉಳಿದವು ಪ್ರಗತಿಯಲ್ಲಿವೆ’ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ವಿ. ದರ್ಶನ್.

‘ರೈತರು ಜಮೀನುಗಳಿಗೆ ತೆರಳುವುದಕ್ಕಾಗಿ ಬಳಸುವ ವಾಡಿಕೆ ರಸ್ತೆಗಳನ್ನು ಅಭಿವೃದ್ಧಿಪಡಿಸಲು ತಂಟೆ–ತಕರಾರು ಎದುರಾಗುತ್ತವೆ. ಸರ್ಕಾರಿ ಜಾಗದಲ್ಲಿ ನಿರ್ಮಿಸುವ ರಸ್ತೆಗಳು ಗುಣಮಟ್ಟದಿಂದ ಕೂಡಿರುವುದಿಲ್ಲ. ನಮ್ಮ ಹೊಲ ನಮ್ಮ ದಾರಿ ಯೋಜನೆಯಲ್ಲಿ ಕೈಗೊಂಡ ಬಹುತೇಕ ಕಾಮಗಾರಿಗಳು ಅಪೂರ್ಣವಾಗಿವೆ. ತಾಲ್ಲೂಕಿನ ಶಿಂದೊಳ್ಳಿಯಿಂದ ಮಾಸ್ತಮರಡಿವರೆಗಿನ ರಸ್ತೆ ಈಗಲೂ ಪೂರ್ಣಗೊಂಡಿಲ್ಲ. ಇಂತಹ ಹಲವು ಉದಾಹರಣೆಗಳಿವೆ. ಆದರೆ, ನಿರ್ವಹಣೆಗೆ ಹಣ ವ್ಯಯಿಸುವುದು ನಿಂತಿಲ್ಲ’ ಎಂದು ದೂರುತ್ತಾರೆ ಭಾರತೀಯ ಕೃಷಿಕ ಸಮಾಜ(ಸಂಯುಕ್ತ)ದ ಅಧ್ಯಕ್ಷ ಸಿದಗೌಡ ಮೋದಗಿ.

ಮಹತ್ವ ಪಡೆದಿದೆ

ಸವದತ್ತಿ: ತಾಲ್ಲೂಕಿನ ಯಡ್ರಾಂವಿ, ಬೆಡಸೂರ, ಉಗರಗೋಳ, ಮುರಗೋಡ, ಯರಜರ್ವಿ, ಶಿರಸಂಗಿ, ತೆಗ್ಗೀಹಾಳ, ಹಿರೇಬೂದನೂರ, ಸತ್ತಿಗೇರಿ, ಇಂಚಲ ಮೊದಲಾ ಗ್ರಾಮಗಳಲ್ಲಿ ರೈತರ ಹೊಲಗಳಿಗೆ ಸಂಪರ್ಕ ವ್ಯವಸ್ಥೆ ಆಗಬೇಕಾಗಿದೆ. 2014-15ರಲ್ಲಿ 21 ಅಂಶಗಳ ಯೋಜನೆಯಲ್ಲಿ ಉದ್ಯೋಗ ಖಾತ್ರಿಯಲ್ಲಿ ಆರಂಭವಾದ ನಮ್ಮ ಹೊಲ ನಮ್ಮ ದಾರಿ ಯೋಜನೆಯು ನಿಧಾನಗತಿಯಲ್ಲಿ ಸಾಗಿತು. 2019-20ರಲ್ಲಿ ತೋಟಪಟ್ಟಿ ರಸ್ತೆ ಯೋಜನೆ ಎಂದು ಚಾಲ್ತಿಯಲ್ಲಿದೆ.

‘ತಾಲ್ಲೂಕಿನಲ್ಲಿ ವರ್ಷದ ಅವಧಿಯಲ್ಲಿ 90 ರಸ್ತೆಗಳನ್ನು ₹ 3 ಕೋಟಿ ಅನುದಾನದಲ್ಲಿ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಜಮೀನುಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ತೋಟಪಟ್ಟಿ ರಸ್ತೆ ಯೋಜನೆ ಮಹತ್ವ ಪಡೆದಿದೆ’ ಎಂದು ನರೇಗಾ ಸಹಾಯಕ ನಿರ್ದೇಶಕ ಸಂಗನಗೌಡ ಹಚಿದ್ರಾಳ ಹೇಳುತ್ತಾರೆ.

ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ

ಚಿಕ್ಕೋಡಿ: ತಾಲ್ಲೂಕಿನಲ್ಲಿ ‘ನಮ್ಮ ಹೊಲ-ನಮ್ಮ ದಾರಿ’ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ.

‘ಕೃಷಿ ಉತ್ಪನ್ನಗಳನ್ನು ಸಾಗಿಸಲು ಮತ್ತು ತೋಟಪಟ್ಟಿಗಳ ಜನರ ಸಂಚಾರಕ್ಕೆ ಅನುಕೂಲಕ್ಕಾಗಿ ಜಾರಿಗೊಳಿಸಿದ ಯೋಜನೆಯ ಆಶಯ ಸ್ವಾಗತಾರ್ಹವಾಗಿದೆ. ಆದರೆ, ಆರಂಭದಲ್ಲಿ ತೋರಿದ ಆಸಕ್ತಿಯನ್ನು ಇತ್ತೀಚಿನ ವರ್ಷಗಳಲ್ಲಿ ಜನಪ್ರತಿನಿಧಿಗಳು ತೋರುತ್ತಿಲ್ಲ’ ಎಂಬ ಅಸಮಾಧಾನ ರೈತರದು.

‘ಹಿಂದೆ ನಿರ್ಮಾಣಗೊಂಡಿರುವ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ. ಅವುಗಳನ್ನು ಪುನರ್ ನಿರ್ಮಿಸುವ ಅಗತ್ಯವಿದೆ’ ಎಂಬ ಒತ್ತಾಯ ಅವರದು.

‘ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯಲ್ಲಿ ಅನೇಕ ತೋಟಪಟ್ಟಿ ರಸ್ತೆಗಳು ಅಭಿವೃದ್ಧಿಗೊಂಡಿಲ್ಲ. ಇದರಿಂದಾಗಿ ಕೃಷಿ ಉತ್ಪನ್ನಗಳ ಸಾಗಣೆಗೆ, ವಾಹನಗಳು ಮತ್ತು ಜನ ಸಂಚಾರಕ್ಕೆ ಅನಾನುಕೂಲವಾಗಿದೆ. ಹಲವು ಕಡೆಗಳಲ್ಲಿ ರೈತರ ಮಧ್ಯೆ ಗಡಿ ವಿವಾದದಲ್ಲಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಆಗುತ್ತಿಲ್ಲ. ಇದರಿಂದಾಗಿ ತೊಂದರೆ ಆಗುತ್ತಿದೆ. ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಸಮಸ್ಯೆ ಬಗೆಹರಿಸಬೇಕು’ ಎಂದು ಒತ್ತಾಯಿಸುತ್ತಾರೆ ರೈತ ಮುಖಂಡ ಟಿ.ಎಸ್. ಮೋರೆ.

ಕೆಸರು ಗದ್ದೆ...

ರಾಮದುರ್ಗ ತಾಲ್ಲೂಕಿನ ಗ್ರಾಮ ತೋರಣಗಟ್ಟಿ ರೈತರಲ್ಲಿ ಬಹಳಷ್ಟು ಮಂದಿ ಕಬ್ಬು ಬೆಳೆಯುತ್ತಾರೆ. ಗದ್ದೆಗಳಿಂದ ಕಾರ್ಖಾನೆಗಳಿಗೆ ಸಾಗಿಸಲು ಉತ್ತಮ ರಸ್ತೆ ಬೇಕು. ಆದರೆ, ರಸ್ತೆಗಳು ತೀವ್ರ ಹಾಳಾಗಿವೆ. ಮಳೆ ಬಂದಾಗ ಕೆಸರು ಗದ್ದೆಯಂತಾಗುತ್ತವೆ.

‘ಮುನವಳ್ಳಿ ಸಕ್ಕರೆ ಕಾರ್ಖಾನೆ ಮತ್ತಿತರ ಕಡೆಗಳಿಗೆ ಕಬ್ಬು ಸಾಗಿಸಲು ಸರ್ಕಸ್ ಮಾಡಿಕೊಂಡು ಹೋಗಬೇಕಾದ ಸ್ಥಿತಿ ಇದೆ. ಕಬ್ಬು ತುಂಬಿದ ಟ್ರ್ಯಾಕ್ಟರ್ ಎಳೆಯಲು ಇನ್ನೊಂದು ಟ್ರ್ಯಾಕ್ಟರ್‌ ಜೋಡಿಸಬೇಕು. ಡೀಸೆಲ್ ಬೆಲೆ ಗಗನಕ್ಕೇರಿರುವುದರಿಂದ ಹೊರೆ ಆಗುತ್ತಿದೆ. ಜಮೀನುಗಳ ರಸ್ತೆ ಸುಧಾರಣೆಗೆ ಸಂಬಂಧಿಸಿದವರು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂಬ ಅಸಮಾಧಾನ ತೋರಣಗಟ್ಟಿಯ ರೈತ ಗಣಪತಿ ಮುನವಳ್ಳಿ ಅವರದು.

ಖಾನಾಪುರ: ತಾಲ್ಲೂಕಿನ ಅವರೊಳ್ಳಿ, ಕಡತನ ಬಾಗೇವಾಡಿ ಮತ್ತು ತೋಲಗಿ ಗ್ರಾಮಗಳ ರೈತರು ತಮ್ಮ ಕೃಷಿ ಜಮೀನುಗಳಿಗೆ ತೆರಳಲು ಬಳಸುತ್ತಿದ್ದ  ರಸ್ತೆಯಲ್ಲಿ ಸಂಚಾರಕ್ಕೆ ಕೆಲವು ರೈತರು ತಡೆ ಒಡ್ಡಿದ್ದರು. ಇದನ್ನು ಅವರೊಳ್ಳಿ ರೈತರು ತಾಲ್ಲೂಕು ಆಡಳಿತದ ಗಮನಕ್ಕೆ ತಂದಿದ್ದರು. ಹಿಂದಿನ ಎಸಿ ರಾಜಶ್ರೀ ಜೈನಾಪುರೆ ಮತ್ತು ಖಾನಾಪುರ ತಹಶೀಲ್ದಾರ್‌ ಶಿವಾನಂದ ಉಳ್ಳೇಗಡ್ಡಿ ಸ್ಥಳಕ್ಕೆ ಬಂದು ರಸ್ತೆ ನಿರ್ಮಿಸುವ ಮೂಲಕ ರೈತರ ಸಮಸ್ಯೆ ಇತ್ಯರ್ಥಪಡಿಸಿದ್ದರು.

ಅಭಿವೃದ್ಧಿಗೆ ಕ್ರಮ

ರಾಮದುರ್ಗ: ತಾಲ್ಲೂಕಿನ 37 ಪಂಚಾಯ್ತಿಗಳಲ್ಲೂ ಹೊಲಗಳಿಗೆ ಸಂಪರ್ಕ ನೀಡುವ ರಸ್ತೆಗಳ ಸಮಸ್ಯೆ ತೀವ್ರವಾಗಿ ಕಾಡುತ್ತಿತ್ತು. ಅಭಿವೃದ್ಧಿ ಕಾಣದೆ ರೈತರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಹೊಲಗಳ ರಸ್ತೆಗಳ ಅಭಿವೃದ್ಧಿಗೆ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ‘ನಮ್ಮ ಹೊಲ ನಮ್ಮ ದಾರಿ’ ಯೋಜನೆಯಲ್ಲಿ ಗ್ರಾಮ ಪಂಚಾಯ್ತಿಗಳು ರಸ್ತೆ ಅಭಿವೃದ್ಧಿಪಡಿಸಿವೆ. ಯೋಜನೆಯಡಿ ಪಂಚಾಯ್ತಿಗಳು ತಲಾ 6–7 ರಸ್ತೆಗಳನ್ನು ಅಭಿವೃದ್ಧಿಪಡಿಸಿವೆ ಎನ್ನುತ್ತಾರೆ ಅಧಿಕಾರಿಗಳು.

ಯಶಸ್ವಿಯಾಗಿಲ್ಲ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾರಿಯಾದ ‘ನಮ್ಮ ಹೊಲ ನಮ್ಮ ದಾರಿ’ ಯೋಜನೆಯಿಂದ ತಾಲ್ಲೂಕಿನ ರೈತರು ನಿಟ್ಟುಸಿರು ಬಿಟ್ಟಿದ್ದರು. ತಕರಾರುಗಳಿಗೆ ಮತ್ತು ಸಮಸ್ಯೆಗಳಿಗೆ ಪರಿಹಾರ ಸಿಗಬಹುದೆಂದು ಆಶಿಸಿದ್ದರು. ಆದರೆ, ಯೋಜನೆ ನಿರೀಕ್ಷಿದಷ್ಟು ಯಶಸ್ವಿಯಾಗಿಲ್ಲ. ಕೆಲವೆಡೆ ದುರಸ್ತಿ ಮಾಡಲಾಗಿದೆ. ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಕೆಲವೆಡೆ ತಕರಾರುಗಳು ಅಡ್ಡಿಯಾಗಿವೆ. ಅಲ್ಲಲ್ಲಿ ಭೂ ಮಾಲೀಕರು ದಾರಿಗೆ ಜಾಗ ಕೊಡುವುದಕ್ಕೆ ಒಪ್ಪದಿರುವುದು ಕಂಡುಬಂದಿದೆ.

‘ನಮ್ಮ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿತ್ತು. ನಮ್ಮ ಹೊಲ ನಮ್ಮ ದಾರಿ ಯೋಜನೆಯಲ್ಲಿ ಸುಧಾರಿಸಿದ್ದರಿಂದ ಅನುಕೂಲವಾಗಿದೆ’ ಎಂದು ಜಲಾಲಪೂರ ಗ್ರಾಮದ ರೈತ ಬಾಬು ಡಾಂಗೆ ತಿಳಿಸಿದರು.

***

ಹಳ್ಳ ಹಿಡಿದಿದೆ

ಹಲವೆಡೆ ಕಳಪೆ ಕಾಮಗಾರಿ ಮಾಡಿದ್ದಾರೆ. ಅಧಿಕಾರಿಗಳಿಂದ ಹಾರಿಕೆ ಉತ್ತರ ಬರುತ್ತಿದೆ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುತ್ತೇವೆ ಎನ್ನುತ್ತಾರೆ. ಒಟ್ಟಾರೆ ಜಮೀನುಗಳ ರಸ್ತೆಗಳ ಯೋಜನೆ ಹಳ್ಳ ಹಿಡಿದಿದೆ. ಕೃಷಿ ಉತ್ಪನ್ನಗಳ ಸಾಗಣೆಗೆ ತೀವ್ರ ತೊಂದರೆಯಾಗಿದೆ. ಪರಿಸ್ಥಿತಿ ಯಾವಾಗ ಸುಧಾರಿಸುವುದೋ?

–ಸಿದಗೌಡ ಮೋದಗಿ, ಅಧ್ಯಕ್ಷ, ಭಾರತೀಯ ಕೃಷಿಕ ಸಮಾಜ (ಸಂಯುಕ್ತ)

ಅಧಿಕಾರಿಗಳು ಗಮನಹರಿಸಲಿ

ಗುತ್ತಿಗೆದಾರರು ಕಾಟಾಚಾರಕ್ಕೆ ರಸ್ತೆ ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ಮಾನದಂಡಗಳನ್ನು ಅನುಸರಿಸುತ್ತಿಲ್ಲ. ಅಧಿಕಾರಿಗಳು ಇತ್ತ ಗಮನಹರಿಸಿದರೆ ಹೊಲಗಳ ರಸ್ತೆಗಳು ಸುಧಾರಣೆ ಕಾಣುತ್ತವೆ.

–ಕಿರಣ ಯಲಿಗಾರ, ಮುನವಳ್ಳಿ

ಅನುಕೂಲವಾಗಿದೆ

‘ನಮ್ಮ ಹೊಲ ನಮ್ಮ ದಾರಿ’ ಯೋಜನೆಯಿಂದ ರೈತರಿಗೆ ಅನುಕೂಲವಾಗಿದೆ. ಕೃಷಿ ಉತ್ಪನ್ನಗಳನ್ನು ಸಾಗಿಸಲು ನೆರವಾಗಿದೆ. ಮುಂದೆ ಸಮಸ್ಯೆ ಎದುರಾದರೆ ಕ್ರಿಯಾ ಯೋಜನೆ ರೂಪಿಸಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು.

–ಮುರಳೀಧರ ದೇಶಪಾಂಡೆ, ಇಒ, ತಾ.ಪಂ., ರಾಮದುರ್ಗ

(ಪ್ರಜಾವಾಣಿ ತಂಡ: ಸುಧಾಕರ ತಳವಾರ, ಪ್ರಸನ್ನ ಕುಲಕರ್ಣಿ, ಚನ್ನಪ್ಪ ಮಾದರ, ಬಸವರಾಜ ಶಿರಸಂಗಿ, ಆನಂದ ಮನ್ನಿಕೇರಿ, ಪರಶುರಾಮ ನಂದೇಶ್ವರ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.