ಗುರುವಾರ , ಏಪ್ರಿಲ್ 2, 2020
19 °C

ರಾವುತ್‌ ಹೇಳಿಕೆ ಖಂಡಿಸದ ರಾಜ್ಯ ಸರ್ಕಾರ: ಅಶೋಕ ಚಂದರಗಿ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಗಡಿಭಾಗದಲ್ಲಿಯ ಮರಾಠಿಗರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಸುಳ್ಳು ಹೇಳಿಕೆ ನೀಡಿದ ಶಿವಸೇನಾ ವಕ್ತಾರ, ರಾಜ್ಯಸಭಾ ಸದಸ್ಯ ಸಂಜಯ ರಾವುತ್‌ ಅವರಿಗೆ ಎದಿರೇಟು ನೀಡುವಂತ ಯಾವ ಕೆಲಸವನ್ನೂ ರಾಜ್ಯ ಸರ್ಕಾರ ಇದುವರೆಗೆ ಮಾಡಿಲ್ಲ. ಗಡಿಭಾಗದ ಬಗ್ಗೆ ದಿವ್ಯನಿರ್ಲಕ್ಷ್ಯ ತೋರಿದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಕಿಡಿಕಾರಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ರಾವುತ್‌ ಹೇಳಿಕೆಯನ್ನು ಖಂಡಿಸಿ, ಇದುವರೆಗೆ ಸ್ಥಳೀಯ ಜನಪ್ರತಿನಿಧಿಗಳೂ ತುಟಿಬಿಚ್ಚಿಲ್ಲ. ಅನಿವಾರ್ಯವಾಗಿ ಕನ್ನಡ ಸಂಘಟನೆಗಳೇ ವಿರೋಧ ಮಾಡಬೇಕಾದಂತಹ ಪರಿಸ್ಥಿತಿ ಎದುರಾಗಿದೆ’ ಎಂದು ಹೇಳಿದ್ದಾರೆ.

‘ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಗಳನ್ನು ರಕ್ಷಿಸಲಾಗುತ್ತಿದೆ ಎಂದು ಅವರು ನೀಡಿರುವ ಹೇಳಿಕೆಯೂ ಸತ್ಯಕ್ಕೆ ದೂರವಾದುದು. ಅಲ್ಲಿನ ಸರ್ಕಾರವು ಕನ್ನಡ ಶಾಲೆಗಳನ್ನು ಮುಚ್ಚಿಸಲು ವ್ಯವಸ್ಥಿತವಾಗಿ ಪ್ರಯತ್ನ ಮಾಡಿಕೊಂಡು ಬರುತ್ತಿದ್ದು, ನೂರಾರು ಸಂಖ್ಯೆಯಲ್ಲಿದ್ದ ಕನ್ನಡ ಶಾಲೆಗಳ ಸಂಖ್ಯೆ ಇಂದು ಕೇವಲ 55ಕ್ಕೆ ಬಂದು ತಲುಪಿದೆ’ ಎಂದರು.

‘ರಾಜ್ಯದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸೊಲ್ಲಾಪುರ, ಜತ್ತ ಹಾಗೂ ಅಕ್ಕಲಕೋಟೆಯಲ್ಲಿ ಕೇವಲ 55 ಕನ್ನಡ ಶಾಲೆಗಳಿವೆ. ಇವುಗಳಿಗೆ ಹೋಲಿಸಿದರೆ ಬೆಳಗಾವಿ ಹಾಗೂ ಖಾನಾಪೂರ ತಾಲ್ಲೂಕುಗಳಲ್ಲಿ ಒಟ್ಟು 397 ಮರಾಠಿ ಪ್ರಾಥಮಿಕ ಶಾಲೆಗಳು ಹಾಗೂ 123 ಮರಾಠಿ ಪ್ರೌಢಶಾಲೆಗಳಿವೆ. ಈ ಪ್ರಮಾಣವನ್ನು ಗಮನಿಸಿದರೆ ಯಾವ ಸರ್ಕಾರ ಭಾಷಾ ಸೌಹಾರ್ದತೆಯನ್ನು ಮೆರೆದಿದೆ ಎನ್ನುವುದು ಗೊತ್ತಾಗುತ್ತದೆ’ ಎಂದು ಟಾಂಗ್‌ ನೀಡಿದ್ದಾರೆ.

‘ಕರ್ನಾಟಕ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ನಡುವೆ ಮಾತುಕತೆ ಏರ್ಪಡಿಸಲು ತಾವು ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿಕೆ ನೀಡಿರುವ ರಾವುತ್‌ ತಮ್ಮ ಮಾತಿಗೆ ಬದ್ಧರಾಗಿರಬೇಕು. ಉಭಯ ರಾಜ್ಯಗಳ ಮಧ್ಯೆ, ಗಡಿವಿವಾದ ಹೊರತಾಗಿಯೂ, ಅನೇಕ ವಿಷಯಗಳ ಸಂಬಂಧ ಸೌಹಾರ್ದ ವಾತಾವರಣವನ್ನು ನಿರ್ಮಿಸುವ ಅವಶ್ಯಕತೆಯನ್ನು ಅವರು ಅರಿತಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ಗಡಿವಿವಾದವನ್ನು ಕೇಂದ್ರ ಗೃಹ ಸಚಿವರು ಬಗೆಹರಿಸಬೇಕೆಂದು ಒತ್ತಾಯಿಸಿರುವ ರಾವುತ್‌ ಅವರು, ಸುಪ್ರೀಂ ಕೋರ್ಟ್ ಮುಂದಿರುವ ಗಡಿವಿವಾದ ಪ್ರಕರಣದಲ್ಲಿ ರಾಜ್ಯದ ಪರ ವಾದಿಸಲು ಖ್ಯಾತ ವಕೀಲ ಹರೀಶ ಸಾಳ್ವೆ ಅವರನ್ನು ನೇಮಿಸಲಾಗಿದೆಯೆಂದೂ ಹೇಳುತ್ತಾರೆ. ಅವರ ಹೇಳಿಕೆಗಳಲ್ಲಿಯೇ ದ್ವಂದ್ವವಿದೆ. ನ್ಯಾಯಾಲಯದ ಹೊರಗೆಗಡಿವಿವಾದವನ್ನು ಬಗೆಹರಿಸುವ ಇರಾದೆ ರಾವುತ್‌ ಹಾಗೂ ಅವರ ಸರ್ಕಾರಕ್ಕೆ ಇದ್ದಲ್ಲಿ ಸುಪ್ರೀಂ ಕೋರ್ಟಿನಲ್ಲಿ ದಾಖಲಿಸಿರುವ ಪ್ರಕರಣವನ್ನು ಈ ಕೂಡಲೇ ವಾಪಸ್ ಪಡೆಯಲಿ’ ಎಂದು ಒತ್ತಾಯಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು