ಮಂಗಳವಾರ, ಮೇ 11, 2021
28 °C

ನಮ್ಮ ಹೋರಾಟ ಕನ್ನಡಿಗರ ವಿರುದ್ಧ ಅಲ್ಲ: ಸಂಜಯ್‌ ರಾವುತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ನಮ್ಮ ಹೋರಾಟ ಸರ್ಕಾರ ಅಥವಾ ಗಡಿಯಲ್ಲಿರುವ ಕನ್ನಡಿಗರ ವಿರುದ್ಧ ಅಲ್ಲ. ನ್ಯಾಯಕ್ಕಾಗಿ ಮತ್ತು ನಮ್ಮ ಅಸ್ಮಿತೆ ಕಾಪಾಡಿಕೊಳ್ಳುವುದಕ್ಕಾಗಿ ಹೋರಾಡುತ್ತಿದ್ದೇವೆ’ ಎಂದು ಶಿವಸೇನಾ ನಾಯಕ ಸಂಜಯ ರಾವುತ್ ಹೇಳಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಶಿವಸೇನಾ ಬೆಂಬಲಿತ ಅಭ್ಯರ್ಥಿ ಶುಭಂ ಸೆಳಕೆ ಪರವಾಗಿ ‍ಪ್ರಚಾರ ನಡೆಸಲು ಬುಧವಾರ ಬಂದಿದ್ದ ಅವರು ಸಾಂಬ್ರಾ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.

‘ಮರಾಠಿ ಭಾಷಿಗರಾದ ನಾವು ಹಿಂದುತ್ವಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ’ ಎಂದರು.

ಓದಿ: 

‘ಈ ಚುನಾವಣೆಯಲ್ಲಿ ಶಿವಸೇನಾ ಹಾಗೂ ಎಂಇಎಸ್‌ನಿಂದ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ಅಭ್ಯರ್ಥಿಗೆ ಶಕ್ತಿ ತುಂಬುವುದು ನಮ್ಮ ಕರ್ತವ್ಯ. ಇದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಮಹಾರಾಷ್ಟ್ರದಲ್ಲಿ ಕುಳಿತು ಮಾತನಾಡುವುದಿಲ್ಲ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸೂಚನೆ ಹಿನ್ನೆಲೆಯಲ್ಲಿ ಎಂಇಎಸ್ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ನೀಡಿದ್ದೇವೆ. ನಮ್ಮ ಅಭ್ಯರ್ಥಿ 50ಸಾವಿರ ಮತ ಪಡೆಯುವುದು ಕೂಡ ಅನುಮಾನ ಎನ್ನುವ ಸ್ಥಿತಿ ಇತ್ತು. ಆದರೆ, ಈಗ ಗೆಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್ ಮತ್ತು ಬಿಜೆಪಿಯವರು ಹೆಚ್ಚಿನ ಶಕ್ತಿ ಉಪಯೋಗ ಮಾಡುತ್ತಿದ್ದಾರೆ. ನಮ್ಮ ಅಭ್ಯರ್ಥಿ ಪ್ರಬಲ‌ ಪೈಪೋಟಿ ಕೊಡುತ್ತಿದ್ದಾರೆ. ಈ ಚುನಾವಣೆ ಬಗ್ಗೆ ಮಹಾರಾಷ್ಟ್ರ ನಿರೀಕ್ಷೆ ಬಹಳ ಇದೆ’ ಎಂದು ತಿಳಿಸಿದರು.

‘ನಮ್ಮ ಅಭ್ಯರ್ಥಿ ಪ್ರಚಾರದ ವೇಳೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಮೊಬೈಲ್ ಫೋನ್‌ ಟಾರ್ಚ್, ಮೊಂಬತ್ತಿ ಬೆಳಕು ಸಾಮಾನ್ಯ ಬೆಳಕಲ್ಲ. ನಾವು ಪಾಕಿಸ್ತಾನ ಅಥವಾ ಲಷ್ಕರ್–ಎ–ತೊಯ್ಬಾದವರಲ್ಲ. ರಾಷ್ಟ್ರ ಮತ್ತು ಹಿಂದುತ್ವದ ಭಕ್ತರು ನಾವು. ನಮ್ಮನ್ನು ತಡೆಯುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಗಡಿ ಹೋರಾಟದಲ್ಲಿ ಹುತಾತ್ಮರಾದವರಿಗೆ ಆತ್ಮಕ್ಕೆ ಶಾಂತಿ ದೊರಕಿಸಲು ಹೋರಾಡುತ್ತಿದ್ದೇವೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು