ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮೇಶಣ್ಣ ಏನೇನ್ ನಡೆಸ್ತಾರೆ ಇಡೀ ಕರ್ನಾಟಕ ನೋಡ್ತಿದೆ: ಸಂಜಯ ಪಾಟೀಲ

Last Updated 25 ಅಕ್ಟೋಬರ್ 2020, 10:18 IST
ಅಕ್ಷರ ಗಾತ್ರ

ಬೆಳಗಾವಿ: ‘ರಮೇಶಣ್ಣ (ಜಲಸಂಪನ್ಮೂಲ ಸಚಿವ) ಬರೇ ತಲೆ ನಡೆಸುವುದಿಲ್ಲ. ಏನೇನ್ ನಡೆಸುತ್ತಾರೆ ಎನ್ನುವುದನ್ನು ಇಡೀ ಕರ್ನಾಟಕವೇ ನೋಡುತ್ತಿದೆ’ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.

ಜಿಲ್ಲೆಯ ಗೋಕಾಕದಲ್ಲಿ ಭಾನುವಾರ ನಡೆದ ಬಿಜೆಪಿ ಗೋಕಾಕ ನಗರ ಹಾಗೂ ಗ್ರಾಮೀಣ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪದಾಧಿಕಾರಿಗಳಿಗೆ ಅಧಿಕಾರ ನೀಡುವ ದಿನವನ್ನೂ ಬಹಳ ಲೆಕ್ಕಾಚಾರ ಮಾಡಿ ಆಯುಧ ಪೂಜೆಯಂದು ಇಟ್ಟಿದ್ದಾರೆ. ಕಾರ್ಯಕ್ರಮಕ್ಕಾಗಿ ಮೂರು ತಿಂಗಳು ಬೆನ್ನು ಹತ್ತಿದ್ದೆ. ಯಾವ ದಿವಸ ಕೊಡಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. ದಸರೆಯ ಶುಭ ದಿನದಂದು ಅಧಿಕಾರ ನೀಡಿದ್ದಾರೆ. ರಾಮನ ಕೆಲಸ ಮುಂದುವರಿಸಿಕೊಂಡು ಹೋಗಿ ಎಂದಿದ್ದಾರೆ’ ಎಂದರು.

‘ರಾವಣನ ಅಂತ್ಯ ಎಂದರೆ ಅಹಂಕಾರದ ಅಂತ್ಯ. ರಾವಣನ ಇತಿಹಾಸವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಅವನು ಅಷ್ಟು ಕೆಟ್ಟವನಾಗಿರಲಿಲ್ಲ. ದೇವರನ್ನು ಗೆದ್ದಿದ್ದ ಮನುಷ್ಯ. ಬಹಳ ಶಕ್ತಿವಂತ. ಶಿವನ ಭಕ್ತ. ಆದರೆ ಅಹಂಕಾರ ಬಂದು ಬಿಟ್ಟಿತು. ಸೀತೆ ಅಪಹರಣ ಮಾಡಿ ತಪ್ಪು ಮಾಡಿದ. ಮರ್ಯಾದಾ ಪುರುಷೋತ್ತಮ ರಾಮನ ವಿರುದ್ಧ ಸೋತ. ಹೀಗಾಗಿ ರಾವಣನ ಹೆಸರನ್ನು ಯಾರೂ ಇಟ್ಟುಕೊಳ್ಳುವುದಿಲ್ಲ. ಏಕೆಂದರೆ ಅದು ಅಹಂಕಾರದ ಸಂಕೇತ ಹಾಗೂ ಕೆಟ್ಟದರ ಪ್ರತೀಕ’ ಎಂದರು.

‘ದೇವರ ಮೂರ್ತಿ ಮೇಲೆ ಹಾಕಿದ ಹೂಮಾಲೆ ಪ್ರಸಾದವಾಗುತ್ತದೆ. ಅದನ್ನು ಪಡೆಯಲು ಎಲ್ಲರೂ ಮುಗಿ ಬೀಳುತ್ತಾರೆ. ಕೇವಲ ಹೂವಿಗೂ ಪ್ರಸಾದಕ್ಕೂ ವ್ಯತ್ಯಾಸವಿದೆ. ಪ್ರಸಾದಕ್ಕಾಗಿ ಪೂಜಾರಿ ಬೆನ್ನು ಹತ್ತುತ್ತೇವೆ. ಅದೇ ಹೂವು. ಪರಿಮಳದಲ್ಲಿ ವ್ಯತ್ಯಾಸವಿಲ್ಲ. ಆದರೆ ದೇವರಿಗೆ ಮುಡಿಸಿದ ಮೇಲೆ ಅದರ ಮೌಲ್ಯ ಜಾಸ್ತಿಯಾಗುತ್ತದೆ. ಹಾಗೆಯೇ ರಮೇಶ ಜಾರಕಿಹೊಳಿ ಅವರು ಈಗ ರಾಮನ ಗುಡಿಗೆ (ಬಿಜೆಪಿ) ಬಂದು ಪ್ರಸಾದವಾಗಿದ್ದಾರೆ ಎನ್ನುವುದು ನನ್ನ ಭಾವನೆ. ಕಾಂಗ್ರೆಸ್‌ನಲ್ಲಿ ಇರುವವರೆಗೂ ಅವರಿಗೆ ಅದೇ ಶಕ್ತಿ ಇತ್ತು. ಹೂವಷ್ಟೇ ಇದ್ದರು. ಆದರೆ, ಬಿಜೆಪಿಗೆ ಬಂದ ಮೇಲೆ ಪ್ರಸಾದವಾಗಿದ್ದಾರೆ’ ಎಂದು ಹೋಲಿಸಿದರು.

‘ಗೋಕಾಕದಲ್ಲಿ ಬಿಜೆಪಿ ಧ್ವಜ ಈಗ ರಾರಾಜಿಸುತ್ತಿದೆ. ಏನಾದರೂ ತೀರ್ಮಾನ ಮಾಡಿದರೆ ಅವರು ತಲುಪುವವರೆಗೂ ಬಿಡುವುದಿಲ್ಲ. ನಾಡಿನ ಧರ್ಮ ಹಾಗೂ ಸಂಸ್ಕೃತಿ ಉಳಿಸುವ ಬಿಜೆಪಿಯನ್ನು ಬೆಳೆಸಬೇಕು ಎಂದು ಇಲ್ಲಿದ್ದಾರೆ’ ಎಂದರು.

‘ನಮ್ಮ ಪಕ್ಷದಲ್ಲಿ ಕಾರ್ಯಕರ್ತರನ್ನು ಗುರುತಿಸುತ್ತಾರೆ. ಪದಾಧಿಕಾರಿಗಳು, ಜನಪ್ರತಿನಿಧಿಗಳು ಮಾಜಿಗಳಾಗಬಹುದು. ಕಾರ್ಯಕರ್ತರು ಮಾಜಿ ಆಗುವುದಿಲ್ಲ. ಸಚಿವ ರಮೇಶ ಜಾರಕಿಹೊಳಿ- ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಈಗ ಜೋಡಿಯಾಗಿದ್ದಾರೆ. ಅವರ ರಥವನ್ನು ನಿಲ್ಲಿಸುವ ಗಂಡಸರು ಈ ಭಾಗದಲ್ಲಿ ಯಾರೂ ಇಲ್ಲ’ ಎಂದರು.

‘ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಕಚೇರಿ ಬೆಳಗಾವಿಯಲ್ಲಿ ಇಲ್ಲ. ಈ ಕೊರತೆ ನಿವಾರಿಸಲು ₹ 1 ಕೋಟಿ ಕೊಡುತ್ತೇನೆ. ಕಟ್ಟಡ ಕಟ್ಟೋಣ ಎಂದು ಸಚಿವರು ಹೇಳಿದ್ದಾರೆ. ಬೆಳಗಾವಿ ನಗರದಲ್ಲಿ ಕಾಂಗ್ರೆಸ್ ಕಚೇರಿಯನ್ನೂ ಅವರು ಕಟ್ಟಲು ಆರಂಭಿಸಿದ್ದರು. ಈಗ ಯಾರಾರೋ ಬಂದು ಕೂರುತ್ತಿದ್ದಾರೆ’ ಎಂದು ಸಂಜಯ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT