ಬುಧವಾರ, ಮೇ 18, 2022
28 °C
‘ನನ್ನ ಸಾವಿಗೆ ಈಶ್ವರಪ್ಪ ಕಾರಣ’ ಎಂದು ಉಲ್ಲೇಖ

ಶೇ 40ರಷ್ಟು ಕಮಿಷನ್: ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಸಂತೋಷ ಪಾಟೀಲ ನಾಪತ್ತೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಈಚೆಗೆ ಶೇ 40ರಷ್ಟು ಕಮಿಷನ್ ಆರೋಪ ಮಾಡಿ ಸುದ್ದಿಯಾಗಿದ್ದ ತಾಲ್ಲೂಕಿನ‌ ಹಿಂಡಲಗಾ ಗ್ರಾಮದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತರೂ ಆಗಿರುವ ಸಂತೋಷ್ ಪಾಟೀಲ‌ ಮಾಧ್ಯಮ ಪ್ರತಿನಿಧಿಗಳಿಗೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸ್ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದಾರೆ. ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಪ್ರಕರಣ ತಿರುವು ಪಡೆದುಕೊಂಡಿದೆ.

‘ನನ್ನ ಸಾವಿಗೆ ಸಚಿವ ಕೆ.ಎಸ್. ಈಶ್ವರಪ್ಪ ಕಾರಣ’ ಎಂದು ಉಲ್ಲೇಖಿಸಿದ್ದಾರೆ.

‘ಸಚಿವರಿಗೆ ಶಿಕ್ಷೆಯಾಗಬೇಕು. ನನ್ನೆಲ್ಲ ಆಸೆ ಬದಿಗೊತ್ತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ, ಮಕ್ಕಳಿಗೆ ಪ್ರಧಾನಿ, ಮುಖ್ಯಮಂತ್ರಿ , ಬಿ.ಎಸ್. ಯಡಿಯೂರಪ್ಪ ಸಹಾಯ ಮಾಡಬೇಕು’ ಎಂದು ಬರೆದಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ವಿಚಾರ ತಿಳಿದು ಪೊಲೀಸರು ಸಂತೋಷ ಅವರ ಹುಡುಕಾಟದಲ್ಲಿ ತೊಡಗಿದ್ದಾರೆ. ಹಿಂಡಲಗಾ ಗ್ರಾಮಕ್ಕೆ‌ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಹಲವು ದಿನಗಳಿಂದ ಅವರು ಹಾಗೂ ಅವರ ಕುಟುಂಬದವರು ಮನೆಯಲ್ಲಿ ಇಲ್ಲ ಎಂದು ನೆರೆ ಮನೆಗಳವರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಂತೋಷ್ ಪಾಟೀಲ‌ ಅವರ ಮೊಬೈಲ್ ಫೋನ್ ‌ರಿಂಗ್ ಆಗುತ್ತಿದೆ. ಆದರೆ ಸ್ವೀಕರಿಸುತ್ತಿಲ್ಲ.‌ ಆ ಫೋನ್ ಸಂಖ್ಯೆಯ ‌ಲೊಕೇಷನ್ ಉಡುಪಿ ವ್ಯಾಪ್ತಿಯಲ್ಲಿರುವುದಾಗಿ ಬರುತ್ತಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ರವೀಂದ್ರ ‌ಗಡಾದಿ, ಮಾಧ್ಯಮದ ಮೂಲಕ ವಿಷಯ ಗಮನಕ್ಕೆ ‌ಬಂದಿದೆ. ಮನೆಗೆ ಭೇಟಿ‌ ನೀಡಿ ವರದಿ ಕೊಡುವಂತೆ ವ್ಯಾಪ್ತಿಯ ಪೊಲೀಸರಿಗೆ ‌ಸೂಚಿಸಿದ್ದೇನೆ. ಸಂತೋಷ್ ಹಾಗೂ‌ ಕುಟುಂಬದವರು‌ ಮಂಗಳೂರು‌ ಕಡೆಗೆ ಪ್ರವಾಸ ಹೋಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.

ತಮ್ಮ‌ ವಿರುದ್ಧದ ಆರೋಪವನ್ನು ತಳ್ಳಿ ಹಾಕಿದ್ದ ಸಚಿವ ಈಶ್ವರಪ್ಪ ಅವರು, ಸಂತೋಷ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದರು.

ಓದಿ...  ಶೇ 40ರಷ್ಟು ಕಮಿಷನ್: ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಸಂತೋಷ ಪಾಟೀಲ ಆತ್ಮಹತ್ಯೆ


ಕೆಲವರಿಗೆ ಸಂತೋಷ‌ ಕಳುಹಿಸಿದ್ದಾರೆ ಎನ್ನಲಾದ ಸಂದೇಶ

ಓದಿ... ಚಾಮುಂಡಿ ಬೆಟ್ಟ: ಕುಮಾರಸ್ವಾಮಿ -ಈಶ್ವರಪ್ಪ ಭೇಟಿ, ಉಭಯ ಕುಶಲೋಪರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು